
ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ : ಚಂದ್ರಶೇಖರಗೌಡ ಮಾಗನೂರ ಆಗ್ರಹ
ಯಾದಗಿರಿ : ರಾಜ್ಯದಲ್ಲಿ ಯುವಕರು ಎದುರಿಸುತ್ತಿರುವ ಉದ್ಯೋಗ ಸಂಕಷ್ಟ ದಿನೇ ದಿನೇ ಉಲ್ಬಣವಾಗುತ್ತಿದ್ದು, ಸರ್ಕಾರ ತಕ್ಷಣ ಗಂಭೀರವಾಗಿ ಗಮನ ಹರಿಸಬೇಕೆಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದ ವಿವಿಧ ಇಲಾಖೆಗಳಲ್ಲಿನ 2.5 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದರೂ, ಕಳೆದ ಎರಡು ವರ್ಷಗಳಿಂದ ಯಾವುದೇ ರೀತಿಯ ನೇಮಕಾತಿ ಪ್ರಕ್ರಿಯೆ ನಡೆಯದಿರುವುದು ಸಾವಿರಾರು ಉದ್ಯೋಗಾಕಾಂಕ್ಷಿಗಳ ಭವಿಷ್ಯವನ್ನು ಅನಿಶ್ಚಿತತೆಯಲ್ಲಿಟ್ಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ವಯೋಮಿತಿ ಹೆಚ್ಚಳ ಮಾಡದೇ ಇರುವುದೂ, ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸದಿರುವುದೂ ಯುವಕರಿಗೆ ಮತ್ತೊಂದು ದೊಡ್ಡ ನಿರಾಸೆ ತಂದಿದೆ. “ನಿರುದ್ಯೋಗ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮವೇ ಇಲ್ಲ. ಆದರೆ, ಸರ್ಕಾರದಲ್ಲಿ ಕುರ್ಚಿ ಕಚ್ಚಾಟ ಹಾಗೂ ಬ್ರೇಕ್‌ಫಾಸ್ಟ್ ಮೀಟಿಂಗ್‌ಗಳು ಮಾತ್ರ ನಿಂತಿಲ್ಲ,” ಎಂದು ಅವರು ಟೀಕಿಸಿದರು. ನೇಮಕಾತಿಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರವನ್ನು ಸಂಪೂರ್ಣ ನಿರ್ಮೂಲನೆ ಮಾಡಿ, ಪಾರದರ್ಶಕ ನೇಮಕಾತಿ ವ್ಯವಸ್ಥೆ ಜಾರಿಗೊಳಿಸಿ, ಎಲ್ಲಾ ನೇಮಕಾತಿಗಳಲ್ಲಿ ಐದು ವರ್ಷ ವಯೋಮಿತಿ ಹೆಚ್ಚಿಸಬೇಕು ಎಂಬ ಬೇಡಿಕೆಗಳನ್ನು ಉದ್ಯೋಗಾಕಾಂಕ್ಷಿಗಳು ವರ್ಷಗಳಿಂದ ಮುಂದಿರಿಸಿದ್ದಾರೆ.
ಈ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುತ್ತಾ, ಇತ್ತೀಚೆಗೆ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಮತ್ತು ಜನಸಾಮಾನ್ಯರ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟಿತ್ತು. ಶಾಂತಿಯುತವಾಗಿ ನಡೆಯುತ್ತಿದ್ದ ಈ ಮೆರವಣಿಗೆಯ ಮೇಲೆಯೇ ಲಾಠಿಚಾರ್ಜ್ ನಡೆಸಿ ಯುವ ಪ್ರತಿಭಟನಾಕಾರರನ್ನು ಬಂಧಿಸಿದ ಧಾರವಾಡ ಘಟನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಧಾರವಾಡದಲ್ಲಿ ನಡೆದಂತಹ ಘಟನೆ ಯಾದಗಿರಿಯಲ್ಲೂ ಮರುಕಳಿಸದಂತೆ ಸರ್ಕಾರ ಹಾಗೂ ಆಡಳಿತ ಯಂತ್ರ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು, ಎಂದು ಅವರು ಎಚ್ಚರಿಕೆ ನೀಡಿದರು. ಯುವಕರಿಗೆ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದು 2.5 ವರ್ಷಗಳಲ್ಲಿ ಚಿಪ್ಪು ಕೊಟ್ಟಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆ. ಸಿದ್ದರಾಮಯ್ಯ ಸರ್ಕಾರ ತಕ್ಷಣವೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿ ಉದ್ಯೋಗಕಾಂಕ್ಷಿಗಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.