
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಡಿಸಿಸಿ) ಬ್ಯಾಂಕ್ ಚುಕ್ಕಾಣಿ ಜಾರಕಿಹೊಳಿ ಸಹೋದರರ ತೆಕ್ಕೆಗೆ!
ಕಳೆದ ಎರಡು ತಿಂಗಳಿಂದ ಬ್ಯಾಂಕ್ ಅಧಿಕಾರವನ್ನು ನಮ್ಮ ಪ್ಯಾನಲ್ ಹಿಡಿಯುವುದು ಖಚಿತ ಎಂದೇ ಹೇಳಿಕೊಂಡು ಬಂದಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಸಚಿವ ಸತೀಶ ಜಾರಕಿಹೊಳಿ ಸಹೋದರರು ತಮ್ಮ ರಾಜಕೀಯದ ಎಲ್ಲ ಅನುಭವ ಮತ್ತು ತಂತ್ರಗಾರಿಕೆಯನ್ನು ಪಣಕ್ಕಿಟ್ಟು ಕೆಲಸ ಮಾಡಿದ್ದರು. ಅದರ ಪರಿಣಾಮ ಅತಿ ಹೆಚ್ಚು ಸ್ಥಾನಗಳು ಜಾರಕಿಹೊಳಿ ಪ್ಯಾನಲ್ ಪಾಲಾಗಿವೆ.
ತಮ್ಮ ಪ್ಯಾನೆಲ್‌ನವರೇ ಅಧ್ಯಕ್ಷರಾಗುವುದು ಖಚಿತ ಎಂದು ವಿಶ್ವಾಸದಿಂದ ಹೇಳಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಈ ಸ್ಥಾನಕ್ಕೆ ಲಿಂಗಾಯತ ಸಮುದಾಯದ ನಿರ್ದೇಶಕರನ್ನೇ ಆಯ್ಕೆ ಮಾಡಲಾಗುವುದು ಎಂದು ವಾಗ್ದಾನ ಮಾಡಿದ್ದರು. ಅದರಂತೆ ಈಗ ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಹೆಸರು ಬಲವಾಗಿ ಕೇಳಿಬರುತ್ತಿದೆ.
ಬ್ಯಾಂಕ್ ನ ಒಟ್ಟು 16 ನಿರ್ದೇಶಕ ಸ್ಥಾನಗಳಲ್ಲಿ ಅಧಿಕಾರ ಹಿಡಿಯಲು 9 ಸ್ಥಾನಗಳ ಅಗತ್ಯವಿದ್ದು ಜಾರಕಿಹೊಳಿ ಪ್ಯಾನೆಲ್‌ಗೆ 13 ಸ್ಥಾನಗಳು ದೊರೆತಿವೆ. ಚುನಾವಣೆಗೆ ಮೊದಲೇ 9 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಪೈಕಿ ಏಳು ಜನ ಜಾರಕಿಹೊಳಿ-ಜೊಲ್ಲೆ ಪ್ಯಾನೆಲ್‌ನಲ್ಲಿ ಗುರುತಿಸಿಕೊಂಡಿದ್ದರು. ಶಾಸಕರಾದ ರಾಜು ಕಾಗೆ ಮತ್ತು ಗಣೇಶ ಹುಕ್ಕೇರಿ ಯಾವುದೇ ಬಣದ ಜೊತೆಗೆ ಗುರುತಿಸಿಕೊಂಡಿರಲಿಲ್ಲ.
