logo

ಹಳೆ ವಾಹನ ಹೊಂದಿರುವವರಿಗೆ ಶಾಕ್​​ ಕೊಟ್ಟ ಸಾರಿಗೆ ಸಚಿವರು: 15 ವರ್ಷ ಮೀರಿದ ವೆಹಿಕಲ್ಸ್​​ ಜಪ್ತಿ.


ರಾಜ್ಯದಲ್ಲಿ 15 ವರ್ಷ ಮೀರಿದ ಹಳೆಯ ವಾಹನಗಳ ಜಪ್ತಿಗೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ವಿಧಾನ ಪರಿಷತ್​​ನಲ್ಲಿ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದು, ಆಯಸ್ಸು‌ ಮೀರಿದ 1.38 ಕೋಟಿ‌ ವಾಹನಗಳನ್ನ ಗುಜರಿಗೆ ಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ. ವಾಹನವೊಂದನ್ನು 15 ವರ್ಷಗಳವರೆಗೆ ಸುಸ್ಥಿತಿಯಲ್ಲಿ ಇಟ್ಟುಕೊಂಡು ಓಡಿಸಬಹುದು ಎಂದಿದ್ದಾರೆ.

ಹಳೆ ವಾಹನ ಹೊಂದಿರುವವರಿಗೆ ಶಾಕ್​​ ಕೊಟ್ಟ ಸಾರಿಗೆ ಸಚಿವರು: 15 ವರ್ಷ ಮೀರಿದ ವೆಹಿಕಲ್ಸ್​​ ಜಪ್ತಿ

ಬೆಂಗಳೂರು, ಡಿಸೆಂಬರ್​​ 17: ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದರೂ, ಹಳೆಯ ವಾಹನಗಳು ಮಾತ್ರ ಇನ್ನೂ ಸಂಚಾರ ನಿಲ್ಲಿಸಿಲ್ಲ. ಇವುಗಳಿಂದಲೇ ವಾಯುಮಾಲಿನ್ಯ ಹೆಚ್ಚಳವಾಗ್ತಿದೆ ಎಂಬ ಆರೋಪದ ನಡುವೆಯೂ ಕೋಟ್ಯಾಂತರ ವಾಹನಗಳು ರಸ್ತೆಯಲ್ಲಿ ಓಡಾಡುತ್ತಲೇ ಇವೆ. ಇಂತಹ ವಾಹನಗಳ ಮಾಲಿಕರಿಗೆ ರಾಜ್ಯ ಸಾರಿಗೆ ಸಚಿವರು ಶಾಕ್​​ ಕೊಟ್ಟಿದ್ದಾರೆ. 15 ವರ್ಷ ಮೀರಿದ ವಾಹನಗಳ ಜಪ್ತಿಗೆ ಸರ್ಕಾರ ಮುಂದಾಗಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್​​ನಲ್ಲಿ ತಿಳಿಸಿದ್ದಾರೆ.

ವಾಹನವೊಂದನ್ನು 15 ವರ್ಷಗಳವರೆಗೆ ಸುಸ್ಥಿತಿಯಲ್ಲಿ ಇಟ್ಟುಕೊಂಡು ಓಡಿಸಬಹುದು. ಕೇಂದ್ರ ಸರ್ಕಾರದ ನೀತಿಯ ಪ್ರಕಾರ ಕಮರ್ಷಿಯಲ್​​ ವಾಹನಗಳಿಗೆ 5 ವರ್ಷ ವಿನಾಯಿತಿ ನೀಡಲಾಗಿದೆ. ಆದರೆ ಸರ್ಕಾರಿ ವಾಹನಗಳನ್ನು ಬಳಸುವಂತಿಲ್ಲ. ಆಯಸ್ಸು‌ ಮೀರಿದ 1.38 ಕೋಟಿ‌ ವಾಹನಗಳನ್ನ ಗುಜರಿಗೆ ಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ. ತಮಿಳುನಾಡಿನಲ್ಲಿ‌ ಕೆಲವೊಂದು ವಾಹನಗಳಿಗೆ‌ ವಿನಾಯ್ತಿ‌ಕೇಳಿದ್ದಾರೆ. ಅದೇ‌ ರೀತಿ ಅಗ್ನಿಶಾಮಕ ಇಲಾಖೆಯಲ್ಲಿ‌ ಕಡಿಮೆ ಬಳಕೆಯಾದ ವಾಹನಗಳಿವೆ. ಅಂತಹ ವಾಹನಗಳಿಗೆ‌ ವಿನಾಯಿತಿ‌ ಕೋರಿ ನಾವು ಕೂಡ‌ ಪತ್ರ ಬರೆದಿದ್ದೇವೆ. 15 ವರ್ಷ ಮೀರಿದ ಬಸ್ ಗಳು ನಿಗಮದಲ್ಲಿ‌ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ವಾಹನ ಗುಜರಿ ನೀತಿ ಏನು?
ಹಳೆಯ, ಹೆಚ್ಚು ಮಾಲಿನ್ಯ ಮಾಡುವ ವಾಹನಗಳನ್ನು ಹಂತ ಹಂತವಾಗಿ ತೆಗೆದುಹಾಕಲು, ಪರಿಸರವನ್ನು ಸುಧಾರಿಸಲು ಮತ್ತು ವಾಹನ ಉದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಾಹನ ಗುಜರಿ ನೀತಿ ಜಾರಿಗೆ ಬಂದಿದೆ. 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕೋದು ಕಡ್ಡಾಯವಾಗಿದೆ. ಆದರೆ 20 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳಿಗೆ ಫಿಟ್‌ನೆಸ್ ಟೆಸ್ಟ್ ಕಡ್ಡಾಯವಾಗಿದ್ದು, ಇದರಲ್ಲಿ ಉತ್ತೀರ್ಣವಾಗದ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬ ನಿಯಮವಿದೆ. ಗುಜರಿ ಹಾಕಿದವರಿಗೆ ಹೊಸ ವಾಹನ ಖರೀದಿಯಲ್ಲಿ ತೆರಿಗೆ ವಿನಾಯಿತಿ ಮತ್ತು ಪ್ರೋತ್ಸಾಹ ಧನ ಕೂಡ ಸಿಗಲಿದೆ.

ಇನ್ನು ಮಾಹಿತಿಯ ಪ್ರಕಾರ ಕರ್ನಾಟಕದ ಬೆಂಗಳೂರೊಂದರಲ್ಲೇ 15 ವರ್ಷ ಮೀರಿದ 37,45,339 ವಾಹನಗಳು ಇವೆ. ಆ ಪೈಕಿ ಬೈಕ್​​ಗಳ ಸಂಖ್ಯೆ 24,46,372 ಇದ್ದರೆ, ಕಾರುಗಳ ಸಂಖ್ಯೆ 7,059,39, ಲಾರಿ, ಬಸ್​ ಸೇರಿದಂತೆ ಇತರೆ ವಾಹನಗಳ ಸಂಖ್ಯೆ 5,93,028ರಷ್ಟಿವೆ ಎನ್ನಲಾಗಿದೆ.

0
36 views