logo

ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ: ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ ಕೆ.ಆರ್.ಐ.ಡಿ.ಎಲ್. ಪ್ರಗತಿ ಪರಿಶೀಲನಾ ಸಭೆ ಬೆಳಗಾವಿ: ಕೆ.ಆರ್.ಐ.ಡಿ.ಎಲ್. (ಕರ್ನಾಟಕ ರೂರಲ್ ಇನ್

ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ: ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ

ಕೆ.ಆರ್.ಐ.ಡಿ.ಎಲ್. ಪ್ರಗತಿ ಪರಿಶೀಲನಾ ಸಭೆ

ಬೆಳಗಾವಿ: ಕೆ.ಆರ್.ಐ.ಡಿ.ಎಲ್. (ಕರ್ನಾಟಕ ರೂರಲ್ ಇನ್ಪಾಸ್ಟ್ರಕ್ಚರ್ ಡೆವಲಪಮೆಂಟ್ ಲಿಮಿಟೆಡ್) ವತಿಯಿಂದ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮಾನ್ಯ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆ ಅವರು ಸೂಚನೆ ನೀಡಿದರು.

ನಗರದ ಕೆ.ಆರ್.ಐ.ಡಿ.ಎಲ್. ವಲಯ ಕಚೇರಿಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ನಿಯಮಾನುಸಾರ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸೂಚಿಸಿದರು.

ಅನುಮೋದನೆ ಆಗಿದ್ದರು ಕೂಡ ಇನ್ನೂ ಆರಂಭವಾಗದ ಕಾಮಗಾರಿಗಳಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಮೊದಲ ಆದ್ಯತೆ ನೀಡಿ ಭೇಟಿ ನೀಡಬೇಕು. ಕಾಮಗಾರಿಗಳು ಆರಂಭವಾಗದಿರಲು ಇರುವ ಕಾರಣಗಳ ಬಗ್ಗೆ ತಿಳಿದುಕೊಂಡು, ಅವುಗಳನ್ನು ಇತ್ಯರ್ಥಪಡಿಸಿಕೊಂಡು ತ್ವರಿತವಾಗಿ ಕಾಮಗಾರಿ ಆರಂಭಿಸಬೇಕು ಎಂದು ನಿರ್ದೇಶನ ನೀಡಿದರು.

ಗುಣಮಟ್ಟದ ಕಾಮಗಾರಿ ಕೈಗೊಳ್ಳಿ:
ಕಾಮಗಾರಿಗಳ ಉದ್ಘಾಟನೆ ಸಂದರ್ಭದಲ್ಲಿ ಅಳವಡಿಸುವ ಶಿಲಾಫಲಕಗಳಲ್ಲಿ ಕಡ್ಡಾಯವಾಗಿ ನಿಯಮಾನುಸಾರ (ಪ್ರೋಟೋಕಾಲ್) ಸಂಬಂಧಪಟ್ಟವರ ಹೆಸರುಗಳನ್ನು ಬರೆಸಬೇಕು. ಸಾರ್ವಜನಿಕರಿಂದ ದೂರುಗಳು ಬಾರದಂತೆ ಸಮರ್ಪಕ ಹಾಗೂ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಎಂದು ಸೂಚನೆ ನೀಡಿದರು.

ಗ್ರಾಮ ವಿಕಾಸ ಯೋಜನೆ, ಮಲೆನಾಡು ಅಭಿವೃದ್ಧಿ ಯೋಜನೆ, ಬಯಲುಸೀಮೆ ಅಭಿವೃದ್ಧಿ ಯೋಜನೆ ಸೇರಿ ವಿವಿಧ ಯೋಜನೆಗಳಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಕುರಿತು ಮಾಹಿತಿ ಪಡೆದು, ಪ್ರಗತಿ ಸಾಧಿಸಲು ನಿರ್ದೇಶನ ನೀಡಿದರು.

ಸಭೆಯಲ್ಲಿ ಮಾನ್ಯ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳಾದ (ಅಭಿವೃದ್ಧಿ) ಶ್ರೀ ಬಸವರಾಜ ಅಡವಿಮಠ, ಮಾನ್ಯ ಕೆ.ಆರ್.ಐ.ಡಿ.ಎಲ್. ಅಧೀಕ್ಷಕ ಅಭಿಯಂತರರಾದ ಸಿದ್ಧಾರ್ಥ ಎಸ್., ಮಾನ್ಯ ಬೆಳಗಾವಿ ಕಾರ್ಯಪಾಲಕ ಅಭಿಯಂತರರಾದ ಶ್ರೀ ಎಸ್.ಬಿ. ಶೇಗುಣಸಿ, ಮಾನ್ಯ ಚಿಕ್ಕೋಡಿ ಕಾರ್ಯಪಾಲಕ ಅಭಿಯಂತರರಾದ ಶ್ರೀಮತಿ ಆರ್.ಪಿ. ನಾರಾಯಣಕರ್ ಸೇರಿ ಎಲ್ಲ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರರು ಹಾಗೂ ಇನ್ನಿತರ ಸಿಬ್ಬಂದಿ ಹಾಜರಿದ್ದರು.
#

0
35 views