ಬೀದರ: ಕೃಷಿ ವಿಜ್ಞಾನ ಪ್ರಾಯೋಗಿಕ ಪರೀಕ್ಷೆಯಲ್ಲಿ ಅಕ್ರಮ ಆರೋಪ
ಬೀದರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಕೃಷಿ ವಿಜ್ಞಾನ ಕೋರ್ಸಿನ ಪ್ರಾಯೋಗಿಕ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪವು ವ್ಯಕ್ತವಾಗಿದೆ. ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ಸಂಸ್ಥಾಪಕ ಅಧ್ಯಕ್ಷ ದೀಲಿಪಕುಮಾರ ವರ್ಮಾ ಅವರು ನೊಂದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಷಯದ ಕುರಿತು ಜಿಲ್ಲಾಧಿಕಾರಿಗಳ ಮುಖಾಂತರ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಕುಲಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಲಾಗಿದೆ.
ಮೇ 10ರಂದು ಬೀದರದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಪ್ರವೇಶ ಪರೀಕ್ಷೆಗೆ 995 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 752 ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದರೂ, 243 ಅರ್ಜಿಗಳು ತಿರಸ್ಕೃತಗೊಂಡವು. ಲೋಪದೋಷಗಳನ್ನು ಸರಿಪಡಿಸಲು ಮೇ 1ರಿಂದ 4ರವರೆಗೆ ಅವಕಾಶ ನೀಡಲಾಗಿತ್ತು; ಆದರೆ ಮರು ಅರ್ಜಿಗಳನ್ನು ತಿರಸ್ಕರಿಸಲಾಗಿರುವುದು ಅನುಮಾನಕಾರಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪರೀಕ್ಷಾ ಕೇಂದ್ರ-1ರಲ್ಲಿ 74 ವಿದ್ಯಾರ್ಥಿಗಳು 200ಕ್ಕೆ 200 ಪೂರ್ಣ ಅಂಕಗಳನ್ನು ಪಡೆದಿರುವುದು ಸಂಶಯವನ್ನು ಹುಟ್ಟಿಸಿದೆ. ಈ ಪ್ರಕರಣದ ಕುರಿತು ಶ್ರೀಕಾಂತ ಸಾಗರ, ಬಜರಂಗ ತಮಗೊಂಡ್, ಅನೀಲಕುಮಾರ ಬಾಜಿ, ರಾಜಶೇಖರ ಶೇರಿ ಕಾರ್, ಪೀಟರ್ ಲಾಯನ್, ಮಹೇಂದ್ರ ಕಾಂಬಳೆ, ವಿಠಲ್ ರಾವ್, ಸತೀಶ್ ಭಾವಿಕಟ್ಟಿ, ಬಿ.ನಾಗರೆಡ್ಡಿ, ಪ್ರಜ್ವಲ್, ಶಿವಮಂಗಲಾ, ಆದರ್ಶ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. ಮರು ಪರೀಕ್ಷೆ ಮತ್ತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.