logo

ಚಿಕ್ಕನಾಯಕನಹಳ್ಳಿ: ಮಹಿಳೆಗೆ ಮಹಿಳೆ ಸ್ಪೂರ್ತಿ – ತಹಸೀಲ್ದಾರ್ ಮಮತ ಎಂ.

ಚಿಕ್ಕನಾಯಕನಹಳ್ಳಿ ಪಟ್ಟಣದ ಶ್ರೀ ಬನಶಂಕರಿ ಪ್ರಾರ್ಥನಾ ಮಂದಿರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿಸಿ ಟ್ರಸ್ಟ್) ವತಿಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ಸ್ವಉದ್ಯೋಗ, ಸಾಂಸ್ಕೃತಿಕ ಚಟುವಟಿಕೆಗಳು, ರಂಗೋಲಿ ಸ್ಪರ್ಧೆ ಹಾಗೂ ಪುಷ್ಪಗುಚ್ಚ ತಯಾರಿಕೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಮಮತ ಎಂ., “ಮಹಿಳೆಗೆ ಮಹಿಳೆಯೇ ಸ್ಪೂರ್ತಿ. ತಾಳ್ಮೆ, ಸಹನೆ, ಧೈರ್ಯ ಮತ್ತು ಮನೋಸ್ಥೈರ್ಯದ ಮೂಲಕ ಕುಟುಂಬ, ಸಮಾಜ ಹಾಗೂ ದೇಶವನ್ನು ಕಟ್ಟುವ ಮಹತ್ತರ ಜವಾಬ್ದಾರಿ ಮಹಿಳೆಯರಲ್ಲಿದೆ. ಮಹಿಳೆಯರು ತಮ್ಮಗೆ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆಯ ಮೂಲಕ ತಮ್ಮ ಶಕ್ತಿಯನ್ನು ತೋರಿಸಬೇಕು” ಎಂದು ಕರೆ ನೀಡಿದರು.
ಇನ್ನೂ ಮಾತನಾಡಿದ ಅವರು, “ಸಮಾಜದಲ್ಲಿ ಹೆಣ್ಣು–ಗಂಡು ಎಂಬ ಭೇದಭಾವವಿಲ್ಲದೆ ಸಮಾನತೆಯ ದೃಷ್ಟಿಕೋನ ಬೆಳೆಸಬೇಕು. ಮನೆಯ ಗಂಡು ಮಕ್ಕಳಿಗೆ ದೊರೆಯುವ ಗೌರವ, ಅವಕಾಶಗಳು ಹೆಣ್ಣು ಮಕ್ಕಳಿಗೂ ಸಿಗುವಂತೆ ಮಾಡಬೇಕಾಗಿದೆ” ಎಂದು ತಿಳಿಸಿದರು.
ಎಸ್‌ಕೆಡಿಆರ್‌ಡಿಪಿ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ, “ಸಮಾಜದಲ್ಲಿ ಮಹಿಳೆಯರ ಪಾತ್ರ ಅತ್ಯಂತ ದೊಡ್ಡದು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿದಾಗ ಮಾತ್ರ ಕುಟುಂಬ ಹಾಗೂ ಸಮಾಜದಲ್ಲಿ ನೈಜ ಬದಲಾವಣೆ ಸಾಧ್ಯ. ಮಹಿಳಾ ಆರ್ಥಿಕ ಸ್ವಾವಲಂಬನೆಗೆ ಮೊದಲ ಆದ್ಯತೆ ನೀಡಬೇಕು. ಬಾಲ್ಯವಿವಾಹ ತಡೆ, ಶಿಕ್ಷಣ ಮತ್ತು ‘ಬೇಟಿ ಪಡವೋ’ ಕೇವಲ ಘೋಷಣೆಯಾಗದೇ ಕಾರ್ಯರೂಪಕ್ಕೆ ಬರಬೇಕು” ಎಂದರು.
ವಿಶೇಷ ಉಪನ್ಯಾಸ ನೀಡಿದ ಕಾಚಪುರ ರಂಗಪ್ಪ, “ಆಧುನಿಕತೆ ಮತ್ತು ತಾಂತ್ರಿಕ ಯುಗದ ಪ್ರಭಾವದಿಂದ ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಎಚ್ಚರ ತಪ್ಪಿಸುತ್ತಿದ್ದಾರೆ. ತಂದೆ–ತಾಯಿಯ ಮಾರ್ಗದರ್ಶನದ ಕೊರತೆಯಿಂದಲೇ ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮಿ ಪಾಂಡುರಂಗಯ್ಯ ಮಾತನಾಡಿ, “ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಡಿ ಮಹಿಳೆಯರಿಗೆ ಸ್ವಾವಲಂಬಿ ಜೀವನ ಕಲ್ಪಿಸಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅದರ ಫಲವಾಗಿ ಮಹಿಳೆಯರು ಕುಟುಂಬ ಹಾಗೂ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ” ಎಂದರು.
ಈ ವೇಳೆ ಮಹಿಳಾ ಸಾಧಕಿಯರನ್ನು ಗುರುತಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿದ್ದು, ಗುಡಿ ಕೈಗಾರಿಕಾ ಉತ್ಪನ್ನಗಳು ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ಯೋಜನಾ ನಿರ್ದೇಶಕರಾದ ಪ್ರೇಮಾನಂದ್ ಎಲ್.ಬಿ., ಜನಜಾಗೃತಿ ವೇದಿಕೆ ಸದಸ್ಯ ಜಯಪ್ರಭ, ಕವಿತಾ ಸೇರಿದಂತೆ ಸಂಘದ ಮಹಿಳಾ ಪ್ರತಿನಿಧಿಗಳು ಹಾಗೂ ಮೇಲ್ವಿಚಾರಕರು ಭಾಗವಹಿಸಿದ್ದರು.

1
14 views