ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ
ರಾದ ಪರ್ವತಯ್ಯನವರ ನೆನಪು
ಸತ್ವಪೂರ್ಣ ರಾಷ್ಟ್ರ ಜೀವನವನ್ನು ರೂಪಿಸುವ ಕಾರ್ಯದಲ್ಲಿ ಹೆಚ್ಚು ಕಾಲ ಶ್ರಮಿಸಿದ ಧೀಮಂತ ವ್ಯಕ್ತಿ ಶ್ರೇಷ್ಠ ಶಿಕ್ಷಕರೆಂದು ಹೆಸರು ಗಳಿಸಿರುವ ಪರ್ವತಯ್ಯನವರ ಜೀವನವೇ ಒಂದು ಮಾದರಿ. ಯಾದಗಿರಿ ನಗರದ ಮೈಲಾಪುರ ಅಗಸಿಯ ಕಲಾಲವಾಡಿಯ ಪೊಲೀಸ್ ಮನೆತನದ ಇವರು, ದೇಶೋದ್ಧಾರದ ಮೂಲಕ ಜನರಲ್ಲಿ ಜಾಗೃತಿ ಉಂಟು ಮಾಡಿದ ಉಜ್ವಲ ರಾಷ್ಟ್ರೀಯವಾದಿ ಹಾಗೂ ಸ್ವತಂತ್ರ ಹೋರಾಟಗಾರರು.
ಇವರ ಪೊಲೀಸ್ ಮನೆತನದ ಇತಿಹಾಸವು ಹೈದರಾಬಾದಿನ ನಿಜಾಮರ ಕಾಲದಿಂದಲೂ ಬಂದಿದ್ದೆಂದು ಅವರ ಮನೆತನದ ಹಿರಿಯರು ಹೇಳುತ್ತಾರೆ. ಪೊಲೀಸ್ ಮನೆತನದ ಈ ಹೆಸರು ಅವರ ಪೂರ್ವಜರು ಸಂಭಾದಿಸಿದ್ದು.
ಈ ಪೊಲೀಸ್ ಮನೆತನದ ಪರ್ವತಯ್ಯನವರಿಗೆ ಶ್ರೀಮಂತಿಕೆ, ಸಜ್ಜನಿಕೆ, ದೇಶಭಕ್ತಿ ಗುಣಗಳು ಹಾಗೂ ಧೈರ್ಯ ಹುಟ್ಟಿನಿಂದಲೇ ಬಳುವಳಿಯಾಗಿ ಬಂದವುಗಳು. ಸ್ವತಂತ್ರ ಪೂರ್ವ ಯಾದಗಿರಿ ಭಾಗದಲ್ಲಿ ಉರ್ದು ಭಾಷೆಯದ್ದೇ ಪ್ರಾಬಲ್ಯ. ಹೈದರಾಬಾದಿನ ನಿಜಾಮನ ಆಡಳಿತದಲ್ಲಿ ಈ ಪ್ರಾಂತ್ಯದಲ್ಲಿ ಉರ್ದು ಶೈಕ್ಷಣಿಕ ಹಾಗೂ ಆಡಳಿತ ಭಾಷೆಯಾಗಿ ಪ್ರಾಧಾನ್ಯತೆ ಪಡೆದಿತ್ತು. ಇದರಿಂದಾಗಿ ಕನ್ನಡದ ಮೇಲೆ ಉರ್ದು ಭಾಷೆ ಸವಾರಿ ನಡೆಸುತ್ತಿದೆ ಎಂದೇ ಪರ್ವತಯ್ಯನವರು ಹೇಳುತ್ತಿದ್ದರು.
ಕನ್ನಡ ಎಲ್ಲೆಲ್ಲೂ ಇಲ್ಲದಂತೆ ಮಾಡಿದ ನಿಜಾಮನ ಆಡಳಿತ ಕಾಲದಲ್ಲಿಯೂ ಯಾದಗಿರಿ ತಾಲೂಕಿನಲ್ಲಿ ಕನ್ನಡ ಕಟ್ಟಿ ಬೆಳೆಸುವಂತಹ ಕಷ್ಟದ ಕಾಯಕಕ್ಕೆ ಟೊಂಕಕಟ್ಟಿ ನಿಂತು ಕನ್ನಡ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರ ಬಾಯಲ್ಲಿ ಸದಾ ಕನ್ನಡ ಉಳಿಯುವಂತೆ ಹಾಗೂ ನಲಿಯುವಂತೆ ಮಾಡಿದರು.
