ವಿಶ್ವ ಆರೋಗ್ಯ ದಿನಾಚರಣೆ: ಉತ್ತಮ ಆರೋಗ್ಯ ಶೈಲಿ ರೂಢಿಸಿಕೊಳ್ಳಲು ಕರೆ
ವಿಶ್ವ ಆರೋಗ್ಯ ದಿನಾಚರಣೆ: ಉತ್ತಮ ಆರೋಗ್ಯ ಶೈಲಿ ರೂಢಿಸಿಕೊಳ್ಳಲು ಕರೆ
ದಾವಣಗೆರೆ, ಏಪ್ರಿಲ್ 11: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿಶ್ವ ಆರೋಗ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮುಖ್ಯ ಆರೋಗ್ಯ ಅಧೀಕ್ಷಕರಾದ ಡಾ. ಎಸ್.ಪಿ. ಮಧು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿನಿಯರಿಗೆ ಆರೋಗ್ಯದ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ. ಆರೋಗ್ಯ ಇಲ್ಲದೆ ಬದುಕು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವನೆ ಅತ್ಯಗತ್ಯವಾಗಿದೆ. ಇಂದಿನ ವಿದ್ಯಾರ್ಥಿಗಳು ಜಂಕ್ ಫುಡ್‌ಗಳಾದ ಚಿಪ್ಸ್, ಬ್ರೆಡ್, ಬನ್, ಪಿಜ್ಜಾ, ಬರ್ಗರ್ ಮುಂತಾದವುಗಳಿಗೆ ಮಾರು ಹೋಗಿ ಮನೆಯಲ್ಲಿ ತಯಾರಿಸುವ ಆಹಾರವನ್ನು ನಿರ್ಲಕ್ಷಿಸುತ್ತಿರುವುದು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದು ಎಚ್ಚರಿಸಿದರು. ಈ ಕೆಟ್ಟ ಅಭ್ಯಾಸವನ್ನು ತೊರೆದು ದಿನನಿತ್ಯ ಕನಿಷ್ಠ ಅರ್ಧ ಗಂಟೆಯಾದರೂ ವ್ಯಾಯಾಮ, ಪ್ರಾಣಾಯಾಮ ಮತ್ತು ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿನಿಯರೊಂದಿಗೆ ಆರೋಗ್ಯ ಸಂವಾದ ನಡೆಸಿದ ಅವರು ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠದ ಕ್ಯಾನ್ಸರ್, ಮಾಸಿಕ ಸಮಸ್ಯೆಗಳು ಸೇರಿದಂತೆ ಹಲವು ಆರೋಗ್ಯ ಸಂಬಂಧಿತ ವಿಷಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಕರಿಬಸಪ್ಪ ಟಿ ಅವರು ಮಾತನಾಡಿ, ವಿದ್ಯಾರ್ಥಿನಿಯರು ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತರಬೇಕು. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಉತ್ತಮ ಆಹಾರ ಪದ್ಧತಿ ಅನುಸರಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಡಾ. ಸಿದ್ದಲಿಂಗಮ್ಮ ಬಿ.ಜಿ ಅವರು ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಶ್ರೀ ಶಿವರಾಜು ಅವರು ಸ್ವಾಗತಿಸಿದರು. ಕುಮಾರಿ ಕವನ ಪ್ರಾರ್ಥಿಸಿದರು. ಕುಮಾರಿ ಅನುಷಾ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ರೀತಾ ವಂದಿಸಿದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ. ಭೀಮಪ್ಪ ಎಂ.ಪಿ., ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ನಾಗನಗೌಡ, ವಾಣಿಜ್ಯಶಾಸ್ತ್ರ ವಿಭಾಗದ ಡಾ. ಪಾರ್ಥಸಾರಥಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ರಾಮಚಂದ್ರ, ಹಿಂದಿ ವಿಭಾಗದ ಮುಖ್ಯಸ್ಥರಾದ ಮೊಹಮ್ಮದ್ ಅಲಿ, ಡಾ. ಅಶೋಕ್ ಕುಮಾರ್, ಶ್ರೀಮತಿ ಸುರೇಖಾ, ಶ್ರೀಮತಿ ಭಾರತಿ ಮೊದಲಾದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.