logo

ಹೆಬ್ಬಾಳ ವಿಸ್ತರಿತ ಫ್ಲೈಓವರ್ ಉದ್ಘಾಟನೆ ವೇಳೆಯೇ ವಿಪರೀತ ಟ್ರಾಫಿಕ್ ಜಾಮ್! ಸಾವಿರಾರು ಜನರಿಗೆ ತೊಂದರೆ

ಹೆಬ್ಬಾಳ ವಿಸ್ತರಿತ ಫ್ಲೈಓವರ್‌ ಅನ್ನುಸೋಮವಾರ ಲೋಕಾರ್ಪಣೆ ಮಾಡಲಾಯಿತು. ಪರಿಣಾಮವಾಗಿ ಶೇ 30 ರಷ್ಟು ಸಂಚಾರ ಕಡಿಮೆಯಾಗುವ ನಿರೀಕ್ಷೆ ಇದೆ. ಇದರ ಹೊರತಾಗಿಯೂ, ಉದ್ಘಾಟನಾ ದಿನವೇ ಜನ ವಿಪರೀತ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿದರು. ಅನೇಕರು ವಿಮಾನ ಮಿಸ್ ಮಾಡಿಕೊಂಡರು ಎಂಬ ಆರೋಪ ಕೇಳಿಬಂದಿದೆ. ಸಂಸದ ತೇಜಸ್ವಿ ಸೂರ್ಯ ಅವರು ಉದ್ಘಾಟನಾ ಕಾರ್ಯಕ್ರಮದ ಸಮಯ ಮತ್ತು ದಿನಾಂಕ ಆಯ್ಕೆಯನ್ನು ಟೀಕಿಸಿದ್ದಾರೆ.ಬೆಂಗಳೂರು, ಆಗಸ್ಟ್ 18: ಬೆಂಗಳೂರಿನ ಸಂಚಾರ ದಟ್ಟಣೆ (Bengaluru Traffic) ಕಡಿಮೆ ಮಾಡುವ ನಿಟ್ಟಿನಲ್ಲಿ ಬಹಳ ಮಹತ್ವದ್ದೆನ್ನಲಾದ ಹೆಬ್ಬಾಳ ವಿಸ್ತರಿತ ಫ್ಲೈಓವರ್ ಉದ್ಘಾಟನೆ (Hebbal Flyover loop Inauguration) ಸೋಮವಾರ ನೆರವೇರಿತು. ಈ ವಿಸ್ತರಿತ ಮೇಲ್ಸೇತುವೆಯಿಂದ ಈ ಭಾಗದಲ್ಲಿ ಟ್ರಾಫಿಕ್ ಶೇ 30 ರಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಹೆಬ್ಬಾಳ ಫ್ಲೈಓವರ್​​ನ ಹೊಸ ಲೂಪ್ ಲೋಕಾರ್ಪಣೆ ದಿನವೇ ಸಾವಿರಾರು ಮಂದಿ ಟ್ರಾಫಿಕ್ ಜಾಮ್​​ನಲ್ಲಿ ಸಿಲುಕಿ ಪರದಾಡುವಂತಾಗಿದೆ. ಅನೇಕರು ವಿಮಾನ ನಿಲ್ದಾಣಕ್ಕೆ ತೆರಳುವ ದಾರಿಯಲ್ಲಿ ಟ್ರಾಫಿಕ್ ಜಾಮ್​​​ನಲ್ಲಿ ಸಿಲುಕಿಕೊಂಡು ವಿಮಾನ ಮಿಸ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ದೀರ್ಘ ವಾರಾಂತ್ಯದ ರಜೆಯ ನಂತರ ಜನರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಬರುವ ಹಾಗೂ ನಿರ್ಗಮಿಸುವ ದಿನವೇ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡು ಸಂಚಾರಕ್ಕೆ ಅಡ್ಡಿ ಮಾಡಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.