1948ರಲ್ಲಿ ಹೈದರಾಬಾದ್ ವಿಮೋಚನೆಯ ಚಳವಳಿಯ ಉಗ್ರ ಸ್ವರೂಪ ಪಡೆದು ಎಲ್ಲೆಲ್ಲೂ ಹೋರಾಟ ನಡೆಯುತ್ತಿದ್ದಾಗ ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಪರ್ವತಯ್ಯ ಮಾಸ್ಟರ್ ಪೊಲೀಸ್ ಅವರಿಗೆ ಮತ್ತೆ ಈ ನೆಲದಲ್ಲಿ ಕನ್ನಡ ಕಟ್ಟಬೇಕು ಕನ್ನಡವನ್ನು ವೈಭವದಿಂದ ಮೆರೆಸಬೇಕೆಂಬ ಅದಮ್ಯ ಆಸೆಯಿಂದಲೇ ನಿಜಾಮ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದರು.
ಪರ್ವತಯ್ಯನವರು ಯಾದಗಿರಿಯಲ್ಲಿ ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹಿರಿಯರಾದ ಕೋಲೂರು ಮಲ್ಲಪ್ಪನವರ ಕಟ್ಟ ಅನುಯಾಯಿಗಳಾಗಿದ್ದರು. ಇವರೊಂದಿಗೆ ಭೀಮಸೇನರಾವ್ ಇಮಾರತಿಯವರು ಹೈದರಾಬಾದ್ ವಿಮೋಚನಾ ಹೋರಾಟದಲ್ಲಿದ್ದರು ಹೋರಾಟ ಸಂದರ್ಭದಲ್ಲಿ ಹೆಚ್ಚು ತೊಂದರೆಗಳಾದವರು ಬಡವರು. ಪರ್ವತಯ್ಯನವರಿಗೆ ಬಡವರ ಸೇವೆ ಮಾಡಬೇಕೆಂಬುದು ಅದಮ್ಯ ಆಸೆ. ಆದ್ದರಿಂದ ಅನೇಕ ಬಾರಿ ಅವರಿಗೆ ನೇರವಾಗಿ ಸಹಾಯಕ್ಕೆ ನಿಲ್ಲುತ್ತಿದ್ದರು. ಇವರ ಅತ್ಯಂತ ಪ್ರಿಯವಾದ ಇನ್ನೊಂದು ಕೆಲಸವೆಂದರೆ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಕುಷ್ಟರೋಗಿಗಳನ್ನು ಗುರುತಿಸಿ ಕ್ಯಾಂಪ್ಗಳ್ಳನ್ನು ಮಾಡಿ ಅವರಿಗೆ ಚಿಕಿತ್ಸೆಯನ್ನು ನೀಡುವ ಮೂಲಕ ಸಂತೋಷಪಡುತ್ತಿದ್ದರು ಇವರ ಸಮಾಜ ಸೇವೆಯನ್ನು ಗುರುತಿಸಿ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.
ಹಿಂದುಳಿದ ಪ್ರದೇಶದಲ್ಲಿ ಸರಕಾರಿ ಪ್ರೌಢಶಾಲೆ ಕೋಲಿವಾಡ ನಿರ್ಮಾಣವಾಗಲು ಪರ್ವತಯ್ಯನವರು ಪ್ರಮುಖ ಕಾರಣಿಕರ್ತರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿ ಸಮಾಜ ಸೇವಕರಾಗಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಇವರನ್ನು ಮಾತ್ರ ಸರಕಾರ ಗುರುತಿಸಲಿಲ್ಲ. ಆದರೂ ಅದನ್ನು ಲೆಕ್ಕಿಸದೆ ತಮ್ಮ ಸಮಾಜ ಸೇವೆಯನ್ನು ಮುಂದುವರಿಸಿದ್ದ ಪರ್ವತಯ್ಯ ಹಣಮಯ್ಯ ಪೊಲೀಸ್ ರವರು 1999ರ ಏಪ್ರಿಲ್ 19ರಂದು ಕೊನೆಯುಸಿರೆಳೆದರು. ಇವರು ದೈಹಿಕವಾಗಿ ನಮ್ಮಿಂದ ದೂರವಾದರೂ ಇವರ ಜನಸೇವೆ ನೆನಪು ಮಾತ್ರ ಜನರ ಮನದಲ್ಲಿ ಅಜರಾಮರವಾಗಿದೆ.