
ದಂಡೋತಿ ಗ್ರಾಮದಲ್ಲಿ ಪದೇ ಪದೇ ಮಂಗಗಳ ದಾಳಿ.
ದಂಡೋತಿ ಗ್ರಾಮದಲ್ಲಿ ಪದೇ ಪದೇ ಮಂಗಗಳ ದಾಳಿ.
ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದಲ್ಲಿ ನಾಲ್ಕು ಜನರಿಗೆ ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಂಗಳವಾರ ಮತ್ತೆ ಮಹಿಳೆಯ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ.
ಕಳೆದ ಗುರುವಾರ ಮಂಗನ ದಾಳಿಯಿಂದ ಗ್ರಾಮದ ನೀಲಮ್ಮ ದತ್ತು ಹೂಗಾರ, ವೀರಶೆಟ್ಟಿ ಪ್ರಕಾಶ, ಮಹ್ಮದ್ ಫಾರೂಕ್ ಗೌಸ್ ಪಟೇಲ್, ಮಾಲಮ್ಮ ಚಿಮ್ಮನ್ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಮತ್ತೇ ಮಂಗಳವಾರ ಬೆಳಗ್ಗೆ ಮನೆಯ ಮುಂದಿನ ಬಾವಿಗೆ ನೀರು ತರಲು ಹೋದಾಗ ರೇಷ್ಮಾ ಮಶಾಕ್ ಪಾಟಕದೋರ್ ಎಂಬ ಮಹಿಳೆ ಮೇಲೆ ಏಕಾಏಕಿ ಮಂಗವೊಂದು ದಾಳಿ ಮಾಡಿ ಕಾಲಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಈ ಮಹಿಳೆ ಚಿತ್ತಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಪದೇಪದೆ ದಾಳಿ: ದಂಡೋತಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಮಂಗಗಳ ಹಾವಳಿ ಹೆಚ್ಚಾಗಿದೆ. ಇದಕ್ಕೂ ಮೊದಲು ಗ್ರಾಮದ ಕೆಲವು ಜನರ ಮೇಲೆ ಸಹ ದಾಳಿ ನಡೆಸಿವೆ. ಹೀಗಾಗಿ, ಗ್ರಾಮದಲ್ಲಿ ವಯೋವೃದ್ಧರು, ಮಹಿಳೆಯರು ಮತ್ತು ಮಕ್ಕಳು ಮನೆಯಿಂದ ಹೊರಗೆ ಹೋಗಬೇಕಾದರೂ ಮಂಗಗಳ ದಾಳಿಯ ಭೀತಿ ಕಾಡುತ್ತಲೇ ಇರುತ್ತದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಾರೆ.
ಹೀಗಾಗಿ, ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಮಂಗಗಳನ್ನು ಹಿಡಿಯುವ ಕಾರ್ಯಾಚರಣೆ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.