
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜೀವನಮಟ್ಟ ಸುಧಾರಣೆ: ಮಲ್ಲಿಕಾರ್ಜುನ ದೇಶಿ ಸ್ವಾಮೀಜಿ
ಚಿಕ್ಕನಾಯಕನಹಳ್ಳಿ:
ಪಟ್ಟಣದ ಶ್ರೀ ಸೀತಾರಾಮ ಬಲಿಜ ಭಜನಾ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ಶ್ರೀ ಅಷ್ಟಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣಪ್ಪ ಅವರು ವಹಿಸಿದ್ದರು. ವಿರಕ್ತ ಮಠ ಕುಪ್ಪೂರು ಶ್ರೀ ಶ್ರೀ ಶ್ರೀ ಮಲ್ಲಿಕಾರ್ಜುನ ದೇಶಿ ಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ವೇಳೆ ಮಾತನಾಡಿದ ಅವರು, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮಾಭಿವೃದ್ಧಿ ಯೋಜನೆಗಳಿಂದ ಅನೇಕ ಕುಟುಂಬಗಳ ಜೀವನಮಟ್ಟದಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದ್ದು, ಪೂಜ್ಯರ ಸಾಮಾಜಿಕ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಂಘ ವೇದಿಕೆ ಅಧ್ಯಕ್ಷ ಸಿ.ಬಿ. ರೇಣುಕಸ್ವಾಮಿ ಅವರು, ಯೋಜನೆಯ ವಿವಿಧ ಕಾರ್ಯಕ್ರಮಗಳು ಗ್ರಾಮೀಣ ಜನರ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ನೆರವಾಗುತ್ತಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಯೋಜನೆಯಿಂದ ಲಭಿಸುವ ಸೌಲಭ್ಯಗಳು ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಹಕಾರಿಯಾಗಿದೆ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಅವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಚಟುವಟಿಕೆಗಳು ಹಾಗೂ ಜನಪರ ಯೋಜನೆಗಳ ಕುರಿತು ಸವಿವರ ಮಾಹಿತಿ ನೀಡಿದರು. ತಾಲ್ಲೂಕು ಯೋಜನಾಧಿಕಾರಿ ಪ್ರೇಮಾನಂದ ಎಲ್.ಬಿ. ಪ್ರಸ್ತಾವನೆ ಮಂಡಿಸಿದರು.
ಕಾರ್ಯಕ್ರಮದಲ್ಲಿ ವಲಯದ ಎಲ್ಲಾ ಒಕ್ಕೂಟಗಳ ಅಧ್ಯಕ್ಷರುಗಳು, ವಲಯ ಮೇಲ್ವಿಚಾರಕಿ ಆಶಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕವಿತಾ, ಸೇವಾ ಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.