logo

ಭೂತಾಯಿಗೆ ಕೃತಜ್ಞತೆ ಸಲ್ಲಿಸುವ ಹಬ್ಬ ಈ ಎಳ್ಳ ಅಮಾವಾಸ್ಯೆ.

ಎಳ್ಳ ಅಮಾವಾಸ್ಯೆ ಎಂದರೆ ನಮ್ಮ ಉತ್ತರ ಕರ್ನಾಟಕದಲ್ಲಿ ಚರಗಾ ಚೆಲ್ಲುವ ಹಬ್ಬವೆಂದೆ ಜನಮಾನಸದಲ್ಲಿ ಉಳಿದಿದೆ. ಬಹುತೇಕರು ಚರಗಾ ಚೆಲ್ಲುವ ಹಬ್ಬ ಅಂತಲೆ ವಿಜೃಂಭಣೆಯಿಂದ ಆಚರಿಸುತ್ತಾರೆ. ಬಹುಷಃ ದೀಪಾವಳಿ ಹಬ್ಬದಂತೆ ಎಲ್ಲರಲ್ಲೂ ಸಡಗರ ಸಂಭ್ರಮ ತುಂಬಿರುತ್ತದೆ ಎಂದರೆ ತಪ್ಪಲ್ಲ. ಏಕೆಂದರೆ ಎಳ್ಳು ಅಮಾವಾಸ್ಯೆ ಎಂಬುದು ಈ ಮಣ್ಣಿನ ಮಕ್ಕಳ ಹಬ್ಬ. ಭಾರತ ಮೂಲತಃ ಗ್ರಾಮೀಣ ಪ್ರದೇಶಗಳ ಸಂಸ್ಕೃತಿ ಸಂಪ್ರದಾಯಗಳೇ ಜೀವಾಳ.ಇದು ಕೇವಲ ಒಂದು ಆಚರಣೆ ಮಾತ್ರವಲ್ಲ; ರೈತ ಮತ್ತು ಭೂಮಿ ತಾಯಿಯ ನಡುವಿನ ಆತ್ಮೀಯ ಸಂಬಂಧದ ಜೀವಂತ ಪ್ರತೀಕ.ಹಸಿವ ಹಿಂಗಿಸುವ ಭೂದೇವಿಗೆ ಭಕ್ತಿಪೂರ್ವಕವಾಗಿ ಕೃತಜ್ಞತೆ ಸಲ್ಲಿಸುವ ಹಬ್ಬ. ಈ ದಿನ ರೈತರ ಮನೆಗಳಲ್ಲಿ ವಿಧವಿಧವಾದ ಅಡುಗೆಗಳು ಸಿದ್ಧವಾಗುತ್ತವೆ. ಮುಖ್ಯವಾಗಿ ಎಳ್ಳ ಅಮಾವಾಸ್ಯೆ ಎಂದರೆ ಎಳ್ಳು ಹಚ್ಚಿದ ಸಜ್ಜಿ ರೊಟ್ಟಿಯು ವಿಶೇಷ, ಶೇಂಗಾ ಹೋಳಿಗೆ, ಕರಚಿಕಾಯಿ, ಶೇಂಗಾ ಹಿಂಡಿ, ಅಗಸಿ ಹಿಂಡಿ, ಹೆಸರುಕಾಳು ಫಲ್ಯೆ, ಬದನೇಕಾಯಿ ಫಲ್ಯೆ, ಗಟ್ಟಿ ಮೊಸರು , ಆಹಾ ಇದನ್ನೆಲ್ಲಾ ನೆನೆಯುತ್ತಿದ್ದರೆ ಬಾಯಲ್ಲಿ ನೀರು ಬರುತ್ತೇ. ಇದೆಲ್ಲವನ್ನು ಆ ಭೂತಾಯಿಗೆ ಎಡೆ ಇಡಲು ತಯಾರು ಮಾಡುತ್ತಾರೆ ಹಾಗೆ ನಸುಕಿನ ಜಾವವೇ ಎದ್ದು ರೈತನ ಸಂಗಾತಿ ಎಂದರೆ ಎತ್ತುಗಳು ಆ ಎತ್ತುಗಳಿಗೆ ಬಗೆಬಗೆ ಬಣ್ಣದಲ್ಲಿ ಸಿಂಗರಿಸಲಾಗುತ್ತದೆ. ಮನೆಮಂದಿಯೆಲ್ಲರೂ ಒಂದಾಗಿ ಎತ್ತಿನಗಾಡಿಯಲ್ಲಿ ಹೊಲಕ್ಕೆ ಹೊರಟು, ಚರಗ ಚೆಲ್ಲುವ ಆ ಸಂಭ್ರಮಕ್ಕೆ ಪದಗಳೇ ಸಾಲದು. ಮಣ್ಣಿನ ವಾಸನೆ, ಬೆವರಿನ ತೃಪ್ತಿ, ಬದುಕಿನ ಸರಳ ಸಂತೋಷ—ಇವೆಲ್ಲವೂ ಒಂದೇ ದಿನದಲ್ಲಿ ಒಟ್ಟಾಗಿ ಅನುಭವವಾಗುತ್ತದೆ. ಈ ಆಧುನಿಕ ಕಾಲದಲ್ಲಿ ದುಡ್ಡು ಕೊಟ್ಟರೆ ಎಲ್ಲವು ಸಿಗುತ್ತದೆ, ಅದರಲ್ಲೂ ಸಂಭಂದಗಳು ದೂರಾಗುವ ಹೊತ್ತಿನಲ್ಲಿ, ಸಂಭಂದಗಳನ್ನು ಗಟ್ಟಿಯಾಗಿ ಉಳಿಸಿಕೊಂಡಿರುವುದು ಇಂತಹ ಹಬ್ಬಗಳಿಂದಲೇ ಎಂದರೆ ತಪ್ಪಾಗಲಾರದು. ಆದರೆ ಆಧುನಿಕತೆಯ ಭರಾಟೆಯಲ್ಲಿ ನಾವು ನಮ್ಮತನವನ್ನು, ಇಂತಹ ಶ್ರೇಷ್ಠ ಸಂಪ್ರದಾಯಗಳನ್ನು ಮರೆಯುತ್ತಿರುವುದು ನೋವಿನ ಸಂಗತಿ.ಅದರಲ್ಲೂ ಉತ್ತರ ಕರ್ನಾಟಕ ಸಾಮರಸ್ಯದ ಬೀಡು , ಈ ಚರಗಾ ಚೆಲ್ಲುವ ಹಬ್ಬವನ್ನು ಯಾವ ಜಾತಿ ಭೇಧ ವಿಲ್ಲದೆ ಹಾಗೂ ಧರ್ಮತೀತವಾಗಿ ಆಚರಿಸುತ್ತಾರೆ ಎನ್ನುವುದೇ ಮನಸ್ಸಿಗೆ ಸಮಾಧಾನ. ಅನೇಕ ಮುಸ್ಲಿಂ ಬಂಧುಗಳು ಸಹಾ ಭೂತಾಯಿಗೆ ಚರಗಾ ಚೆಲ್ಲಿ ಸಂತೋಷದಿಂದ ತಾವು ಹೊಲದಲ್ಲಿ ಕೂತು ಕುಟುಂಬ ಸಮೇತ ಊಟ ಮಾಡಿ ಹೋಗುತ್ತಾರೆ ಇದೆ ಈ ಮಣ್ಣಿನ ಮಹಿಮೆ.

