
BKP NEWS Impact: ಆಂಬುಲೆನ್ಸ್ ಚಾಲಕರ ಪರ ಧ್ವನಿ ಎತ್ತಿದ ಲಂಚಮುಕ್ತ ಕರ್ನಾಟಕ ವೇದಿಕೆಯ ಜಿಲ್ಲಾ ಕಾರ್ಯದರ್ಶಿಗಳಾದ ಬಿ.ಎನ್. ಮಂಜುನಾಥ್ ; ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ!
ಚಿಕ್ಕನಾಯಕನಹಳ್ಳಿ: ಆಂಬುಲೆನ್ಸ್ ಚಾಲಕರ ಸಮಸ್ಯೆಗೆ ಸ್ಪಂದನೆ; ಆಸ್ಪತ್ರೆ ಆವರಣದಲ್ಲೇ ವಿಶ್ರಾಂತಿ ಕೊಠಡಿ ಮಂಜೂರು
ಚಿಕ್ಕನಾಯಕನಹಳ್ಳಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಆಂಬುಲೆನ್ಸ್ ಚಾಲಕರ ಬಹುದಿನಗಳ ಬೇಡಿಕೆಯಾಗಿದ್ದ ವಿಶ್ರಾಂತಿ ಕೊಠಡಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. BKP NEWS ವರದಿಯ ಬೆನ್ನಲ್ಲೇ ಲಂಚಮುಕ್ತ ಕರ್ನಾಟಕ ವೇದಿಕೆಯ ಮನವಿಗೆ ಸ್ಪಂದಿಸಿದ ಆರೋಗ್ಯ ಇಲಾಖೆ, ಚಾಲಕರಿಗೆ ಪ್ರತ್ಯೇಕ ಕೊಠಡಿ ಮಂಜೂರು ಮಾಡಲು ಆದೇಶಿಸಿದೆ.
ಘಟನೆ ಹಿನ್ನೆಲೆ:
ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕರು ತುರ್ತು ಸಂದರ್ಭಗಳಲ್ಲಿ ಕೆಲಸ ನಿರ್ವಹಿಸಲು ಆಸ್ಪತ್ರೆಯಲ್ಲೇ ಇರಬೇಕಾಗಿತ್ತು. ಆದರೆ, ಅವರಿಗೆ ಸರಿಯಾದ ವಿಶ್ರಾಂತಿ ಕೊಠಡಿ, ಕುಡಿಯುವ ನೀರು ಹಾಗೂ ಶೌಚಾಲಯದಂತಹ ಕನಿಷ್ಠ ಸೌಲಭ್ಯಗಳಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ BKP NEWS ಸವಿಸ್ತಾರವಾದ ವರದಿಯನ್ನು ಬಿತ್ತರಿಸುವ ಮೂಲಕ ಆಡಳಿತ ಮಂಡಳಿಯ ಗಮನ ಸೆಳೆದಿತ್ತು.
ಈ ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದ ಲಂಚಮುಕ್ತ ಕರ್ನಾಟಕ ವೇದಿಕೆಯ ಜಿಲ್ಲಾ ಕಾರ್ಯದರ್ಶಿಗಳಾದ ಬಿ.ಎನ್. ಮಂಜುನಾಥ್ ರವರು, ಕೂಡಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ (DHO) ಪತ್ರ ಬರೆದಿದ್ದರು. ಆಸ್ಪತ್ರೆಯ ಆವರಣದಲ್ಲಿ ಲಭ್ಯವಿರುವ ಸುಸ್ಥಿತಿಯಲ್ಲಿರುವ ಕೊಠಡಿಯೊಂದನ್ನು ಚಾಲಕರಿಗೆ ಮಂಜೂರು ಮಾಡಿ, ಮೂಲಭೂತ ಸೌಕರ್ಯ ಒದಗಿಸಲು ಆಡಳಿತ ವೈದ್ಯಾಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿ ಮಾಡಿದ್ದರು.
ಅಧಿಕಾರಿಗಳ ಸ್ಪಂದನೆ:
ಮನವಿಯ ಗಂಭೀರತೆಯನ್ನು ಅರಿತ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಿಗೆ ತುರ್ತು ನಿರ್ದೇಶನ ನೀಡಿದ್ದಾರೆ. ಅದರಂತೆ, ಚಾಲಕರಿಗೆ ವಿಶ್ರಾಂತಿ ಕೊಠಡಿ ನೀಡಲು ಆಸ್ಪತ್ರೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ.
ವೇದಿಕೆಯ ಈ ಜನಪರ ಕಾಳಜಿ ಹಾಗೂ ಬಿ.ಎನ್. ಮಂಜುನಾಥ್ ಅವರ ಶ್ರಮಕ್ಕೆ ಆಂಬುಲೆನ್ಸ್ ಚಾಲಕರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