‘ಇಂದು ಬೆಳಿಗ್ಗೆ ಹೆಬ್ಬಾಳ ರಸ್ತೆಯ ಪ್ರಯಾಣ ಬಹಳ ತ್ರಾಸದಾಯಕವಾಗಿತ್ತು. ಸಂಸತ್ತಿನ ಕಲಾಪದಲ್ಲಿ ಭಾಗವಹಿಸಲು ದೆಹಲಿಗೆ ಹೋಗುವಾಗ, ಸಾವಿರಾರು ಜನರೊಂದಿಗೆ ನಾನೂ ಸಹ ಹೆಬ್ಬಾಳ ಜಂಕ್ಷನ್‌ನಲ್ಲಿ ಸುಮಾರು 50 ನಿಮಿಷಗಳ ಕಾಲ ಸಿಲುಕಿಕೊಂಡೆ ಮತ್ತು ವಿಮಾನ ತಪ್ಪಿಸಿಕೊಳ್ಳುವುದರಲ್ಲಿದ್ದೆ’ ಎಂದು ತೇಜಸ್ವಿ ಸೂರ್ಯ ಎಕ್ಸ್​​ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯ ಸರ್ಕಾರವು ಸೋಮವಾರ ಬೆಳಗ್ಗಿನ ಪೀಕ್ ಅವರ್​​ ಅನ್ನೇ ಉದ್ಘಾಟನೆಗೆ ನಿಗದಿ ಮಾಡಿಕೊಂಡಿದ್ದು ಸಮಸ್ಯೆಗೆ ಕಾರಣವಾಯಿತು. ದೀರ್ಘ ವಾರಾಂತ್ಯ ಮುಗಿದ ಸಂದರ್ಭದಲ್ಲೇ ಕಾರ್ಯಕ್ರಮ ಇರಿಸಲಾಗಿತ್ತು. ಇದರ ಬದಲು ಕನಿಷ್ಠ ಅಡಚಣೆಯಾಗುವಂಥ ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು ಎಂದು ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.ಪ್ರಯಾಣಿಕರ ಸೌಕರ್ಯವನ್ನು ಎಂದಿಗೂ ಕೊನೆಯಲ್ಲಿ ಪರಿಗಣಿಸಲಾಗುತ್ತದೆ. ಯೋಜನೆಯ ವಿನ್ಯಾಸದಲ್ಲಾಗಲಿ ಅಥವಾ ಉದ್ಘಾಟನೆ ಸಮಯ ನಿಗದಿಯಲ್ಲಾಗಲೀ ಸಾರ್ವಜನಿಕರ ಬಗ್ಗೆ ಯಾರೂ ಗಮನಿಸುವುದೇ ಇಲ್ಲ. ಇವುಗಳನ್ನೆಲ್ಲ ಯಾವಾಗಲೂ ರಾಜಕಾರಣಿಗಳಿಂದ ರಾಜಕಾರಣಿಗಳಿಗಾಗಿಯೇ ಮಾಡಲಾಗುತ್ತದೆ ಎಂದು ಸೂರ್ಯ ಟೀಕಿಸಿದ್ದಾರೆ.

ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ 700 ಮೀಟರ್ ಉದ್ದದ ವಿಸ್ತರಿತ ಲೂಪ್, ಹೆಬ್ಬಾಳ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯನ್ನು ಕನಿಷ್ಠ ಶೇ 30 ರಷ್ಟು ಕಡಿಮೆ ಮಾಡುವ ಗುರಿ ಹೊಂದಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ), ಐಟಿ ಕಾರಿಡಾರ್‌ಗಳು ಮತ್ತು ಉತ್ತರ ಉಪನಗರಗಳಿಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ಸಂಚಾರಕ್ಕೆ ಪ್ರಮುಖವಾದ ಈ ಜಂಕ್ಷನ್​​ನ ಸಂಚಾರ ದಟ್ಟಣೆಯು ಬೆಂಗಳೂರಿನ ವಾಹನ ಚಾಲಕರಿಗೆ ದಿನನಿತ್ಯ ಹತಾಶೆಯನ್ನುಂಟುಮಾಡುತ್ತಿತ್ತು.

17
472 views