
ಪೌರ ಕಾರ್ಮಿಕರ ಸಮಸ್ಯೆ ಬಗೆಹರಿಸದಿದ್ದರೆ ರಾಜ್ಯಾದ್ಯಂತ ಹೋರಾಟ: ಸಫಾಯಿ ಕರ್ಮಚಾರಿ ಆಯೋಗಕ್ಕೆ ಮನವಿ
ಯಾದಗಿರಿ : ನಗರಸಭೆಯ ಪೌರ ಕಾರ್ಮಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಪಿ. ರಘು ಅವರಿಗೆ ಬುಧವಾರ ಡಿ,ಎಸ್,ಎಸ್ (ಅಂಬೇಡ್ಕರವಾದ) ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ನಿಂಗಣ್ಣ ಬೀರನಾಳ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಪ್ರಮುಖವಾಗಿ, ಮಲ-ಮೂತ್ರ ಎತ್ತುವ ಕಾಯಕ ಮಾಡುತ್ತಾ ಬಂದಿರುವ ಹೊಲೆಯ ಮತ್ತು ಮಾದಿಗ ಜನಾಂಗದ ಅನಕ್ಷರಸ್ಥ ಕಾರ್ಮಿಕರನ್ನು ಇಲಾಖೆಯ ವತಿಯಿಂದಲೇ ನೇರವಾಗಿ ನೇಮಕ ಮಾಡಿಕೊಳ್ಳಬೇಕು. ಏಜೆನ್ಸಿಗಳ ಮೂಲಕ ನೇಮಕ ಮಾಡಿಕೊಳ್ಳುವುದರಿಂದ ಕಾರ್ಮಿಕರಿಗೆ ಸರಿಯಾದ ವೇತನ ಮತ್ತು ಪಿ.ಎಫ್ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ನಗರಸಭೆಯ ಆರೋಗ್ಯ ನಿರೀಕ್ಷಕರು (S.I) ಪೌರ ಕಾರ್ಮಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಅದರಲ್ಲೂ ಮಹಿಳಾ ಆರೋಗ್ಯ ನಿರೀಕ್ಷಕಿಯೊಬ್ಬರು ಮಹಿಳಾ ಕಾರ್ಮಿಕರನ್ನು ಕೆಳಜಾತಿಯವರೆಂದು ಅವಹೇಳನಕಾರಿಯಾಗಿ ನಿಂದಿಸುತ್ತಿದ್ದಾರೆ. ಅಲ್ಲದೆ, ಕಳೆದ ಅಕ್ಟೋಬರ್ 2 ರಂದು ಗಾಂಧಿ ವೃತ್ತದ ಸ್ವಚ್ಛತೆ ಮತ್ತು ದೀಪಾಲಂಕಾರದ ಹೆಸರಿನಲ್ಲಿ ಅವ್ಯವಹಾರ ನಡೆದಿದ್ದು, ಅಂತಹ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಪ್ರಮುಖ ಬೇಡಿಕೆಗಳಾದ ಜಿಲ್ಲಾ ಕೇಂದ್ರದಲ್ಲಿ ಪೌರ ಕಾರ್ಮಿಕರಿಗಾಗಿ ಸುಸಜ್ಜಿತ ವಿಶ್ರಾಂತಿ ಗೃಹ ನಿರ್ಮಾಣವಾಗಬೇಕು. ವರ್ಷಕ್ಕೆ ಎರಡು ಬಾರಿ ಗುಣಮಟ್ಟದ ಸಮವಸ್ತ್ರ, ಶೂ, ಹ್ಯಾಂಡ್ ಗ್ಲೋಸ್, ಸ್ಯಾನಿಟೈಸರ್ ಮತ್ತು ಸೋಪುಗಳನ್ನು ವಿತರಿಸಬೇಕು. ಪ್ರಸ್ತುತ ಕಾರ್ಮಿಕರಿಗೆ ನೀಡುತ್ತಿರುವ ನೀರು ಮತ್ತು ಉಪಹಾರದಲ್ಲಿ ಅವ್ಯವಹಾರ ನಡೆಯುತ್ತಿದ್ದು, ಗುಣಮಟ್ಟದ ಆಹಾರ ಒದಗಿಸಬೇಕು. ಪೌರ ಕಾರ್ಮಿಕರ ಈ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ಮುಖಂಡರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ನಿಂಗಣ್ಣ ಬೀರನಾಳ, ಯಾದಗಿರಿ ತಾಲೂಕು ಸಂಚಾಲಕರಾದ ಆಂಜನೇಯ ಬಳಿಚಕ್ರ, ಅನೀಲ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.