logo

ರೈತ ಉಳಿದರೆ ದೇಶ ಉಳಿಯುತ್ತದೆ – ನೀರು, ವಿದ್ಯುತ್ ನೀಡಿದರೆ ರೈತರು ಸ್ವಾವಲಂಬಿ ಜೀವನ ನಡೆಸಬಹುದು: ಶಾಸಕ ಸಿ.ಬಿ.ಸುರೇಶ್‌ಬಾಬು

ಚಿಕ್ಕನಾಯಕನಹಳ್ಳಿ, ಡಿ.24:
ಅಧುನಿಕ ತಂತ್ರಜ್ಞಾನ ಮತ್ತು ರಾಸಾಯನಿಕ ಗೊಬ್ಬರ–ಕೀಟನಾಶಕಗಳ ಅತಿಯಾದ ಬಳಕೆಯಿಂದ ಇಂದು ವಿಷಯುಕ್ತ ಆಹಾರ ಉತ್ಪಾದನೆಯಾಗುತ್ತಿದ್ದು, ಇದರಿಂದ ಮಾನವನ ಆಯುಷ್ಯ ಮತ್ತು ಆರೋಗ್ಯ ಎರಡೂ ಕ್ಷೀಣಿಸುತ್ತಿವೆ. ಆದ್ದರಿಂದ ರೈತರು ನಮ್ಮ ಪೂರ್ವಜರ ಕೃಷಿ ಪದ್ಧತಿಯಾದ ಸಾವಯವ ಕೃಷಿಯತ್ತ ಮುಖ ಮಾಡಬೇಕಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳಿದರು.
ಪಟ್ಟಣದ ತೀ.ನಂ.ಶ್ರೀ ಭವನದಲ್ಲಿ ಬುಧವಾರ ಕೃಷಿ ಇಲಾಖೆ, ಪಶುಸಂಗೋಪನಾ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ರೇಷ್ಮೆ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರೈತರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರು ಹೆಚ್ಚು ಇಳುವರಿಗಾಗಿ ಅತಿಯಾದ ರಾಸಾಯನಿಕಗಳನ್ನು ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಇದರಿಂದ ಕೃಷಿಯ ಮೂಲ ಸತ್ವವೇ ನಾಶವಾಗುತ್ತಿದೆ. ರೈತರು ಸಾವಯವ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಸಮಾಜಕ್ಕೆ ಉತ್ತಮ ಆರೋಗ್ಯ ನೀಡಬಹುದು ಎಂದರು.
ಕೃಷಿ ಇಲಾಖೆಯಿಂದ 7 ಸಾವಿರ ರೈತರಿಗೆ ತುಂತುರು ನೀರಾವರಿ ಯೋಜನೆಯಡಿ ಸ್ಪಿಂಕ್ಲರ್‌ಗಳು, 400 ರೈತರಿಗೆ ವಿವಿಧ ಯಂತ್ರೋಪಕರಣಗಳ ವಿತರಣೆ, ಬೆಳೆ ಕಟಾವಿಗೆ ಒಂದು ಯಂತ್ರ ಹಾಗೂ 350 ರೈತರಿಗೆ ಕೃಷಿಭಾಗ್ಯ ಯೋಜನೆಯಡಿ ಅನುದಾನ ನೀಡಲಾಗಿದೆ. ಜೊತೆಗೆ ರಾಜ್ಯದಲ್ಲೇ ಅಪರೂಪವಾದ ಸಾವಯವ ಬೆಳೆ ಸಂಸ್ಕರಣಾ ಘಟಕಗಳಲ್ಲಿ ಒಂದನ್ನು ₹50 ಲಕ್ಷ ವೆಚ್ಚದಲ್ಲಿ ತಾಲ್ಲೂಕಿನಲ್ಲಿ ಉದ್ಘಾಟಿಸಲಾಗಿದೆ ಎಂದು ತಿಳಿಸಿದರು. ರೈತರು ಲಾಭದಾಯಕ ಬೆಳೆಗಳನ್ನು ಬೆಳೆಯುವತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ್ ಮಾತನಾಡಿ, ರೈತರು ಸಹಕಾರ ಸಂಘಗಳ ಮೂಲಕ ತಾವು ಬೆಳೆದ ಬೆಳೆಗೆ ತಾವೇ ಬೆಲೆ ನಿಗದಿ ಮಾಡಿಕೊಳ್ಳಬಹುದು ಎಂದರು. ದ್ವಿದಳ ಬೆಳೆಗಳು, ಹಸಿರು ಎಲೆ ಗೊಬ್ಬರ, ಜೀವಾಮೃತ ಹಾಗೂ ಭೂ ಕೃಪಾಮೃತ ಬಳಸಿ ಸಿರಿಧಾನ್ಯ ಕೃಷಿ ಮೂಲಕ ಸ್ವಾವಲಂಬನೆ ಸಾಧಿಸಬೇಕು ಎಂದು ಸಲಹೆ ನೀಡಿದರು.
ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ, 2001ರ ಡಿಸೆಂಬರ್ 23ರಂದು ರಾಷ್ಟ್ರಿಯ ರೈತರ ದಿನಾಚರಣೆ ಘೋಷಿಸಲಾಯಿತು. ಈ ಸಂದರ್ಭದಲ್ಲಿ ರೈತರ ಪರ ಹೋರಾಟ ಮಾಡಿದ ಶಾಂತವೀರ ಗೋಪಾಲಕೃಷ್ಣ ಹಾಗೂ ಪ್ರೊ. ನಂಜುಂಡಸ್ವಾಮಿಯವರನ್ನು ನೆನೆಪಿಸಿಕೊಳ್ಳಬೇಕು ಎಂದರು.
ಕೃಷಿಕ ಸಮಾಜದ ಅಧ್ಯಕ್ಷ ಗಂಗಾಧರ್ ಮಾತನಾಡಿ, ರೈತರು ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಮಳೆಯ ಮೇಲೆ ಅವಲಂಬಿತರಾಗಿದ್ದಾರೆ. ಬಿಪಿಎಲ್ ಕಾರ್ಡ್ ರದ್ದತಿ ರೈತರಿಗೆ ಸಂಕಷ್ಟ ತಂದಿದೆ. ಈ ಆದೇಶವನ್ನು ಹಿಂಪಡೆಯುವಂತೆ ಸರ್ಕಾರದ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಲಾಖೆಯ ಉಪನಿರ್ದೇಶಕ ಹುಲಿರಾಜ್, ಡಿಸೆಂಬರ್ 23ನ್ನು ಚರಣ್‌ಸಿಂಗ್ ಚೌಧರಿಯವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ರೈತರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಜ್ಞಾನೇಶ್, ಕೃಷಿ ವಿಜ್ಞಾನಿ ಡಾ.ಶಂಕರ್, ಕೆಡಿಪಿ ಸದಸ್ಯರು, ರೈತ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.

0
77 views