logo

ಹಡಪದ ಅಪ್ಪಣ್ಣ ಸಮಾಜಕ್ಕೆ ಅನ್ಯಾಯ, ಹೋರಾಟಕ್ಕೆ ಕರೆ:

ವಿಶ್ವಗುರು ಬಸವಣ್ಣನವರ ಇವನಾರವ ಇವನಾರವ ಇವನಾರವ ಎನ್ನದೆ, ಇವನಮ್ಮವ ಇವನಮ್ಮವ ಇವನಮ್ಮವ ಎಂದು ಸಣ್ಣ ಸಣ್ಣ ಕಾಯಕ ಸಮಾಜವನ್ನು ಅಪ್ಪಿಕೊಂಡು ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ. ಇದೀಗ ಸಣ್ಣ ಸಣ್ಣ ಸಮುದಾಯದ ಶರಣರನ್ನು ಬಸವಣ್ಣನವರಿಂದ ದೂರ ಮಾಡುವ ಹುನ್ನಾರ ಕಲ್ಯಾಣದಲ್ಲಿ ನಡೆಯುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾದ ಅಪ್ಪಣ್ಣನವರು ಬಸವಣ್ಣನವರ ಕೊನೆಯುಸಿರಿರುವರೆಗೂ ಅವರ ಜೊತೆ ಆಪ್ತಕಾರ್ಯದರ್ಶಿಯಾಗಿದ್ದು ಅವರಿಗಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಆದ್ದರಿಂದ ಅರಿವಿನ ಮನೆಯಲ್ಲಿ ಅಪ್ಪಣ್ಣನವರ ಮೂರ್ತಿ ಕೂಡಿಸಬೇಕೆಂಬ ಬೇಡಿಕೆ ಸಹಜವಾಗಿಯೇ ಹಡಪದ ಸಮಾಜದವರದ್ದಾಗಿತ್ತು. ಈಗ ರಾತ್ರೋ ರಾತ್ರಿ ಅಪ್ಪಣ್ಣನವರ ಗವಿಯಲ್ಲಿ ನೀಲಾಂಬಿಕೆ ಗಂಗಾಂಬಿಕೆ ಮೂರ್ತಿ ಕೂಡಿಸಿ ಅವರ ಆಸೆಗೆ ತಣ್ಣೀರು ಎರಚಿದ್ದಾರೆ. ಅಪ್ಪಣ್ಣನವರ ತ್ಯಾಗಕ್ಕೆ ನ್ಯಾಯವೇ ಇಲ್ಲದಂತಾಗಿದೆ ಎಂದು ರಾಜ್ಯದಾಧ್ಯಾಂತ ಹಡಪದ ಸಮಾಜದ ಪರಮಪೂಜ್ಯ ಅನ್ನದಾನ ಭಾರತಿ ಸ್ವಾಮೀಜಿಯವರು ಮನನೊಂದು ಹೋರಾಟಕ್ಕೆ ಕರೆ ನೀಡಿದ್ದಾರೆ. ಇಂತಹ ಅಹಿತಕರ ಬೆಳವಣಿಗೆಗಳು ಲಿಂಗಾಯತ ಧರ್ಮದ ಆಂತರಿಕ ಕಲಹಕ್ಕೆ ಕಾರಣವಾಗಿರುವುದಂತು ಸತ್ಯ. ಈ ಕೂಡಲೇ ಸರಕಾರ ಮಧ್ಯಸ್ಥಿಕೆ ವಹಿಸಿಕೊಂಡು, ಅರಿವಿನ ಮನೆಯ ಒಂದು ಗವಿಯಲ್ಲಿ ನೀಲಾಂಬಿಕೆ ಮತ್ತೊಂದು ಕಡೆ ಅಪ್ಪಣ್ಣ ಮೂರ್ತಿ ಕೂಡಿಸಿ ಹಡಪದ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಲಾಗುತ್ತಿದೆ.

*ವಿಶ್ವಗುರು ಬಸವಣ್ಣನವರಿಗೆ ಇದ್ದಿದ್ದು ಒಬ್ಬಳೇ ಹೆಂಡತಿ:*
ಪೂಜ್ಯ ಶ್ರೀ ಮಹಾ ಜಗದ್ಗುರು ಮಾತೆ ಮಹಾದೇವಿಯವರು ಮತ್ತು ಅನೇಕ ಸಂಶೋಧನಕಾರರ ಅಭಿಪ್ರಾಯದಲ್ಲಿ ಬಸವಣ್ಣನವರಿಗೆ ಇದ್ದಿದ್ದು ನೀಲಗಂಗಾಬಿಕೆ ಒಬ್ಬಳೇ ಹೆಂಡತಿ. ಮಾತೆ ಗಂಗಾದೇವಿಯವರು ಪಂಚಕಮಿಟಿಯವರ ತಪ್ಪು ಮಾಹಿತಿ ಕಾರಣವಾಗಿ ನೀಲಾಂಬಿಕೆ ಮತ್ತು ಗಂಗಾಂಬಿಕೆ ಇಬ್ಬರ ಮೂರ್ತಿಯನ್ನು ಕೂಡಿಸಿರುವುದನ್ನು ವಿರೋಧಿಸದೆ ತಟಸ್ಥ ಧೋರಣೆ ತಾಳಿರುವುದು ಮತ್ತು ಹಡಪದ ಸಮಾಜದ ಜೊತೆ ಕೈಜೋಡಿಸಿದ ಹಿರಿಯ ಸ್ವಾಮೀಜಿಗಳು ಹಾಗೂ ಸ್ಥಳಿಯ ಶಾಸಕ ನೀರವ ಮೌನ ವಹಿಸಿರುವುದು ಐತಿಹಾಸಿಕ ದುರಂತದ ಸಂಗತಿ.

