ಕವನ ವಾಚನ, ಪರಿಸರ ಗೀತೆ ಗಾಯನ, ಸಾರ್ವಜನಿಕರಿಗೆ ಸಸಿ ವಿತರಣೆ
ನಗರದಲ್ಲಿ ಪರಿಸರ ಜಾಗೃತಿ ಪಾದಯಾತ್ರೆ
ಬೀದರ್: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಡವಾದದ ಜೀವನ ಪ್ರಕಾಶ ಕಲ್ಚರಲ್ ಆ್ಯಂಡ್ ವೆಲ್‍ಫೇರ್ ಸೋಸೈಟಿ ವತಿಯಿಂದ ನಗರದಲ್ಲಿ ಶುಕ್ರವಾರ ಪರಿಸರ ಜಾಗೃತಿ ಪಾದಯಾತ್ರೆ ನಡೆಸಲಾಯಿತು.
ಸಂಸ್ಥೆಯ ಅಧ್ಯಕ್ಷ ದಿಲೀಪ್ ಕಾಡವಾದ, ಸಂಸ್ಥೆಯ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಭಗತ್‍ಸಿಂಗ್ ವೃತ್ತ, ಮಹಾವೀರ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದ ವರೆಗೆ ಪಾದಯಾತ್ರೆ ನಡೆಸಿ ಗಮನ ಸೆಳೆದರು.
ಧ್ವನಿವರ್ಧಕಗಳಲ್ಲಿ ಕಾಡು ಬೆಳೆಸಿ, ನಾಡು ಉಳಿಸಿ, ಗಿಡ ಬೆಳೆಸಿ ಪರಿಸರ ಉಳಿಸಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಇದಕ್ಕೂ ಡಾ. ಅಂಬೇಡ್ಕರ್ ವೃತ್ತದಲ್ಲಿ ಸಂಸ್ಥೆಯಿಂದ ಸಾರ್ವಜನಿಕರಿಗೆ 300 ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಪರಿಸರ ಗೀತೆ, ಕವನ ವಾಚನ, ಬೀದಿ ಭಾಷಣದ ಮೂಲಕ ಸಾರ್ವಜನಿಕರಲ್ಲಿ ಪರಿಸರದ ಅರಿವು ಮೂಡಿಸಲಾಯಿತು.
ದಿಲೀಪ್ ಕಾಡವಾದ ಮಾತನಾಡಿ, ಇಂದು ಮನುಷ್ಯನ ಸ್ವಾರ್ಥಕ್ಕಾಗಿ, ಮಣ್ಣು, ನೀರು, ಗಾಳಿ ಮಲೀನವಾಗುತ್ತಿದೆ. ಅರಣ್ಯ ನಾಶದಿಂದ ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಲ್ಲರೂ ವರ್ಷಕ್ಕೆ ಕನಿಷ್ಠ ಒಂದು ಸಸಿ ನೆಡಬೇಕು. ಜನ್ಮದಿನಕ್ಕೆ ಕನಿಷ್ಠ 10 ಸಸಿಗಳನ್ನು ನೆಟ್ಟು, ಬೆಳೆಸಬೇಕು. ಈ ಮೂಲಕ ಪರಿಸರ ಸಂಕ್ಷಿಸಬೇಕು ಎಂದು ಹೇಳಿದರು.
ದಿವ್ಯಾ ದಿಲೀಪ್, ಎಲ್ವಿನ್ ದಿಲೀಪ್ ಅವರು ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‍ನಲ್ಲಿ ಕವನ ವಾಚಿಸಿದರು. ಘೋಷ ವಾಕ್ಯಗಳನ್ನು ಕೂಗಿದರು.
ತಾಜುದ್ದೀನ್ ಹಾಗೂ ಸಂಜುಕುಮಾರ ಪರಿಸರ ಗೀತೆಗಳನ್ನು ಸುಮಧುರವಾಗಿ ಹಾಡಿದರು.
ಪತ್ರಕರ್ತ ಸ್ವಾಮಿದಾಸ್ ನಾಗೂರೆ, ಹಿರಿಯ ಕಲಾವಿದರಾದ ಪ್ರವೀಣ್ ಜಾನಸನ್, ಸಂತೋಷ್ ನಿಟ್ಟೂರ, ರಾಜಕುಮಾರ ಪಾಟೀಲ ಬಾವಗಿ, ಆನಂದ ಪಾಟೀಲ, ಯೋಗಾನ್ ಶಹಾಗಂಜ್, ದಾವೀದ್ ಕಪಲಾಪುರ, ಸಾಗರ್ ಮತ್ತಿತರರು ಉಪಸ್ಥಿತರಿದ್ದರು.