logo

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಗವಾಯಿ ರವರಿಗೆ ಶೂ ಎಸೆದ ವಕೀಲನ ವಿರುದ್ಧ ಕಠಿಣ ಕ್ರಮಕ್ಕೆ ಭೀಮ್ ಸೇನೆಯ ಆಗ್ರಹ

ಚಿಕ್ಕನಾಯಕನಹಳ್ಳಿ, ಅ.8:
ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ಅಕ್ಟೋಬರ್ 6, 2025 ರಂದು ನ್ಯಾಯಾಲಯದ ಕಲಾಪದ ವೇಳೆ ಶೂ ಎಸೆದ ಘಟನೆ ದೇಶದ ನ್ಯಾಯಾಂಗದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಕರ್ನಾಟಕ ಭೀಮ್ ಸೇನೆ (ರಿ) ತಾಲ್ಲೂಕು ಘಟಕದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ತಾಲ್ಲೂಕು ಕಚೇರಿಯಲ್ಲಿ ತಹಸೀಲ್ದಾರ್ ಮುಖಾಂತರ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, “ಸಂವಿಧಾನ ವಿರೋಧಿ ಹಾಗೂ ಜಾತಿವಾದಿ ಮನೋಭಾವದ ಹಿರಿಯ ವಕೀಲ ಕಿಶೋರ್ ಕುಮಾರ್ ಅವರನ್ನು ತಕ್ಷಣ ಬಂಧಿಸಿ ಜೈಲಿಗೆ ಕಳುಹಿಸಬೇಕು. ಇಂತಹ ಕೃತ್ಯಗಳು ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಸಂವಿಧಾನದ ಗೌರವವನ್ನು ಧಿಕ್ಕರಿಸುತ್ತವೆ,” ಎಂದು ಉಲ್ಲೇಖಿಸಲಾಗಿದೆ.

ಇದಲ್ಲದೆ, “ಈ ವಕೀಲನ ಹಿಂದಿರುವ ಶಕ್ತಿ ಕೇಂದ್ರಗಳು ಯಾರು ಎಂಬುದರ ಕುರಿತು ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ನಿಖರ ತನಿಖೆ ನಡೆಯಬೇಕು,” ಎಂದು ಸಂಘಟನೆ ಆಗ್ರಹಿಸಿದೆ.

ಸಮಾಜ ಮಾಧ್ಯಮಗಳಲ್ಲಿ ಜಾತಿವಾದಿ ಕಾಮೆಂಟ್‌ಗಳು ಮಾಡುತ್ತಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ತಾಲ್ಲೂಕು ಘಟಕದ ಅಧ್ಯಕ್ಷ ರಂಗನಾಥ್ ಅವರು ಪತ್ರಿಕಾ ಹೇಳಿಕೆಯಲ್ಲಿ,
“ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ದೆಹಲಿಯ ಜಂತರ್ ಮಂತರ್‌ನಲ್ಲಿ ರಾಷ್ಟ್ರಮಟ್ಟದ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು,” ಎಂದು ಎಚ್ಚರಿಸಿದರು.

ಮನವಿ ವೇಳೆ ನವೀನ್ ಲಕ್ಕೇನಹಳ್ಳಿ, ಬಸವರಾಜು ಹೊಸಹಳ್ಳಿ, ಶಶಿಕುಮಾರ್ ಯಲ್ಲದಕೆರೆ, ನಾಗರಾಜು ತೀರ್ಥಪುರ, ಗೋವರ್ಧನ್ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

“ನ್ಯಾಯದ ಮೇಲೆ ದಾಳಿ ಅಂದರೆ ಸಂವಿಧಾನದ ಹೃದಯದ ಮೇಲೆ ಹಲ್ಲೆ,” ಎಂದು ಕಾರ್ಯಕರ್ತರು ಘೋಷಿಸಿದರು.

ವರದಿ: ದೇವರಾಜು R, ಚಿಕ್ಕನಾಯಕನಹಳ್ಳಿ

0
0 views