ಯಲ್ಹೇರಿ ಗ್ರಾಮದಲ್ಲಿ ಕಳ್ಳತನ ಪ್ರಕರಣದ ತನಿಖೆ ಹೆಸರಲ್ಲಿ ಅಮಾಯಕರಿಗೆ ಪೊಲೀಸ್ ಕಿರುಕುಳ ಆರೋಪ
ಗುರುಮಿಟ್ಕಲ್ : ತಾಲೂಕಿನ ಯಲ್ಹೇರಿ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ನಡೆದಿದೆ ಎನ್ನಲಾದ ಸುಮಾರು 100 ರಿಂದ 150 ಗ್ರಾಂ ಚಿನ್ನಾಭರಣ ಕಳ್ಳತನ ಪ್ರಕರಣದ ತನಿಖೆಯ ಹಾದಿ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದ್ದು, ಕೇವಲ ಅನುಮಾನದ ಆಧಾರದ ಮೇಲೆ ಅಮಾಯಕರನ್ನು ವಶಕ್ಕೆ ಪಡೆದು ದೈಹಿಕವಾಗಿ ಹಿಂಸೆ ನೀಡುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಕಾನೂನಿನ ಪ್ರಕಾರ ಯಾವುದೇ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸುವ ಮುನ್ನ ನೋಟಿಸ್ ನೀಡಬೇಕಾದ ನಿಯಮವಿದ್ದರೂ, ಕಳೆದ ಮೂರು ದಿನಗಳಿಂದ ಗ್ರಾಮದ ಕೆಲವರನ್ನು ಪ್ರತಿದಿನ ಬೆಳಗ್ಗೆ ಠಾಣೆಗೆ ಕರೆದೊಯ್ಯಲಾಗುತ್ತಿದೆ. ರಾತ್ರಿ ಮನೆಗೆ ಬಿಡಲಾಗುತ್ತಿದ್ದರೂ, ಠಾಣೆಯಲ್ಲಿ ಅವರಿಗೆ ಅಮಾನವೀಯವಾಗಿ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಅವರ ಕುಟುಂಬಸ್ಥರು ದೂರಿದ್ದಾರೆ.
ವಿಶೇಷವೆಂದರೆ, ಗ್ರಾಮದ ಒಬ್ಬ ವ್ಯಕ್ತಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರು ಹಳೆಯ ವೈಯಕ್ತಿಕ ದ್ವೇಷವನ್ನು ಇಟ್ಟುಕೊಂಡು ಈ ಪ್ರಕರಣದಲ್ಲಿ ಅಮಾಯಕರನ್ನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿವೆ. ಪೊಲೀಸ್ ಇಲಾಖೆಯಲ್ಲೇ ಇರುವ ಆ ವ್ಯಕ್ತಿಯ ಪ್ರಚೋದನೆಯಿಂದಲೇ ಪೊಲೀಸ್ ಅಧಿಕಾರಿಗಳು ಇಂತಹ ಅಮಾನವೀಯ ನಡೆ ಅನುಸರಿಸುತ್ತಿದ್ದಾರೆ ಎಂದು ಸಂತ್ರಸ್ತರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಇಷ್ಟು ದೊಡ್ಡ ಮಟ್ಟದ ಕಳ್ಳತನ ಪ್ರಕರಣ ನಡೆದಿದ್ದರೂ ಸಹ ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಕುರಿತು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿಲ್ಲ ಎಂಬುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಬಗ್ಗೆ ಸ್ಪಷ್ಟನೆ ಪಡೆಯಲು ಪತ್ರಿಕಾ ಕಚೇರಿಯಿಂದ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆಗಳನ್ನು ಸ್ವೀಕರಿಸುತ್ತಿಲ್ಲ.
ಈ ಕುರಿತು ಗ್ರಾಮಸ್ಥರು ಮಾತನಾಡಿ, ನಮ್ಮ ಗ್ರಾಮದಲ್ಲಿ ಕಳ್ಳತನವಾಗಿರುವುದು ನಿಜ, ಅದನ್ನು ನಾವು ಖಂಡಿಸುತ್ತೇವೆ ಮತ್ತು ನಿಜವಾದ ಕಳ್ಳರಿಗೆ ಶಿಕ್ಷೆಯಾಗಲಿ ಎಂಬುದು ನಮ್ಮ ಆಶಯ. ಆದರೆ ಪೊಲೀಸ್ ಇಲಾಖೆಯಲ್ಲೇ ಇರುವ ವ್ಯಕ್ತಿಯೊಬ್ಬರು ತಮ್ಮ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ತನಿಖೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಯಾವುದೇ ಆಧಾರವಿಲ್ಲದೆ ಅಮಾಯಕರನ್ನು ಕರೆದೊಯ್ದು ಹಿಂಸೆ ನೀಡುತ್ತಿರುವುದು ಸರಿಯಲ್ಲ. ಇಷ್ಟು ದೊಡ್ಡ ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡದೆ ಗೌಪ್ಯವಾಗಿ ಇಟ್ಟಿರುವುದು ಏಕೆ? ಕೂಡಲೇ ಹಿರಿಯ ಅಧಿಕಾರಿಗಳು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಿ ದ್ವೇಷದ ರಾಜಕಾರಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅಮಾಯಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.