SLAO ಹುದ್ದೆ ಭರ್ತಿ ಸೇರಿದಂತೆ ನಾಲ್ಕು ಬೇಡಿಕೆಗಳಿಗೆ ಕಾರಂಜ ಮುಳುಗಡೆ ಸಂತ್ರಸ್ತ ರೈತರ ಆಗ್ರಹ
ಬೀದರ, ಜೂನ್ 2: ಬೀದರ ಜಿಲ್ಲೆಯಲ್ಲಿ ಖಾಲಿ ಇರುವ ವಿಶೇಷ ಭೂಸ್ವಾಧೀನ ಅಧಿಕಾರಿ (SLAO) ಹುದ್ದೆಗೆ ತಕ್ಷಣ ಹಿರಿಯ ಹಾಗೂ ಸಮರ್ಥ ಅಧಿಕಾರಿಯನ್ನು ನೇಮಕ ಮಾಡಬೇಕು, ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು ಹಾಗೂ SLAO ಕಚೇರಿಯನ್ನು ಬೀದರ ನಗರದಲ್ಲೇ ಸ್ಥಾಪಿಸಬೇಕು ಎಂದು ಕಾರಂಜ ಮುಳುಗಡೆ ಸಂತ್ರಸ್ತರ ಹಿತ ರಕ್ಷಣಾ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಕಳೆದ ಹಲವು ತಿಂಗಳುಗಳಿಂದ SLAO ಹುದ್ದೆ ಖಾಲಿ ಇರುವುದರಿಂದ ಜಿಲ್ಲೆಯ ನೂರಾರು ರೈತರು ಮತ್ತು ಭೂಸ್ವಾಧೀನ ಸಂತ್ರಸ್ತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಲಾಗಿದೆ. ಭೂಸ್ವಾಧೀನ ಪರಿಹಾರ, ಪ್ರಕರಣಗಳ ವಿಚಾರಣೆ, ದಾಖಲೆಗಳ ಪರಿಶೀಲನೆ ಹಾಗೂ ಪರಿಹಾರ ವಿತರಣೆಯಂತಹ ಹಲವು ಕಾರ್ಯಗಳು ಸ್ಥಗಿತಗೊಂಡು ರೈತರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಲಾಗಿದೆ.
ಕಾರಂಜ ಜಲಾಶಯಕ್ಕಾಗಿ ಭೂಮಿ ನೀಡಿರುವ ರೈತರಿಗೆ ಬಾಕಿ ಇರುವ ಪರಿಹಾರ ಹಾಗೂ ಇತರ ನ್ಯಾಯಸಮ್ಮತ ಬೇಡಿಕೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ರೈತರು ಆಗ್ರಹಿಸಿದ್ದಾರೆ. ಆದರೆ ಸಮಿತಿಯಲ್ಲಿ SLAO ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಹುದ್ದೆ ಖಾಲಿ ಇರುವುದರಿಂದ ಸಮಸ್ಯೆಗಳ ಪರಿಹಾರ ವಿಳಂಬವಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ರೈತರು ಹಾಗೂ ಸಮಿತಿ ಸದಸ್ಯರು ಜಿಲ್ಲಾಡಳಿತದ ಮುಂದೆ ನಾಲ್ಕು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಖಾಲಿ ಇರುವ SLAO ಹುದ್ದೆಗೆ ತಕ್ಷಣ ದಕ್ಷ ಅಧಿಕಾರಿಯನ್ನು ನೇಮಕ ಮಾಡುವುದು, ಕಚೇರಿ ಕಾರ್ಯನಿರ್ವಹಣೆಗೆ ಕನಿಷ್ಠ ಇಬ್ಬರು ಸಹಾಯಕ ಅಧಿಕಾರಿಗಳನ್ನು ನಿಯೋಜಿಸುವುದು, ಪ್ರಸ್ತುತ ರೇಷ್ಮೆ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ SLAO ಕಚೇರಿಯನ್ನು ಬೀದರ ನಗರದಲ್ಲಿ ಪ್ರತ್ಯೇಕ ಕಚೇರಿಯಾಗಿ ಸ್ಥಾಪಿಸುವುದು ಹಾಗೂ ಕಾರಂಜ ಮುಳುಗಡೆ ಸಂತ್ರಸ್ತ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿಯನ್ನು ರಚಿಸುವಂತೆ ಒತ್ತಾಯಿಸಿದ್ದಾರೆ.
ಮನವಿಗೆ ಐದು ದಿನಗಳೊಳಗೆ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ, ಕಾರಂಜ ಮುಳುಗಡೆ ಸಂತ್ರಸ್ತ ರೈತರು ಹಾಗೂ ಹಿತ ರಕ್ಷಣಾ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾರಂಜ ಮುಳುಗಡೆ ಸಂತ್ರಸ್ತರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಹೊಚಕನಳ್ಳಿ, ರಾಜಪ್ಪ ಕೋಸಂ, ರಾಜಶೇಖರ ಕೇಣಿ (ರಂಜೋಳ), ವಿನಯ್ ಕುಮಾರ್ ಮಾಳಗೆ, ಮಹೇಶ ನೆಲವಾಲ, ಮಾದಪ್ಪ ಸಂಗೋಳಗಿ, ಲಕ್ಷ್ಮಿ ಮಾದಪ್ಪ, ನಾಗಶೆಟ್ಟಿ ಹಚ್ಚೆ ಸೇರಿದಂತೆ ನೂರಾರು ಸಂತ್ರಸ್ತ ರೈತರು ಉಪಸ್ಥಿತರಿದ್ದರು.