
ಕನ್ನಡದಲ್ಲಿ ವಿಜ್ಞಾನ ಚಿಂತನೆ ಸಾಧ್ಯ, ಮತ್ತು ನಮ್ಮ ಭಾಷೆಯಲ್ಲೇ ಹೊಸ ಜ್ಞಾನವನ್ನು ನಿರ್ಮಿಸುವುದು ನಮ್ಮ ಹೊಣೆಗಾರಿಕೆ : ವಿತಾವಿ ಉಪಕುಲಪತಿ ಡಾ. ಎಸ್. ವಿದ್ಯಾಶಂಕರ್ ಅಭಿಮತ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿತಾವಿ), ಬೆಳಗಾವಿ ಇವರ ಅಧೀನದಲ್ಲಿರುವ ವಿಟಿಯು ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿಸ್ (ವಿ ಐ ಎ ಟಿ), ಮುದ್ದೇನಹಳ್ಳಿಯಲ್ಲಿ ‘ನವೋತ್ಸವ ರಾಜೋತ್ಸವ – 2025’ ಕಾರ್ಯಕ್ರಮವು ಕನ್ನಡ ಸಂಸ್ಕೃತಿ, ಶಿಕ್ಷಣ ಮತ್ತು ಉನ್ನತ ತಾಂತ್ರಿಕ ಕ್ಷೇತ್ರಗಳ ಸಮಾಗಮದೊಂದಿಗೆ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು ಮಾನ್ಯ ಉಪಕುಲಪತಿ ಡಾ. ಎಸ್. ವಿದ್ಯಾಶಂಕರ್ ಎಸ್. ಉದ್ಘಾಟಿಸಿದರು. ಅವರು ಭವಿಷ್ಯದ ತಾಂತ್ರಿಕ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಕ್ವಾಂಟಮ್ ಕಂಪ್ಯೂಟರ್, ಸೈಬರ್ ಸೆಕ್ಯೂರಿಟಿ, ಏರೋ ಸ್ಪೇಸ್, ರೋಬೋಟಿಕ್ಸ್, ಬಯೋಟೆಕ್ನಾಲಜಿ, ಅಡ್ವಾನ್ಸ್ಡ್ ಮೆಟೀರಿಯಲ್ಸ್ ಮುಂತಾದ ಕ್ಷೇತ್ರಗಳು ಮುಂದಿನ ದಶಕಗಳನ್ನು ರೂಪಿಸಲಿವೆ ಎಂದು ತಿಳಿಸಿದರು. ಅವರು ವಿದ್ಯಾರ್ಥಿಗಳು ಪಠ್ಯಕ್ರಮದಾಚೆಗೆ ಸಂಶೋಧನೆ, ಕೌಶಲ್ಯಾಭಿವೃದ್ಧಿ, ಇನ್ನೋವೇಶನ್ ಮತ್ತು ಸ್ಟಾರ್ಟ್‌ಅಪ್ ಮನೋಭಾವ ರೂಪಿಸಿಕೊಳ್ಳಬೇಕು ಎಂದು ಹೇಳಿದರು. “ಕನ್ನಡದಲ್ಲಿ ವಿಜ್ಞಾನ ಚಿಂತನೆ ಸಾಧ್ಯ, ಮತ್ತು ನಮ್ಮ ಭಾಷೆಯಲ್ಲೇ ಹೊಸ ಜ್ಞಾನವನ್ನು ನಿರ್ಮಿಸುವುದು ನಮ್ಮ ಹೊಣೆಗಾರಿಕೆ” ಎಂದು ಹೇಳಿದರು.
