logo

ಕದನ ವಿರಾಮಕ್ಕೆ ಒಪ್ಪಿಕೊಂಡ ಇಸ್ರೇಲ್

ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವುದು ಮತ್ತು ಯುದ್ಧವನ್ನು ಕೊನೆಗೊಳಿಸುವುದಕ್ಕಾಗಿರುವ ಚರ್ಚೆಗೆ ಮುಂದಾಗುವಂತೆ ಆದೇಶ ನೀಡಿರುವುದಾಗಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ. ಇಸ್ರೇಲ್‌ಗೆ ಅನುಕೂಲಕರವಾಗುವ ನಿಲುವಿನೊಂದಿಗೆ ಯುದ್ಧವನ್ನು ಕೊನೆಗೊಳಿಸಬಹುದು ಎಂದು ಅವರು ಹೇಳಿದ್ದಾರೆ. ಗಾಝಾವನ್ನು ವಶಪಡಿಸಿಕೊಳ್ಳುವುದಕ್ಕೆ ಸರ್ವ ಸಿದ್ಧತೆಗಳು ನಡೆಸಿರುವುದರ ನಡುವೆಯೇ ಅವರ ಈ ಹೇಳಿಕೆ ಬಿಡುಗಡೆಗೊಂಡಿದೆ.

ವಿಡಿಯೋ ಸಂದೇಶದ ಮೂಲಕ ನೇತನ್ಯಾಹು ತಮ್ಮ ಈ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಗಾಝಾವನ್ನು ಪೂರ್ಣವಾಗಿ ವಶಪಡಿಸಿಕೊಳ್ಳುವ ಬಗ್ಗೆ ಕ್ಯಾಬಿನೆಟ್ ಸಚಿವರ ಜೊತೆ ನೆತನ್ಯಾಹು ಮಾತುಕತೆ ನಡೆಸಿದ್ದಾರೆ. ಇಸ್ರೇಲ್ ಒಂದು ನಿರ್ಣಾಯಕ ಘಟ್ಟದಲ್ಲಿ ಇದೆ ಎಂದು ಅವರು ಹೇಳಿದ್ದಾರೆ.

ಮಾತುಕತೆಯ ಬಗ್ಗೆ ಹಮಾಸ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಬಳಿಕ ಇದೇ ಮೊದಲ ಬಾರಿ ಬಹಿರಂಗವಾಗಿ ಕದನ ವಿರಾಮದ ಬಗ್ಗೆ ನೆತನ್ಯಾಹು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ವಾರದಲ್ಲಿ ಈಜಿಪ್ಟ್‌ ಮತ್ತು ಖತರ್‌ನಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಹಮಾಸ್ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿತ್ತು. ಅರವತ್ತು ದಿನಗಳ ಕದನ ವಿರಾಮಕ್ಕೆ ಹಮಾಸ್ ಸಮ್ಮತಿ ಸೂಚಿಸಿತ್ತು. ಆದರೆ ಇದಕ್ಕೆ ಇಸ್ರೇಲ್ ಪ್ರತಿಕ್ರಿಯಿಸಿರಲಿಲ್ಲ.

50ರಷ್ಟು ಒತ್ತೆಯಾಳುಗಳು ಈಗಲೂ ಗಾಝಾದಲ್ಲಿ ಇದ್ದಾರೆ ಎಂದು ಇಸ್ರೇಲ್ ಹೇಳುತ್ತಿದೆ. ಇವರಲ್ಲಿ ಕನಿಷ್ಠ 20 ಮಂದಿಯಾದರೂ ಜೀವಂತ ಇದ್ದಾರೆ ಎಂದು ಇಸ್ರೇಲ್ ಹೇಳುತ್ತಿದೆ.

ಈ ಮೊದಲು 22 ತಿಂಗಳನ್ನೂ ದಾಟಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಮಾತುಕತೆ ನಡೆಯುತ್ತಿರುವಾಗಲೇ ಗಾಝಾ ನಗರವನ್ನು ವಶಪಡಿಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಗಾಝಾ ನಗರದಲ್ಲಿ ಲಕ್ಷಕ್ಕಿಂತಲೂ ಅಧಿಕ ಮಂದಿ ವಾಸಿಸುತ್ತಿದ್ದಾರೆ.

35
1285 views