ಆದರೆ ಕಾಲ ಬದಲಾಗಿದೆ. ಅಂದಿನಂತೆ ಇಂದು ಎತ್ತು ಕಟ್ಟಿಕೊಂಡು ಬೇಸಾಯ ಮಾಡುವ ರೈತರು ಬಹಳ ಕಡಿಮೆ. ಇದ್ದರೂ ಊರಲ್ಲಿ ಬೆರಳೆಣಿಕೆಯಷ್ಟು ಮಾತ್ರ. ಎಳ್ಳು ಅಮಾವಾಸ್ಯೆಯಂತಹ ಹಬ್ಬಗಳು ಇಂದು ನಗರ ಜೀವನಕ್ಕೆ ಒಗ್ಗಿಕೊಂಡಿರುವ, ರೈತರ ಮಕ್ಕಳಾಗಿ ಹುಟ್ಟಿ ನೌಕರಿಯ ಬದುಕಿನಲ್ಲಿ ತೊಡಗಿರುವ ನಮ್ಮಂತಹ ಅನೇಕ ಜನರಿಗೆ ಹೊಲ ನೋಡುವುದು, ಚರಗ ಚೆಲ್ಲುವುದು ಅಪರೂಪದ ಅನುಭವವಾಗಿಯೇ ಉಳಿದಿದೆ.

ಹೊಲದಲ್ಲಿ ಹಸಿರು ತುಗಾಡುತ್ತಿರುತ್ತದೆ ಅಲ್ಲಿ ಜೋಳ, ಗೋದಿ, ಮೆಕ್ಕೆ ಜೋಳ, ಕಬ್ಬು, ತೊಗರಿ ದ್ರಾಕ್ಷಿ, ಪೇರಲ, ಲಿಂಬೆ ಬೆಳೆ. ಈಗ ರೈತರು ಕೂಡ ಕಾಲಕ್ಕೆ ತಕ್ಕಂತೆ ತಾವು ಕೂಡ ಕೃಷಿ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ ಅದರಲ್ಲೂ ಸಮಗ್ರ ಕೃಷಿ ಪ್ರಯೋಗ ವಿಶೇಷವಾಗಿ ಗಮನ ಸೆಳೆಯಿತು. ಇದು ಕೇವಲ ಕೃಷಿಯ ಪ್ರಯೋಗವಲ್ಲ; ಭವಿಷ್ಯದ ಬಗ್ಗೆ ಹೊಣೆಗಾರಿಕೆಯ ಚಿಂತನೆಯ ಪ್ರತೀಕ. ಮಣ್ಣನ್ನು ಉಳಿಸುವುದು, ಮುಂದಿನ ತಲೆಮಾರಿಗೆ ಬದುಕಿನ ದಾರಿ ತೋರಿಸುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ.ಪ್ರಗತಿಪರ ರೈತ ನಾಗುವುದನ್ನು ಕಂಡು ಬಹಳ ಖುಷಿಯಾಯಿತು.

