ಶಿರಾ ಬೈಪಾಸ್ ಹಾಗೂ ಶಿರಾ–ಮಧುಗಿರಿ ಚತುಷ್ಪಥ ಕಾಮಗಾರಿ ಶೀಘ್ರ ಪ್ರಾರಂಭ
ಬಹುನಿರೀಕ್ಷಿತ ಶಿರಾ ನಗರದ ಬಳಿ ಹಾದು ಹೋಗಿರುವ ಎನ್‌ಎಚ್ 49 ಬೈಪಾಸ್ ರಸ್ತೆ ನಿರ್ಮಾಣ ಹಾಗೂ ಶಿರಾ–ಮಧುಗಿರಿ ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ದಿಪಡಿಸುವ ಕಾಮಗಾರಿಗೆ ಕೇಂದ್ರ ಸರ್ಕಾರ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಈಗಾಗಲೇ ಶಿರಾ–ಜುಂಜರಾಮನಹಳ್ಳಿ ಮಾರ್ಗವಾಗಿ ಯರಗುಂಟೆವರೆಗಿನ ಬೈಪಾಸ್ ರಸ್ತೆ ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ರೈತರಿಗೆ ಭೂಪರಿಹಾರ ಮಂಜೂರಾಗಲಿದೆ.
ಈ ಯೋಜನೆ ಅನುಷ್ಠಾನದ ವಿಚಾರವಾಗಿ ಹಲವು ಬಾರಿ ಕೇಂದ್ರ ಹೆದ್ದಾರಿ ಸಚಿವರಾದ ನಿತೀನ್ ಗಡ್ಕರಿ ಅವರನ್ನು ಭೇಟಿಯಾದ ಶಿರಾ ಕ್ಷೇತ್ರದ ಜನಪ್ರಿಯ ಶಾಸಕರಾದ ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಡಾ. ಟಿ.ಬಿ. ಜಯಚಂದ್ರ ರವರು, ಶಿರಾ ನಗರವು ಬೆಂಗಳೂರು ನಗರಕ್ಕೆ ಹೆಬ್ಬಾಗಿಲಾಗಿದ್ದು ಸುಮಾರು ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವ ಪ್ರಮುಖ ಸ್ಥಳವಾಗಿರುವುದರಿಂದ ಈ ಯೋಜನೆ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅವಶ್ಯಕವೆಂದು ಮನವಿ ಮಾಡಿದ್ದರು.
ಸ್ಥಳೀಯರು ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಶಿರಾ ನಗರದ ಸಂಚಾರ ದಟ್ಟಣೆ ತಗ್ಗಿ, ಅಭಿವೃದ್ಧಿಗೆ ಹೊಸ ದಾರಿ ತೆರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.