
ಶಾಲೆಯಲ್ಲಿ ಹುಟ್ಟುಹಬ್ಬ ಆಚರಣೆ: ನಿಯಮ ಉಲ್ಲಂಘನೆಗೆ ಕ್ರಮವೇ? ಸಾರ್ವಜನಿಕರ ಪ್ರಶ್ನೆ
ಚಿಕ್ಕನಾಯಕನಹಳ್ಳಿ:
ಕ್ಷೇತ್ರ ಶಿಕ್ಷಣಾಧಿಕಾರಿಗಳ ಆಡಳಿತಾವಧಿಯಲ್ಲಿ ಕೆಲವು ಶಿಕ್ಷಕರು ಸರ್ಕಾರಿ ನಿಯಮಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಮನಸೋ ಇಚ್ಛೆಯಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಶಾಲಾ ಸಮಯದಲ್ಲೇ ಸರ್ಕಾರಿ ಶಾಲಾ ಆವರಣದಲ್ಲಿ ಶಿಕ್ಷಕರೊಬ್ಬರು ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಇದರ ಸ್ಪಷ್ಟ ಉದಾಹರಣೆಯಾಗಿದೆ.
15.12.2025 ಸೋಮವಾರ ಹರೇನಹಳ್ಳಿ ಗೊಲ್ಲರಟ್ಟಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಎಚ್.ಎಂ. ಸುರೇಶ್ ಅವರು ಶಾಲಾ ಸಮಯದಲ್ಲೇ ಶಾಲೆಯೊಳಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಇದರ ಛಾಯಾಚಿತ್ರಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.
ಸರ್ಕಾರಿ ಕಚೇರಿಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ವೈಯಕ್ತಿಕ ಕಾರ್ಯಕ್ರಮಗಳು ಹಾಗೂ ಹುಟ್ಟುಹಬ್ಬ ಆಚರಿಸುವುದನ್ನು ನಿಷೇಧಿಸಿರುವ ಸ್ಪಷ್ಟ ನಿಯಮಗಳಿದ್ದರೂ, ಸಂಬಂಧಪಟ್ಟ ಶಿಕ್ಷಕರು ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಹೋರಾಟಗಾರ ಲೋಕೇಶ್ ಹುಳಿಯಾರು ಸೇರಿದಂತೆ ಹಲವು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಕೋರ್ಟ್ ಸಿಬ್ಬಂದಿಗಳು ಹಾಗೂ ಮುಖ್ಯ ಅಭಿಯಂತರರು (ಎಂಜಿನಿಯರ್ಸ್) ಸರ್ಕಾರಿ ಕಚೇರಿಗಳಲ್ಲಿ ಹುಟ್ಟುಹಬ್ಬ ಆಚರಿಸಿದ ಹಿನ್ನೆಲೆಯಲ್ಲಿ ಅಮಾನತು ಆದೇಶಗಳು ಹೊರಡಿಸಿದ್ದನ್ನು ಎಲ್ಲಾ ಮಾಧ್ಯಮಗಳಲ್ಲಿ ವರದಿ ಮಾಡಲಾಗಿತ್ತು. ಆದರೆ ಅದೇ ನಿಯಮಗಳು ಶಿಕ್ಷಕರಿಗೆ ಅನ್ವಯವಾಗುವುದಿಲ್ಲವೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಎದ್ದಿದೆ.
ನಿಯಮ ಉಲ್ಲಂಘನೆ ಮಾಡಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳದೆ, ಜಾಣ ಕುರುಡು ಪ್ರದರ್ಶಿಸುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪಾತ್ರವೂ ಸಂಶಯಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಶಿಕ್ಷಕರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಶಿಕ್ಷಣ ಇಲಾಖೆ ಮುಕ್ತವಾಗಿ ಸಾರ್ವಜನಿಕರಿಗೆ ತಿಳಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
“ಮನಸೋ ಇಚ್ಛೆ ವರ್ತಿಸುವ ಶಿಕ್ಷಕರು ಹಾಗೂ ಅವರಿಗೆ ಸಹಕಾರ ನೀಡುವ ಅಧಿಕಾರಿಗಳಿಂದ ಶಿಕ್ಷಣ ಇಲಾಖೆ ಯಾವ ಸ್ಥಿತಿಗೆ ಬಂದು ನಿಂತಿದೆ?” ಎಂಬ ಪ್ರಶ್ನೆ ಇಂದು ಸಾರ್ವಜನಿಕರ ನಡುವೆ ತೀವ್ರ ಚರ್ಚೆಗೆ ಕಾರಣವಾಗಿದೆ.