
ಬಡಕೆಗುಡ್ಲು ಗ್ರಾಮದ ‘ಬಕ್ಕನಕಟ್ಟೆ ಕೆರೆ’ ಅಭಿವೃದ್ಧಿ: ಗ್ರಾಮಸ್ಥರಿಗೆ ಲೋಕಾರ್ಪಣೆ
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಕೆಗುಡ್ಲು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ವತಿಯಿಂದ ಪುನಶ್ಚೇತನಗೊಂಡ 908ನೇ “ನಮ್ಮೂರು ನಮ್ಮ ಕೆರೆ” (ಬಕ್ಕನಕಟ್ಟೆ ಕೆರೆ) ಹಸ್ತಾಂತರ ಕಾರ್ಯಕ್ರಮವು ಇಂದು ಶುಕ್ರವಾರ ಸಂಭ್ರಮದಿಂದ ಜರುಗಿತು. ಪರಮಪೂಜ್ಯ ರಾಜರ್ಷಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಈ ಕೆರೆಯ ಹೂಳೆತ್ತಲಾಗಿದ್ದು, ಇದನ್ನು ಇಂದು ಅಧಿಕೃತವಾಗಿ ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆರೆ ಪ್ರಮಾಣ ಪತ್ರ ವನ್ನು ವಿತರಣೆ ಮಾಡಿದ ತುಮಕೂರು 2 ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ಮಾತನಾಡಿ " ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದಾದ್ಯಂತ 1000 ಕೆರೆಗಳನ್ನು ಅಭಿವೃದ್ಧಿ ಗೊಳಿಸಿ ಗ್ರಾಮಸ್ಥರಿಗೆ ಹಸ್ತಾಂತರ ಮಾಡುವ ಕ್ರಮ ಕೈಗೊಳ್ಳಲಾಗುತ್ತಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಈ ವರ್ಷದಲ್ಲಿ ಎರಡನೇ ಕೆರೆ ಇದಾಗಿದ್ದು ಈಗಾಗಲೇ ತಿಮ್ಮನಹಳ್ಳಿ ಯ ಕೆರೆ ಕಾಮಗಾರಿ ಮುಗಿಸಿ ಹಸ್ತಾಂತರ ಮಾಡಲಾಗಿದೆ. ಅಂತರ್ಜಲ ಹೆಚ್ಚು ಗೊಳಿಸಿ ಈ ಭಾಗದಲ್ಲಿನ ರೈತರಿಗೆ, ಜನ ಜಾನುವಾರುಗಳಿಗೆ ಅನುಕೂಲವಾಗಲು ಕೆರೆ ಹೂಳೆತ್ತುವ ಮೂಲಕ ಕೆರೆ ಅಭಿವೃದ್ಧಿ ಗೆ ಕೈಜೋಡಿಲಾಗಿದೆ. "
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲ್ಲೂಕು ಯೋಜನಾಧಿಕಾರಿಗಳಾದ ಶ್ರೀ ಪ್ರೇಮಾನಂದ ಎಲ್.ಬಿ. ಅವರು ಮಾತನಾಡಿ, ಪೂಜ್ಯ ಹೆಗ್ಗಡೆಯವರ ಜಲಸಂರಕ್ಷಣಾ ಯೋಜನೆಯಿಂದಾಗಿ ಕೆರೆಯ ಸಂಗ್ರಹ ಸಾಮರ್ಥ್ಯ ಹೆಚ್ಚಾಗಿದ್ದು, ಇದು ಬಡಕೆಗುಡ್ಲು ಗ್ರಾಮದ ಅಂತರ್ಜಲ ವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ನೇತ್ರಾವತಿ ಅವರು ಕೆರೆಯ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಾ, ಜಲಮೂಲಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಶ್ರೀ ಬಾಬು ಶ್ರೀನಿವಾಸ್, ಕೃಷಿ ಮೇಲ್ವಿಚಾರಕರಾದ ಶ್ರೀ ಪ್ರಕಾಶ್ ಕೆ. ಹಾಗೂ ವಲಯ ಮೇಲ್ವಿಚಾರಕಿ ಶ್ರೀಮತಿ ಗಾಯಿತ್ರಿ ಅವರು ಉಪಸ್ಥಿತರಿದ್ದರು.
ಬಡಕೆಗುಡ್ಲು ಕೆರೆ ಸಮಿತಿ ಅಧ್ಯಕ್ಷ ಶ್ರೀ ರಾಮಚಂದ್ರಪ್ಪ ಬಿ.ಸಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಸಮಿತಿಯ ಸದಸ್ಯರುಗಳಾದ ಲಕ್ಷ್ಮಯ್ಯ, ಪೂಜಾರ್ ಯಲ್ಲಪ್ಪ, ಗೋವಿಂದಪ್ಪ ಬಿ.ಪಿ., ಗೋವಿಂದರಾಜು, ಬಿ.ಎಸ್. ಕೃಷ್ಣಮೂರ್ತಿ, ಟಿ. ತಿಮ್ಮಯ್ಯ ಹಾಗೂ ಗ್ರಾಮದ ಮುಖಂಡರಾದ ಗೋವಿಂದಪ್ಪ, ವೆಂಕಟರಾಮಯ್ಯ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು. ಕೆರೆಗೆ ಮರುಜೀವ ನೀಡಿದ ಧರ್ಮಸ್ಥಳ ಯೋಜನೆಯ ಕಾರ್ಯಕ್ಕೆ ಬಡಕೆಗುಡ್ಲು ಗ್ರಾಮದ ಜನತೆ ಹರ್ಷ ವ್ಯಕ್ತಪಡಿಸಿದರು.