logo

ತಾಳಿಕೋಟಿ CHC ಅವ್ಯವಸ್ಥೆ ವಿರುದ್ಧ ಭುಗಿಲೆದ್ದ ಜನಾಕ್ರೋಶ | ಚಿಕಿತ್ಸೆ ಕೊರತೆಯಿಂದ ಯುವಕ ಸಾವು ಆರೋಪ | ಬೃಹತ್ ಪ್ರತಿಭಟನೆ

ವಿಜಯಪುರ ಜಿಲ್ಲೆ ತಾಳಿಕೋಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವು ಸಮಸ್ಯೆಗಳ ಆಗರವಾಗಿ ಪರಿಣಮಿಸಿದ್ದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ ಗಂಭೀರ ಸಮಸ್ಯೆಗಳು ಉದ್ಭವಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಡಿಸೆಂಬರ್ 12ರ ಮಧ್ಯರಾತ್ರಿ ತಾಳಿಕೋಟಿ ಪಟ್ಟಣದ ಬೇಪಾರಿ ಸಮಾಜದ ಯುವಕನೊಬ್ಬ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತಾದರೂ, ಅಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಯುವಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ನೇತೃತ್ವದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ನೂರಾರು ಪ್ರತಿಭಟನಾಕಾರರು ಮೃತ ವ್ಯಕ್ತಿಯ ಮನೆಯಿಂದ ಸಮುದಾಯ ಆರೋಗ್ಯ ಕೇಂದ್ರದವರೆಗೆ ಶಾಂತ ರೀತಿಯ ಪ್ರತಿಭಟನಾ ಮೆರವಣಿಗೆ ನಡೆಸಿ, ಆಸ್ಪತ್ರೆಯ ಅವ್ಯವಸ್ಥೆ, ವೈದ್ಯರ ಕರ್ತವ್ಯ ಲೋಪ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರ ಮನವಲಿಸಲು ಅಧಿಕಾರಿಗಳು ಪ್ರಯತ್ನಿಸಿದರೂ ಒಪ್ಪದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಶ್ರೀಮತಿ ಡಾ. ವಿನಯಾ ಹೂಗಾರ ಸ್ಥಳಕ್ಕೆ ಆಗಮಿಸಿ, ಕರ್ತವ್ಯ ಲೋಪ ಎಸಗಿದ ಸಿಬ್ಬಂದಿಯ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಲಿಖಿತ ಶಿಫಾರಸ್ಸು ಪತ್ರವನ್ನು ಬರೆದಿರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

ಈ ಸಂದರ್ಭದಲ್ಲಿ ತಾಲೂಕ ಆರೋಗ್ಯಾಧಿಕಾರಿ ಡಾ. ಸತೀಶ ತಿವಾರಿ, ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಶೈಲ್ ಹುಕ್ಕೇರಿ, ಪಿಎಸ್ಐ ಶ್ರೀಮತಿ ಜ್ಯೋತಿ ಖೋತ್, ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈಭೀಮ ಮುತ್ತಗಿ, ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಅಧ್ಯಕ್ಷ ಮಹಮ್ಮದ್ ಶಫೀಕ ಇನಾಮದಾರ, ಬೇಪಾರಿ ಸಮಾಜದ ಅಧ್ಯಕ್ಷ ರಫೀಕ ಬೇಪಾರಿ ಸೇರಿದಂತೆ ಸಮಾಜದ ಗಣ್ಯರು, ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪಿಎಸ್ಐ ಜ್ಯೋತಿ ಖೋತ್ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

21
981 views