
ಸರ್ವೆ ಕಾರ್ಯಕ್ಕೆ ಲಂಚ ಬೇಡಿಕೆ: ಭೂಮಾಪಕನನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು.
ಗೌರಿಬಿದನೂರು: ನಿವೇಶನ ಅಳತೆಗೆ ₹23 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಭೂಮಾಪಕ ಹಾಗೂ ಅವರ ಸಹಾಯಕ ಇಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿ ಬಂಧಿಸಿದ್ದಾರೆ.
ಹೊಸೂರು ಹೋಬಳಿ, ಹಳೆ ಉಪ್ಪಾರಹಳ್ಳಿ ಗ್ರಾಮದ ಮುದ್ದು ಗಂಗಮ್ಮ ಅವರು ತಮ್ಮ ನಿವೇಶನಕ್ಕೆ ಅಳತೆ ಮಾಡಿಕೊಡಲು ಸರ್ವೇ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸರ್ವೆ ಮಾಡಲು ಸರ್ವೆಯರ್ ಹರೀಶ್ ರೆಡ್ಡಿ ಅವರು ₹23 ಸಾವಿರ ಲಂಚ ನೀಡಿದ ಬಳಿಕವೇ ಸರ್ವೆ ಮಾಡಿಕೊಡುವುದಾಗಿ ಹೇಳಿದ್ದರು.
ಅವರು ಮೊದಲೇ ₹3 ಸಾವಿರ ಮುಂಗಡವಾಗಿ ಹಣ ಪಡೆದುಕೊಂಡಿದ್ದು, ಉಳಿದ ₹20 ಸಾವಿರ ಲಂಚವನ್ನು ಗುರುವಾರ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಅವರನ್ನು ಬಲೆ ಬೀಸಿ ಹಿಡಿದಿದ್ದಾರೆ.
ಮಧುಗಿರಿ ರಸ್ತೆಯ ನಂದಿನಿ ಹಾಲಿನ ಕೇಂದ್ರದ ಬಳಿ ಹಣ ಸ್ವೀಕರಿಸುವ ಸಂದರ್ಭದಲ್ಲೇ ಸರ್ವೆಯರ್ ಹರೀಶ್ ರೆಡ್ಡಿ ಹಾಗೂ ಅವರ ಸಹಾಯಕ ರಾಜು ಅವರನ್ನು ಬಂಧಿಸುವಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ವೀರೇಂದ್ರ ಕುಮಾರ್ ಅವರ ನೇತೃತ್ವದ ತಂಡ ಯಶಸ್ವಿಯಾಯಿತು.
“ಅರ್ಜಿದಾರರ ದೂರಿನ ಮೇರೆಗೆ ನಡೆಸಿದ ಬಲೆಗೆ ಈ ಇಬ್ಬರನ್ನು ಬಂಧಿಸಲಾಗಿದೆ. ಎಂದು ಬಂಧನದ ಬಳಿಕ ಡಿವೈಎಸ್‌ಪಿ ವೀರೇಂದ್ರ ಕುಮಾರ್ ಹೇಳಿದರು:
ಅಳತೆಗೈಯಬೇಕಿದ್ದ ನಿವೇಶನದ ಮೌಲ್ಯ ಕೇವಲ ₹65 ಸಾವಿರವಾಗಿದ್ದರೂ ₹23 ಸಾವಿರ ಲಂಚ ಕೇಳಿದ್ದಾರೆ ಎಂಬುದು ಆಘಾತಕಾರಿ ವಿಷಯ.”ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ಗುರು, ಸತೀಶ್, ಲಿಂಗರಾಜು, ನಾಗರಾಜು ಮತ್ತು ಚೌಡ ರೆಡ್ಡಿ ಭಾಗವಹಿಸಿದ್ದರು.