
ತಾಳಿಕೋಟಿ: ಸಾಲ ಮರುಪಾವತಿ ಮಾಡಿದರೆ ಸಹಕಾರಿ ಸಂಘಗಳ ಪ್ರಗತಿ — ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್. ಪಾಟೀಲ
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ತಾಳಿಕೋಟಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ 83ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್. ಪಾಟೀಲ (ಯಾಳಗಿ) ಅವರು, “ಸದಸ್ಯರು ತಮ್ಮ ಸಾಲಗಳನ್ನು ಸಕಾಲಕ್ಕೆ ಮರುಪಾವತಿ ಮಾಡಿದರೆ ಸಹಕಾರಿ ಸಂಘಗಳ ಅಭಿವೃದ್ಧಿಗೆ ದಾರಿ ತೆರೆದುಕೊಳ್ಳುತ್ತದೆ” ಎಂದು ಸಲಹೆ ನೀಡಿದರು.
“ಸರ್ಕಾರವು ಸಹಕಾರಿ ಸಂಘಗಳ ಮೂಲಕ ರೈತರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಸಂಘದಿಂದ ಪಡೆದ ಸಾಲವನ್ನು ತಡಮಾಡದೆ ಹಿಂತಿರುಗಿಸಿದಾಗ ಮಾತ್ರ ಇನ್ನಷ್ಟು ಸೌಲಭ್ಯ ಪಡೆಯಲು ಸಾಧ್ಯ. ಈಗ ಸಾಲಗಳು ನೇರವಾಗಿ ಸಂಘಗಳಿಂದ ಸಿಗದೇ ಡಿಸಿಸಿ ಬ್ಯಾಂಕ್ ಮೂಲಕ ಸಿಗುತ್ತಿವೆ. ರೈತರು ಕೇವಲ ಸಾಲ ಪಡೆಯುವುದನ್ನು ಮಾತ್ರ ಯೋಚಿಸದೇ, ಸಂಘಗಳಲ್ಲಿ ಠೇವಣಿ ಮಾಡುವ ಚಟುವಟಿಕೆಗೆ ಸಹ ಒತ್ತು ನೀಡಬೇಕು. ಸದಸ್ಯರ ಸಹಕಾರ, ಆಡಳಿತ ಮಂಡಳಿಯವರ ಕಳಕಳಿ ಮತ್ತು ಸಿಬ್ಬಂದಿಗಳ ಕರ್ತವ್ಯನಿಷ್ಠೆಯಿಂದಲೇ ಸಂಘದ ಪ್ರಗತಿ ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕೈಲಾಸ ಪೇಠೆಯ ಬಸವಪ್ರಭು ದೇವರು ಮಾತನಾಡಿ, “ಬ್ಯಾಂಕುಗಳು ಹಣವನ್ನು ಸಂಗ್ರಹಿಸಿ ಅವಶ್ಯವಿದ್ದವರಿಗೆ ನೀಡುವ, ತೆಗೆದುಕೊಳ್ಳುವ ಸ್ಥಳ. ಆದರೆ ಪಡೆದ ಸಾಲವನ್ನು ಮರುಪಾವತಿಸಿದಾಗ ಮಾತ್ರ ಬ್ಯಾಂಕುಗಳು ಬೆಳೆಯುತ್ತವೆ. ಸಾಲವನ್ನು ಸದ್ಧೇಶಕ್ಕಾಗಿ ಮಾತ್ರ ಪಡೆದುಕೊಳ್ಳಬೇಕು” ಎಂದು ರೈತರಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಈ ವರ್ಷದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಿರ್ದೇಶಕ ಬಸವರಾಜ ಕುಂಬಾರ ಹಾಗೂ ಲೆಕ್ಕಿಗ ಪ್ರವೀಣ ಪಾಟೀಲ ವರದಿ ವಾಚಿಸಿದರು.
ಸಭೆಯ ಅಧ್ಯಕ್ಷತೆ ದುಂಡಪ್ಪಗೌಡ ವಿ. ಪಾಟೀಲ ವಹಿಸಿದ್ದರು.
ಮುಖ್ಯ ಕಾರ್ಯನಿರ್ವಾಹಕ ಎಸ್.ಎಂ. ಪಾಟೀಲ, ಸಂಘದ ಅಧ್ಯಕ್ಷ ಜಿ.ಟಿ. ಕಶೆಟ್ಟಿ, ಉಪಾಧ್ಯಕ್ಷ ವಾಯ್.ಡಿ. ಬರದೇನಾಳ, ನಿರ್ದೇಶಕರಾದ ಜಿ.ವಿ. ಮೂಲಿಮನಿ, ಬಿ.ವಿ. ಮಾಲಿಪಾಟೀಲ, ಎಸ್.ಬಿ. ಇಲ್ಕಲ್, ಎನ್.ಜಿ. ಗೊಟಗುಣಕಿ, ಎಸ್.ಸಿ. ದೇಸಾಯಿ, ಜೆ.ಡಿ. ಹಜೇರಿ, ಎಂ.ಬಿ. ಕಟ್ಟಿಮನಿ, ಬಿ.ಎಂ. ಕುಂಬಾರ ಹಾಗೂ ಸಿಬ್ಬಂದಿವರ್ಗ ಹಾಜರಿದ್ದರು.
ಮಲ್ಲಿಕಾರ್ಜುನ ಪಾಲ್ಕಿ ಸ್ವಾಗತಿಸಿದರು, ಪಿ.ಬಿ. ಪಾಟೀಲ ವಂದಿಸಿದರು.