ಮೈಕ್ರೋಸಾಫ್ಟ್ ನಿಂದ ಭಾಗವಹಿಸಿದ್ದ ಶ್ರೀ ರಾಹುಲ್ ಹಾಗೂ ನಬಾರ್ಡ್ ಮಾಜಿ ಎಜಿಎಂ ಆಗಿದ್ದ ಪ್ರಸಿದ್ಧ ಜೀವನ ಕೌಶಲ್ಯ ತರಬೇತುದಾರ ಶ್ರೀ ವೈ.ವಿ. ಗುಂಡುರಾವ್ ಇಬ್ಬರೂ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಶ್ರೀ ರಾಹುಲ್ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಐಟಿ ಉದ್ಯೋಗ ಕ್ಷೇತ್ರದ ಬಗ್ಗೆ ಮಾತನಾಡುತ್ತಾ, ಅಸ್ಯೂರ್, ಎ ಐ ಇಂಟಿಗ್ರೇಟೆಡ್ ಕ್ಲೌಡ್, ಡೇವ್ ಒಪಿಎಸ್, ಐ ಓ ಟಿ, ಕ್ಯೂಬರ್ ನೆಟ್ಸ್, ಕ್ಲೌಡ್ ಆರ್ಕಿಟೆಕ್ಚರ್ ಮತ್ತು ಸೈಬರ್ ಸೆಕ್ಯೂರಿಟಿ ಮುಂತಾದ ಕ್ಷೇತ್ರಗಳಲ್ಲಿ ಉದ್ಯೋಗ ಹಾಗೂ ಸಂಶೋಧನೆಗೆ ಅಪಾರ ಅವಕಾಶಗಳಿವೆ ಎಂದು ಹೇಳಿದರು.
ಶ್ರೀ ಗುಂಡುರಾವ್ ತಮ್ಮ ಭಾಷಣದಲ್ಲಿ ಜೀವನ ಕೌಶಲ್ಯಗಳು, ಸಂವಹನ, ಆತ್ಮವಿಶ್ವಾಸ, ಮೌಲ್ಯಾಧಾರಿತ ಬದುಕು ಮತ್ತು ವ್ಯಕ್ತಿತ್ವ ನಿರ್ಮಾಣದ ಮಹತ್ವವನ್ನು ಮಾತನಾಡುತ್ತಾ, “ಸಾಧನೆಗಿಂತ ನಡತೆ ಮತ್ತು ವಿನಯವೇ ವ್ಯಕ್ತಿಯ ನಿಜವಾದ ಬಲ” ಎಂದು ಹೇಳಿದರು.
ವಿದ್ಯಾರ್ಥಿಗಳ ಸಾಧನೆಗೆ ಗೌರವ
ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕವಾಗಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕೈಗಾರಿಕೆಗಳು ಮತ್ತು ಸಂಸ್ಥೆಗಳಿಂದ ಪ್ರಾಯೋಜಿತ ನಗದು ಬಹುಮಾನಗಳನ್ನು ಪ್ರಧಾನಿಸಲಾಯಿತು. ಇದು ವಿ ಐ ಎ ಟಿ – ಇಂಡಸ್ಟ್ರಿ ಕನೆಕ್ಟ್ ನ ದೃಢವಾದ ಸಹಯೋಗ ಮತ್ತು ಉದ್ಯಮ ಜಗತ್ತಿನ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಯಾಂಪಸ್ ನ ಸಂಯೋಜಕರಾದ ಡಾ. ದಿನೇಶ್ ರಂಗಪ್ಪ ಅವರು ಕ್ಯಾಂಪಸ್ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ವಿದ್ಯಾರ್ಥಿಗಳ ಸಂಶೋಧನಾ, ನವೀನತೆ ಮತ್ತು ಸೃಜನಶೀಲತೆಯ ವಾತಾವರಣವನ್ನು ಬಲಪಡಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ತನುಜಾ ಟಿ.ಸಿ., ಡಾ.ಚಿಕ್ಕಣ್ಣ, ಡಾ.ಬಸವರಾಜ್, ಡಾ.ಬಿನೋಯ್ ಮ್ಯಾಥ್ಯೂ, ಡಾ.ನಿರ್ಮಲಾ ಹಿರೇಮಣಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವು ಸಾಂಸ್ಕೃತಿಕ ನೃತ್ಯ ಮತ್ತು ಸಂಗೀತ ಪ್ರದರ್ಶನಗಳಿಂದ ಕಂಗೊಳಿಸಿತು. ವಿಜೇತ ವಿದ್ಯಾರ್ಥಿಗಳಿಗೆ ಡಾ. ರಮೇಶ್, ಡಾ. ಲಕ್ಷ್ಮೀನಾರಾಯಣ ಹಾಗೂ ಡಾ. ಪ್ರಸನ್ನ ಡಿ. ಶಿವರಾಮು ಬಹುಮಾನ ವಿತರಿಸಿದರು. ಡಾ. ಪಂಕಜಾಕ್ಷಿ ಹಾಗೂ ಡಾ. ರೂಪದರ್ಶಿನಿ ಯವರು ಕಾರ್ಯಕ್ರಮವನ್ನು ನಿರೂಪಿಸಿ ನಡೆಸಿಕೊಟ್ಟರು.