ಬೆಂಗಳೂರು : ಪರೀಕ್ಷೆಗೆ ಹೆದರಿ ಮನೆ ಬಿಟ್ಟು ಹೋದ ವಿದ್ಯಾರ್ಥಿನಿಯರು, ಕುಟುಂಬಸ್ಥರ ಕಣ್ಣೀರು
ಬೆಂಗಳೂರು : ರಾಜ್ಯದಲ್ಲಿ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ಕನಸು ಹೊತ್ತು ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ಇಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆಗೆ ಹೆದರಿ ಮನೆ ಬಿಟ್ಟು ಹೋಗಿದ್ದಾರೆ.
ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
ಜನವರಿ 31 ರಂದು ದ್ವಿತೀಯ ಪಿಯು ಓದುತ್ತಿದ್ದ ತನಿಷ್ಕಾ ಹಾಗೂ ಪ್ರಥಮ ಪಿಯು ಓದುತ್ತಿದ್ದ ವಿದ್ಯಾರ್ಥಿನಿ ತೇಜಸ್ವಿನಿ ಕಾಣೆಯಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪರೀಕ್ಷೆ ಸಮೀಪಿಸುತ್ತಿದ್ದಂತೆ ಇಬ್ಬರಿಗೂ ಭಯ ಶುರುವಾಗಿದೆ. ಹೀಗಾಗಿ ಇಬ್ಬರೂ ಮಾತನಾಡಿಕೊಂಡು ಮನೆ ಬಿಟ್ಟು ಹೋಗಿದ್ದಾರೆ. ತನಿಷ್ಕಾಗೆ ಪರೀಕ್ಷೆ ಭಯ ಇದೇ ಮೊದಲೇನಲ್ಲ. ಕಳೆದ ವರ್ಷ ಪರೀಕ್ಷೆ ಭಯದಿಂದ ತನಿಷ್ಕಾ ತನ್ನ ಕೈ ಕತ್ತರಿಸಿಕೊಂಡಿದ್ದಳೆಂದು ಹೇಳಲಾಗಿದೆ. ಈ ಬಾರಿ ಎಕ್ಸಾಮ್ ಗೆ ಹೆದರಿ ಇಬ್ಬರೂ ವಿದ್ಯಾರ್ಥಿನಿಯರು ಮನೆ ಬಿಟ್ಟು ಓಡಿ ಹೋಗಿದ್ದಾರೆ.
ಈ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಮೊಬೈಲ್ ಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ. ಎಟಿಎಂ ಕಾರ್ಡ್ ಆಗಲಿ, ಹಣವನ್ನಾಗಲಿ, ಚಿನ್ನವನ್ನಾಗಲಿ ತೆಗೆದುಕೊಂಡು ಹೋಗಿಲ್ಲ. ಆಧಾರ್ ಕಾರ್ಡ್ ಹಾಗೂ ಕಾಲೇಜು ಬ್ಯಾಗ್ ಮಾತ್ರ ತೆಗೆದುಕೊಂಡು ನಾಪತ್ತೆಯಾಗಿದ್ದಾರೆ. ಉಚಿತ ಬಸ್ ಪ್ರಯಾಣ ಸೌಲಭ್ಯ ಇರುವುದರಿಂದ ಬೇರೆ ಬೇರೆ ಊರುಗಳಿಗೆ ಓಡಾಡುತ್ತಿರಬಹುದು ಎನ್ನಲಾಗಿದೆ.
ಈ ವಿದ್ಯಾರ್ಥಿನಿಯರು ಕಳೆದ ಕೆಲ ದಿನಗಳ ಹಿಂದೆ ಸ್ನೇಹಿತರಿಗೆ ಕರೆ ಮಾಡಿದ್ದಾರೆ. ಮಲೆ ಮಹದೇಶ್ವರ ಬೆಟ್ಟದಲ್ಲಿದ್ದೇವೆ ಎಂದು ಹೇಳಿದ್ದಾರೆ. ಒಂದು ವಾರದಲ್ಲಿ ಮತ್ತೆ ಕಾಲ್ ಮಾಡುವುದಾಗಿ ಹೇಳಿ ಕಟ್ ಮಾಡಿದ್ದಾರೆ. ಆದರೆ ಅದಾದ ಬಳಿಕ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಸಂಬಂಧ ಪೊಲೀಸರು 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕುಟುಂಬಸ್ಥರು ಹೈ ಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಒಂದು ವಾರದ ಗಡುವು ನೀಡಿದೆ ಎಂದು ತಿಳಿದುಬಂದಿದೆ. ಒಂದು ತಿಂಗಳಿಂದ ಮಕ್ಕಳಿಗಾಗಿ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಎಲ್ಲೇ ಇದ್ದರೂ ಸುರಕ್ಷಿತವಾಗಿ ಮರಳಿ ಬರುವಂತೆ ಮನವಿ ಮಾಡಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಗೆ ಉಚಿತ ಬಸ್ ಪ್ರಯಾಣ
ಕಾರವಾರ: ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ಫೆ.28 ರಿಂದ ಮಾ.17ರವರೆಗೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರ ವೇಶ ಪತ್ರ ತೋರಿಸಿ ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ಹೋಗಿ ಬರಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆಯ ನಗರ, ಉಪನಗರ, ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