logo

ತಾಳಿಕೋಟೆ ತಾಲೂಕಿಗೆ ಪ್ರಜಾಸೌಧ ಎಲ್ಲೆ ನಿರ್ಮಾಣ? ಪಟ್ಟಣದ ಹೃದಯ ಭಾಗದಲ್ಲೇ ನಿರ್ಮಿಸಬೇಕು ಎಂದು ನಾಗರಿಕರ ಆಗ್ರಹ

ತಾಳಿಕೋಟೆ: ತಾಲೂಕಿಗೆ ಹೊಸದಾಗಿ ನಿರ್ಮಾಣವಾಗಲಿರುವ ಪ್ರಜಾಸೌಧವನ್ನು ಪಟ್ಟಣದಿಂದ ದೂರದಲ್ಲಿರುವ ಮೈಲೇಶ್ವರ ಗ್ರಾಮದ ಹತ್ತಿರ ನಿರ್ಮಿಸುವ ಪ್ರಸ್ತಾವನೆಗೆ ರಕ್ಷಣಾ ವೇದಿಕೆ ಹಾಗೂ ತಾಳಿಕೋಟೆ ಪಟ್ಟಣದ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪಟ್ಟಣದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಜಾಗದಲ್ಲಿ ಪ್ರಜಾಸೌಧ ನಿರ್ಮಾಣವಾದರೆ ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಮಹಿಳೆಯರಿಗೆ ಕಚೇರಿಗಳ ವ್ಯವಹಾರಕ್ಕೆ ತೆರಳಲು ತೀವ್ರ ತೊಂದರೆ ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಪರಿಶೀಲನೆ ಮಾಡಿರುವ ಜಾಗವನ್ನು ಕೈಬಿಟ್ಟು, ತಾಳಿಕೋಟೆ ಪಟ್ಟಣದ ಹೃದಯ ಭಾಗದಲ್ಲೇ ಪ್ರಜಾಸೌಧ ನಿರ್ಮಿಸಬೇಕೆಂದು ಮನವಿ ಸಲ್ಲಿಸಲಾಗಿದೆ.
ನಾಗರಿಕರ ಅಭಿಪ್ರಾಯದಂತೆ, ಪ್ರಜಾಸೌಧವು ಪಟ್ಟಣದೊಳಗೇ ನಿರ್ಮಾಣವಾದಲ್ಲಿ ತಾಳಿಕೋಟೆ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಸಾರ್ವಜನಿಕರಿಗೆ ಸಹ ಅನುಕೂಲವಾಗಲಿದೆ. ಈ ಸಂಬಂಧವಾಗಿ ಅವರು ಪಟ್ಟಣದ ಸಮೀಪದಲ್ಲಿರುವ ನಾಲ್ಕು ಸ್ಥಳಗಳನ್ನು ಪ್ರಸ್ತಾಪಿಸಿದ್ದಾರೆ.
ಅವುಗಳಲ್ಲಿ ದೇವರ ಹಿಪ್ಪರಗಿ ರಸ್ತೆಯ ಆಶ್ರಯ ಕಾಲೋನಿ ಸಮೀಪದಲ್ಲಿರುವ ಸರಕಾರಿ ಜಾಗ, ತಾಳಿಕೋಟೆ ನಗರದ ಹೃದಯ ಭಾಗದಲ್ಲಿರುವ ಹಳೆಯ ಪುರಸಭೆ ಕಾರ್ಯಾಲಯದ ಸ್ಥಳ, ಪುರಸಭೆ ವ್ಯಾಪ್ತಿಯ ನಾಗರಿಕ ಸೌಲಭ್ಯಗಳ ಜಾಗ ಹಾಗೂ ಪಟ್ಟಣದ ಮಧ್ಯಭಾಗದಲ್ಲಿರುವ ಈಗಿನ ಪ್ರವಾಸಿ ಮಂದಿರದ ಸುತ್ತಲಿನ ವಿಶಾಲ ಜಾಗಗಳು ಸೇರಿವೆ.
ಈ ಮೇಲ್ಕಂಡ ಜಾಗಗಳಲ್ಲಿ ಪ್ರಜಾಸೌಧ ನಿರ್ಮಾಣ ಮಾಡಿದಲ್ಲಿ ಎಲ್ಲ ವರ್ಗದ ನಾಗರಿಕರಿಗೆ, ವಿಶೇಷವಾಗಿ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಅಂಗವಿಕಲರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರಕ್ಷಣಾ ವೇದಿಕೆ ಹಾಗೂ ನಾಗರಿಕರು ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

10
238 views