logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ವಾಲದೊಡ್ಡಿ ಗ್ರಾಮದಲ್ಲಿ ಭೂಕಬಳಿಕೆ, ಅಕ್ರಮ ಲೇಔಟ್ ಆರೋಪ: ಅಪರ ಜಿಲ್ಲಾಧಿಕಾರಿಗೆ ಗ್ರಾಮಸ್ಥರ ಮನವಿ

ಬೀದರ, ಮೇ 22:ಬೀದರ ತಾಲೂಕಿನ ವಾಲದೊಡ್ಡಿ (ಓಡವಾಡ) ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಭೂಮಿ, ಸರ್ಕಾರಿ ಜಮೀನು ಹಾಗೂ ದಲಿತರಿಗೆ ನೀಡಲಾದ ಸೀ-ಫಾರಂ ಭೂಮಿಗಳನ್ನು ಅತಿಕ್ರಮಿಸಿ ಅಕ್ರಮ ಲೇಔಟ್ ನಿರ್ಮಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.ಗ್ರಾಮದ ಗಣಪತಿ ಶಂಕರ, ನಾಮದೇವ ಪಂಡರಿ, ಪ್ರವೀಣಕುಮಾರ ಯೋಗಿನಾಥ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಕಾಶೀನಾಥ ಶಿವರಾಜ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ವಿಷ್ಣುವರ್ಧನ ಗುರಪ್ಪ, ಗುರಪ್ಪ ದೌಲಪ್ಪ ಹಾಗೂ ಹರ್ಷವರ್ಧನ ಗುರಪ್ಪ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ.ಮನವಿಯಲ್ಲಿ ವಾಲದೊಡ್ಡಿ ಗ್ರಾಮದ ಸರ್ವೆ ನಂ.74ರ ಸಾರ್ವಜನಿಕ ಸ್ಮಶಾನ ಭೂಮಿ, ಸರ್ವೆ ನಂ.75ರ ಸರ್ಕಾರಿ ಜಮೀನು, ಸರ್ವೆ ನಂ.81, 82, 83ರ ಸೀ-ಫಾರಂ ಭೂಮಿ ಹಾಗೂ ಸರ್ವೆ ನಂ.86, 87ರ ಜಮೀನುಗಳನ್ನು ಕಬಳಿಸಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಲೇಔಟ್ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ.ಗ್ರಾಮಸ್ಥರ ಪ್ರಕಾರ, ಸುಮೇದ ಬೌದ್ಧ ವಿಹಾರಕ್ಕೆ ಸಂಬಂಧಿಸಿದ ಜಮೀನಿನಲ್ಲಿಯೂ ಅಕ್ರಮ ಪ್ರವೇಶ ನಡೆದಿದೆ. ಈ ಕುರಿತು ಪ್ರಶ್ನಿಸಿದವರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಹಾಗೂ ಮಹಿಳೆಯರ ಮೇಲೂ ದೌರ್ಜನ್ಯ ಎಸಗಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಗ್ರಾಮ ಪಂಚಾಯಿತಿ ಸದಸ್ಯ ಕಾಶೀನಾಥ ಅವರು, ಆರೋಪಿಗಳ ವಿರುದ್ಧ ಮಹಿಳಾ ಪೊಲೀಸ್ ಠಾಣೆ, ನಗರ ಪೊಲೀಸ್ ಠಾಣೆ, ಮಾರ್ಕೆಟ್ ಪೊಲೀಸ್ ಠಾಣೆ ಹಾಗೂ ಸೈಬರ್ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ರೌಡಿಶೀಟರ್ ತೆರೆಯಬೇಕು ಹಾಗೂ ಗಡಿಪಾರು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.ಸರ್ಕಾರಿ ಯೋಜನೆಗಳಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನುದಾನ ಪಡೆದುಕೊಂಡಿರುವ ಬಗ್ಗೆ ಕೂಡ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಈ ಎಲ್ಲಾ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.



8
81 views

Comment