ಈ ಎಲ್ಲ ಅನುಭವಗಳ ನಡುವೆ ನಂತರ ನಡೆದ ಹಬ್ಬದ ಭೋಜನವೂ ಈ ದಿನದ ಸಂಭ್ರಮಕ್ಕೆ ಇನ್ನಷ್ಟು ಅರ್ಥ ತುಂಬಿತು. ಪರಿಷತ್ತಿನ ಅಲ್ಲಿರುವ ಎಲ್ಲರೂ ಪರಸ್ಪರ ಮಾತು ಆರಂಭಿಸಿದಾಗ ಕೃಷಿಯ ಬಗ್ಗೆ, ಹಳೆಯ ದಿನಗಳು, ಇಂದಿನ ಆಧುನಿಕತೆಯ ಕುರಿತು ಹಾಗೂ ಬದಲಾಗುತ್ತಿರುವ ಬದುಕು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಊಟದ ಜೊತೆಗೆ ನಡೆದ ಈ ಸಂವಾದವೂ ಸಹ ಹಬ್ಬದ ಭಾಗವಾಗಿಯೇ ಕಂಡಿತು.ಹಮ್ಮುಬಿಮ್ಮು ಮೇಲು ಕೀಳು ಎಂಬುದನ್ನು ಮರೆತು ಎಲ್ಲರು ಹೊಲದಲ್ಲಿ ಕುಳಿತು ಊಟ ಮಾಡುವುದರಲ್ಲಿಯ ತೃಪ್ತಿ ಎಲ್ಲೂ ಸಿಗುವುದಿಲ್ಲ. ಭೂತಾಯಿಯ ಮಡಿಲಲ್ಲಿ ಕುಳಿತಿದ್ದೇವೆ ಎನ್ನುವಂತೆ ಭಾಸವಾಯಿತು.

ಒಟ್ಟಿನಲ್ಲಿ ಇದು ನಿಜಕ್ಕೂ ಅರ್ಥಪೂರ್ಣ ಹಾಗೂ ಸ್ಮರಣೀಯ ಅನುಭವ. ಮಣ್ಣಿನ ಮಕ್ಕಳ ಹಬ್ಬವನ್ನು ಮಣ್ಣಿನ ಸುವಾಸನೆಯೊಂದಿಗೆ, ಮನಸ್ಸಿನ ಉಲ್ಲಾಸದೊಂದಿಗೆ ಆಚರಿಸಿದ ಈ ವರ್ಷದ ಎಳ್ಳು ಅಮಾವಾಸ್ಯೆ ನಮ್ಮ ನೆನಪಿನಲ್ಲಿ ಉಳಿಯುವ ದಿನವಾಯಿತು.
ಮೊದಲು ಎತ್ತಿನ ಬಂಡಿಯಲ್ಲಿ ಕುಳಿತು ಹೊಲಕ್ಕೆ ಹೋಗಿತ್ತಿದ್ದೆವು , ನಾ ಮುಂದು ತಾ ಮುಂದು ಎಂದು ಜಿದ್ದಿಗೆ ಬಿದ್ದವರಂತೆ ಎತ್ತಿನ ಗಾಡಿಯನ್ನು ಓಡಿಸುತ್ತಿದ್ದರು ಅದು ಎಷ್ಟೊಂದು ಮಜವಾಗಿರುತ್ತಿತ್ತು ಈಗ ಆ ಮಜಾ ಬರಿ ನೆನಪಿನಲ್ಲಿ ಮಾತ್ರ ಉಳಿದಿದೆ ಈಗ ಹಳ್ಳಿಗಳಿಗೆ ಬಹುತೇಕ ಎತ್ತಿನ ಬಂಡಿಗಳು ಮಾಯವಾಗಿವೆ ಅದರ ಜಾಗಕ್ಕೆ ಟ್ಯಾಕ್ಟರ್ ಬಂದು ಕೂತಿದೆ ಎಲ್ಲಾ ಕಾಲದ ಮಹಿಮೆ.
ಈ ಚರಗಾ ಚೆಲ್ಲುವ ಹಬ್ಬ ಮೊದಲಿನಂತೆ ಕಳೆ ಗಟ್ಟಲಿ ಹಾಗೂ ನಮ್ಮ ಮುಂದಿನ ಪೀಳಿಗೆಯವರು ಕೂಡ ಇದರ ಮಹತ್ವವನ್ನು ತಿಳಿದುಕೊಂಡು ಅವರು ಈ ಹಬ್ಬವನ್ನು ತಪ್ಪದೆ ಆಚರಿಸಲಿ, ಜಗದ ಎಲ್ಲ ಋಣವನ್ನು ನಾವು ತೀರಿಸಬಹುದು ಆದರೆ ತಾಯಿ ಹಾಗೂ ಮಾತೃಭೂಮಿಯ ಋಣ ತೀರಿಸಲು ಸಾಧ್ಯವೇಯಿಲ್ಲ.

8
68 views