ಬೀದರ ಅಂಗಡಿಗಳಿಗೆ ಬೆಂಕಿ: ಆಪಾರ ಹಾನಿ
ಬೀದರ್: ತಾಲ್ಲೂಕಿನ ಬೆನಕನಳ್ಳಿ ಗ್ರಾಮದಲ್ಲಿ ಸೋಮವಾರ ಭವಾನಿ ಮಾತೆ ಮಂದಿರದ ಹಿಂಭಾಗದಲ್ಲಿ ಇರುವ ನಾಲ್ಕು ಅಂಗಡಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ಅಂಗಡಿಗಳ ಮಾಲೀಕ ಅಜಯಸಿಂಗ್ ಜಯಸಿಂಗ್ ಚೌಹಾಣ್ ಅವರ ಪ್ರಕಾರ, ಜನರಲ್ ಸ್ಟೋರ್, ಕಿರಾಣಾ, ಶುದ್ಧ ನೀರಿನ ಘಟಕ ಮತ್ತು ಐಸ್‍ಕ್ರೀಂ ಆ್ಯಂಡ್ ಜೂಸ್ ಅಂಗಡಿಗಳು ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದಾಗಿ ಹೊತ್ತಿಕೊಂಡ ಬೆಂಕಿಗೆ ಆಹುತಿಯಾಗಿವೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಬೆಂಕಿ ಅವಘಡದಿಂದ ಅಜಯಸಿಂಗ್ ಅವರಿಗೆ ಸುಮಾರು ರೂ. 30 ಲಕ್ಷದಿಂದ 35 ಲಕ್ಷದ ನಷ್ಟವಾಗಿದೆ. ತಹಶೀಲ್ದಾರ್ ರವೀಂದ್ರ ದಾಮಾ ಹಾಗೂ ಗ್ರಾಮ ಆಡಳಿತಾಧಿಕಾರಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಬಿಸಿ ಆರ್ಮಿ ಜಿಲ್ಲಾ ಘಟಕದ ಅಧ್ಯಕ್ಷ ತಾನಾಜಿ ಸಗರ್ ಮತ್ತು ಕಾರ್ಯಾಧ್ಯಕ್ಷ ರಾಜಕುಮಾರ ಟಿಳ್ಳೆಕರ್ ಅವರು ಸರ್ಕಾರದಿಂದ ತಕ್ಷಣ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ.