logo

ಚಿಕ್ಕನಾಯಕನಹಳ್ಳಿ ಯುಜಿಡಿ ಅವ್ಯವಸ್ಥೆ: ಎಂಎಲ್‌ಸಿ ರಮೇಶ್ ಬಾಬು ನೇತೃತ್ವದಲ್ಲಿ ಅಧಿಕಾರಿಗಳ ತಂಡ ದೌಡು

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಒಳಚರಂಡಿ (ಯುಜಿಡಿ) ಕಾಮಗಾರಿಗಳ ಲೋಪದೋಷಗಳ ಕುರಿತು ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ಸದನದಲ್ಲಿ ಧ್ವನಿ ಎತ್ತಿದ ಹಿನ್ನೆಲೆಯಲ್ಲಿ, ಶನಿವಾರ ಉನ್ನತ ಮಟ್ಟದ ಅಧಿಕಾರಿಗಳ ತಂಡ ಪಟ್ಟಣದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.
ಈ ಕಾಮಗಾರಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸ್ಥಳೀಯ ಮುಖಂಡರು ರಮೇಶ್ ಬಾಬು ಅವರ ಗಮನಕ್ಕೆ ತಂದಿದ್ದರು. ವಿಷಯದ ಗಂಭೀರತೆ ಅರಿತ ಅವರು ಸದನದಲ್ಲಿ ಸರ್ಕಾರದ ವಿರುದ್ಧ ಚರ್ಚೆ ನಡೆಸಿದ್ದರು. ಇದರ ಫಲವಾಗಿ ಸರ್ಕಾರದ ನಿರ್ದೇಶನದಂತೆ ಬೆಂಗಳೂರು ಯುಜಿಡಿ ಮುಖ್ಯ ಅಭಿಯಂತರರು ಹಾಗೂ ತುಮಕೂರು ಜಿಲ್ಲಾ ಮಟ್ಟದ ಅಭಿಯಂತರರ ತಂಡ ತನಿಖೆಗಾಗಿ ಪಟ್ಟಣಕ್ಕೆ ಆಗಮಿಸಿತ್ತು.
ಬಡಾವಣೆಗಳಲ್ಲಿ ರಿಯಾಲಿಟಿ ಚೆಕ್:
ನಗರದ ವಿವಿಧ ಬಡಾವಣೆಗಳಲ್ಲಿ ಅರ್ಧಕ್ಕೆ ನಿಂತಿರುವ ಚರಂಡಿ ವ್ಯವಸ್ಥೆ, ಕಿತ್ತುಹೋಗಿರುವ ರಸ್ತೆಗಳು ಹಾಗೂ ಯುಜಿಡಿ ಕಾಮಗಾರಿಯಲ್ಲಿನ ತಾಂತ್ರಿಕ ಲೋಪಗಳನ್ನು ತಂಡವು ಖುದ್ದಾಗಿ ಪರಿಶೀಲಿಸಿತು. ಈ ವೇಳೆ ಮಾತನಾಡಿದ ರಮೇಶ್ ಬಾಬು ಅವರು, "ಯುಜಿಡಿ ಯೋಜನೆಯಲ್ಲಿ ಭಾರಿ ಲೋಪದೋಷಗಳು ನಡೆದಿರುವ ಸಂಶಯವಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಸಾರ್ವಜನಿಕರ ಹಣ ಪೋಲಾಗಲು ಬಿಡುವುದಿಲ್ಲ. ಬಾಕಿ ಕೆಲಸಗಳನ್ನು ಕೂಡಲೇ ಪೂರ್ಣಗೊಳಿಸಿ ಸುಗಮ ವ್ಯವಸ್ಥೆ ಕಲ್ಪಿಸಬೇಕು" ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಕಾಂಗ್ರೆಸ್ ಮುಖಂಡರಿಂದ ಸ್ವಾಗತ:
ಎಂಎಲ್‌ಸಿ ರಮೇಶ್ ಬಾಬು ಅವರ ಈ ದಿಟ್ಟ ಕ್ರಮವನ್ನು ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಡಿ. ಚಂದ್ರಶೇಖರ್ ಹಾಗೂ ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಟಿ. ಚಿಕ್ಕಣ್ಣ ಅವರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. "ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗೆ ಈಗ ನ್ಯಾಯ ಸಿಗುವ ಭರವಸೆ ಮೂಡಿದೆ" ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಯುಜಿಡಿ ಮುಖ್ಯ ಅಭಿಯಂತರರು, ತುಮಕೂರು ವಿಭಾಗದ ಅಭಿಯಂತರರು, ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಶ್ರೀಮತಿ ಮಮತಾ, ಪುರಸಭೆ ಪೌರಾಯುಕ್ತರಾದ ಪಿ.ಡಿ. ಯೋಗಾನಂದ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

101
6404 views