ಉಳಿದ ಏಳು ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ಇದರಲ್ಲಿ ನಿಪ್ಪಾಣಿ, ಹುಕ್ಕೇರಿ, ಬೈಲಹೊಂಗಲ ಮತ್ತು ಕಿತ್ತೂರು ಕ್ಷೇತ್ರಗಳ ಫಲಿತಾಂಶವನ್ನು ನ್ಯಾಯಾಲಯದ ಆದೇಶದಂತೆ ಘೋಷಣೆ ಮಾಡಿಲ್ಲ. ಈ ನಾಲ್ಕು ಕ್ಷೇತ್ರಗಳ ಫಲಿತಾಂಶ ಅ.28ರಂದು ಘೋಷಣೆಯಾಗಲಿದೆ. ಆದರೆ, ನಿಪ್ಪಾಣಿ ಕ್ಷೇತ್ರದ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ಹುಕ್ಕೇರಿಯಲ್ಲಿ ಮಾಜಿ ಸಂಸದ ರಮೇಶ ಕತ್ತಿ, ಬೈಲಹೊಂಗಲದ ಅಭ್ಯರ್ಥಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮತ್ತು ಕಿತ್ತೂರು ಕ್ಷೇತ್ರದಿಂದ ನಾನಾಸಾಹೇಬ ಪಾಟೀಲ ಪರ ಬೆಂಬಲಿಗರು ಫಲಿತಾಂಶ ಘೋಷಣೆಯಾಗದಿದ್ದರೂ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಅಥಣಿಯಲ್ಲಿ ಸವದಿಗೆ ಗೆಲುವು:
ಅಥಣಿ ಕ್ಷೇತ್ರದಲ್ಲಿ ಶಾಸಕ ಮತ್ತು ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಸವದಿ ನಿರೀಕ್ಷೆಯಂತೆ ಭರ್ಜರಿ ಗೆಲುವು ಸಾಧಿಸಿದರು. ಒಟ್ಟು 125 ಮತದಾರರ ಪೈಕಿ 122 ಮತಗಳು ಸವದಿ ಪರ ಬಂದವು. ಅವರ ಪ್ರತಿಸ್ಪರ್ಧಿ ಮಾಜಿ ಶಾಸಕ ಮಹೇಶ ಕುಮಠಳ್ಳಿ ಕೇವಲ ಮೂರು ಮತಗಳನ್ನು ಪಡೆದು ಭಾರೀ ಮುಖಭಂಗ ಅನುಭವಿಸಿದರು.
ನಿಪ್ಪಾಣಿ ಕ್ಷೇತ್ರ ಸಾಕಷ್ಟು ಕುತೂಹಲ ಪಡೆದುಕೊಂಡಿತ್ತು. ಈ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಸೋಲಿಸಲು ಉತ್ತಮ ಪಾಟೀಲಗೆ ಹಲವಾರು ನಾಯಕರು ತೆರೆಮರೆಯಲ್ಲಿ ಬೆಂಬಲ ವ್ಯಕ್ತಪಡಿಸಿ ಅವರ ಪರ ನಿಂತಿದ್ದರು. ಇನ್ನೊಂದೆಡೆ ಇದೇ ಮೊದಲ ಬಾರಿಗೆ ಸತೀಶ ಜಾರಕಿಹೊಳಿ, ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಸಹೋದರರು ಜೊಲ್ಲೆ ಅವರ ಜೊತೆಗಿನ ಎಲ್ಲ ವೈಮನಸ್ಸು ಮರೆತು ಒಂದಾಗಿ ಅವರ ಬೆಂಬಲಕ್ಕೆ ನಿಂತಿದ್ದರು. ಎದುರಾಳಿಗಳ ಕಾರ್ಯತಂತ್ರ ಗಮನಿಸಿ ಜೊಲ್ಲೆ ಅವರು ಮತದಾರರನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗಿ ಡಿಸಿಸಿ ಬ್ಯಾಂಕ್ ರಾಜಕಾರಣದಲ್ಲಿ ಹೊಸ ಪರಂಪರೆ ಹುಟ್ಟುಹಾಕಿದ್ದರು.
ಪ್ರತಿಷ್ಠೆಯ ಕಣ
- 16 ನಿರ್ದೇಶಕ ಸ್ಥಾನಗಳಲ್ಲಿ ಅಧಿಕಾರ ಹಿಡಿಯಲು 9 ಸ್ಥಾನಗಳು ಅಗತ್ಯವಿತ್ತು
- ಜಾರಕಿಹೊಳಿ ಪ್ಯಾನೆಲ್‌ಗೆ ದಕ್ಕಿದ್ದು 13 ಸ್ಥಾನಗಳು
- ನಿಪ್ಪಾಣಿ, ಹುಕ್ಕೇರಿ, ಬೈಲಹೊಂಗಲ, ಕಿತ್ತೂರು ಕ್ಷೇತ್ರಗಳ ಫಲಿತಾಂಶಕ್ಕೆ ತಡೆ. ಅ.28ಕ್ಕೆ ತೀರ್ಪು
- ಅಥಣಿ ಕ್ಷೇತ್ರದಲ್ಲಿ ಶಾಸಕ, ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಸವದಿಗೆ ಗೆಲುವು
- ಮಾಜಿ ಸಂಸದ, ಲಿಂಗಾಯತ ಸಮುದಾಯದ ಅಣ್ಣಾಸಾಹೇಬ ಜೊಲ್ಲೆಗೆ ಅಧ್ಯಕ್ಷ ಸ್ಥಾನ ಸಾಧ್ಯತೆ