logo

ಶಿಕಾರಿಪುರ ಬಂದ್ ಟೊಲ್ ಗೇಟ್ ವಿರೋಧಿಸಿ

ಶಿಕಾರಿಪುರ: 09/10/2025

ತಾಲೂಕಿನ ಕುಟ್ರಳ್ಳಿ ಸಮೀಪದಲ್ಲಿ ನಿರ್ಮಿಸಿದ ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಗುರುವಾರ ಕರೆ ನೀಡಿದ ಶಿಕಾರಿಪುರ ಬಂದ್‍ ಸಂಪೂರ್ಣ ಯಶಸ್ವಿಯಾಯಿತು.

The Siasat News - Images
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನವೀದ್ ಶಿರಾಳಕೊಪ್ಪ‌ ಮಾತನಾಡಿ, ತಾಲೂಕಿನ ಜನತೆ ಸರ್ಕಾರಿ ಕಚೇರಿಗಳಿಗೆ, ರೋಗಿಗಳು ಆಸ್ಪತ್ರೆಗೆ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ ತಲುಪಲು ಎರಡು ಬಾರಿ ಹಾಗೂ ತಾಲೂಕು ಕೇಂದ್ರ ತಲುಪಲು ಒಮ್ಮೆ ಟೋಲ್ ಶುಲ್ಕವನ್ನು ಪಾವತಿಸಬೇಕಿದೆ. ಅಲ್ಲದೇ, ಕಣಿವೆಮನೆ ಮತ್ತು ಅಂಬಾರಗೊಪ್ಪ ನಡುವೆ ಕುಟ್ರಳ್ಳಿ ಸಮೀಪದಲ್ಲಿ ಸರ್ಕಾರದಿಂದ ಟೋಲ್ ಗೇಟ್ ನಿರ್ಮಿಸಿರುವುದು ಅವೈಜ್ಞಾನಿಕವಾಗಿದೆ. ಇದರಿಂದ ಸಾರ್ವಜನಿಕರಿಗೆ

The Siasat News - Images
ಹೊರೆಯಾಗುತ್ತಿದ್ದು, ಸರ್ಕಾರ ಕೂಡಲೇ ಎಚ್ಚೆತ್ತು ಟೋಲ್‍ಗೇಟ್ ತೆರವು ಮಾಡಬೇಕು. ಈ ಬಗ್ಗೆ ಹಲವು ಹಂತದ ಹೋರಾಟ ಮಾಡಿ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಇಂದು ಶಿಕಾರಿಪುರ ತಾಲೂಕು ಕೇಂದ್ರಕ್ಕೆ ಕರೆ ನೀಡಿದ್ದ ಬಂದ್ ಯಶಸ್ವಿಯಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತು ಟೋಲ್ ಗೇಟ್ ತೆರವು ಮಾಡಬೇಕು. ಇಲ್ಲವಾದಲ್ಲಿ ರೈತರೇ ಟೋಲ್ ಗೇಟ್ ತೆರವು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸೊರಬ ತಾಲೂಕು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಶೇ. 90ರಷ್ಟು ರೈತಾಪಿ ವರ್ಗದ ಜನತೆಯೇ ವಾಸವಾಗಿದ್ದಾರೆ. ಬಾಡಿಗೆ ವಾಹನಗಳಲ್ಲಿ ಪ್ರಯಾಣಿಸುವವರಿಗೂ ಸಹ ಹೊರೆಯಾಗುತ್ತಿದೆ. ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು ಹೆಚ್ಚು ವಾಸಿಸುತ್ತಿರುವ ಈ ಭಾಗದಲ್ಲಿ ಟೋಲ್ ಗೇಟ್ ಗಳನ್ನು ಸ್ಥಾಪಿಸಿ ಬೇಕಾಬಿಟ್ಟಿ ಸಾರ್ವಜನಿಕರ ಹಣವನ್ನು ನಿರಂತರ ದೋಚಲಾಗುತ್ತದೆ. ಈ ಟೋಲ್ ಗೇಟ್ ಅಳವಡಿಕೆಯಿಂದಾಗಿ ಬಸ್ ಹಾಗೂ ಬಾಡಿಗೆ ವಾಹನಗಳ ದರ ಅನಿವಾರ್ಯವಾಗಿ ಹೆಚ್ಚಳ ಮಾಡಲಾಗಿದೆ. ಇದು ಬಡವರಿಗೆ, ರೈತರಿಗೆ ತೀವ್ರ ಹೊರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲು ಪಟ್ಟಣದ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪ್ರತಿಭಟನಾ ನಿರತರು ಬಸ್ ನಿಲ್ದಾಣ ವೃತ್ತದಲ್ಲಿ ಟೈರ್ ಸುಟ್ಟು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು‌. ಪ್ರತಿಭಟನೆಯಲ್ಲಿ ಟೋಲ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶಿವರಾಜ್ ಸುಣ್ಣದಕೊಪ್ಪ, ಸಂಚಾಲಕ ವಿನಯ ಪಾಟೀಲ್, ಪ್ರಮುಖರಾದ ಸಿದ್ದಲಿಂಗಸ್ವಾಮಿ ಬಳ್ಳಿಗಾವಿ, ಈರಣ್ಣ ಪ್ಯಾಟಿ, ಪುಟ್ಟಣ್ಣ ಗೌಡ, ರೈತ ಸಂಘದ ಜಯಪ್ಪ ಗೌಡ, ಹಾಲೇಶ ಗೌಡ, ರಾಜಪ್ಪ ಮುಗಳಿಕೊಪ್ಪ, ಕರವೇ ಅಧ್ಯಕ್ಷ ರವಿ ನಾಯ್ಕ್, ರಮೇಶ್ ತಾಳಗುಂದ, ಸೊರಬ ತಾಲೂಕು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಉಪಾಧ್ಯಕ್ಷ ದತ್ತಾ ಸೊರಬ, ಪ್ರಧಾನ ಕಾರ್ಯದರ್ಶಿ ಶರತ್ ಸ್ವಾಮಿ, ಕಾರ್ಯದರ್ಶಿ ನಾಗಪ್ಪ ಸೇರಿದಂತೆ ವಾಹನಗಳ ಚಾಲಕರು ಮತ್ತು ಮಾಲಿಕರ ಸಂಘದವರು, ಸಾರ್ವಜನಿಕರು, ವರ್ತಕಕರು, ರೈತರು ಪಾಲ್ಗೊಂಡಿದ್ದರು

15
400 views