*ಮಧ್ಯರಾತ್ರಿ ಮೂರ್ತಿ ಕೂಡಿಸುವುದು ಸರಿಯೇ:*
"ಶರಣರು ಮೆಟ್ಟಿದ ಧರೆ ಪಾವನ", ''ಶರಣರು ಸ್ವತಂತ್ರ ಧೀರರು'' ಇಂತಹ ಶರಣರ ಮೂರ್ತಿ ಕೂಡಿಸುವಾಗ ಸಮಾಜ ಬಾಂಧವರ, ಬಸವ ಭಕ್ತರ ಗಮನಕ್ಕೆ ತಂದು, ಅರ್ಥಪೂರ್ಣವಾಗಿ ಕಾರ್ಯಕ್ರಮ ಹಮ್ಮಿಕೊಂಡು ಮೂರ್ತಿ ಉದ್ಘಾಟನೆ ಮಾಡಬಹುದಿತ್ತು. ಆದರೆ ಅಸಂವಿಧಾನಿಕವಾಗಿ ತಡ ರಾತ್ರಿ ಮೂರ್ತಿ ಕೂಡಿಸುವುದು ಶರಣರಿಗೆ ಅವಮಾನ ಮಾಡಿದಂತಾಗಿದ್ದು; ಇದು ಬಸವಭಕ್ತರ ವಿರೋಧಕ್ಕೂ ಕಾರಣವಾಗಿದೆ.
ಬಸವಕಲ್ಯಾಣದಲ್ಲಿ ಇಂತಹ ಬೆಳವಣಿಗೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಾಗಿದೆ. ಪ್ರತಿಯೊಂದು ಸಣ್ಣ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕಾದರೆ ಗತಕಾಲದಿಂದಲೂ ಉಳಿಸಿಕೊಂಡು ಬಂದ ಕಾಯಕ ಶರಣರ ಜಾಗವನ್ನು ವಸ್ತು ನಿಷ್ಟವಾಗಿ ಸಂಶೋಧಿಸಿ ಅವುಗಳನ್ನು ಸಂರಕ್ಷಿಸಲು ಸರಕಾರ ಕಮಿಟಿ ರಚಿಸಿ ಪರಿಹಾರಕ್ಕೆ ಮುಂದಾಗಬೇಕೆಂದು ಆಗ್ರಹಿಸುತ್ತೇವೆ.

*ಪೂಜ್ಯ ಮಾತೆ ಗಂಗಾದೇವಿಯವರನ್ನು ತಪ್ಪು ದಾರಿಗೆ ಕರೆದೊಯ್ಯುತ್ತಿರುವ ಪಂಚಕಮಿಟಿ:*
ಬಸವಣ್ಣನವರ ಮೂರ್ತಿ ಅನಾವರಣ ಮಾಡುವಂತೆ ಆಹ್ವಾನಿಸಿದ ವಿಜಯಲಕ್ಷ್ಮಿ ಗಡ್ಡೆ ಮತ್ತು ಪಂಚಕಮಿಟಿಯವರು ಅರಿವಿನ ಮನೆಗೆ ಬಂದಾಗ ಅವರ ಕೈಯಿಂದ ನೀಲಾಂಬಿಕೆ ಗಂಗಾಂಬಿಕೆ ಮೂರ್ತಿಗೆ ಪೂಜೆ ಮಾಡಿಸಲಾಗಿದೆ. ಪೂಜ್ಯರು ಬಸವಣ್ಣನವರಿಗೆ ಒಬ್ಬಳೇ ಹೆಂಡತಿ ಇದ್ದಿದ್ದು ಇಬ್ಬರಲ್ಲ ಎಂದು ಹೇಳಿದಾಗ; ಇದು ಲಿಂಗಮ್ಮನ ಮೂರ್ತಿ ಎಂದು ತಪ್ಪು ಮಾಹಿತಿ ನೀಡಿ ಯಾಮಾರಿಸಿದ್ದಾರೆ. ದೊಡ್ಡ ಪೀಠದ ಗುರುಗಳನ್ನೇ ದಿಕ್ಕು ತಪ್ಪಿಸುವುದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ, ಷಡ್ಯಂತ್ರ ರೂಪಿಸುತ್ತಿವೆ ಎಂಬುದು ಲಿಂಗಾಯತ ಧರ್ಮಿಯರು ತಿಳಿಯಬೇಕು.

6
3183 views