logo

ಪಿಎಸ್‌ಐ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯ

ಚಿತ್ತಾಪುರ: ಕೋಲಿ ಸಮಾಜದ ಮೇಲೆ ನಿರಂತರವಾಗಿ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಹಲ್ಲೆಗೊಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಾಲೂಕು ಯುವ ಕೋಲಿ ಸಮಾಜದ ನೇತೃತ್ವದಲ್ಲಿ ಮುಖಂಡರು ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು.

ತಾಲೂಕು ಯುವ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರಕ‌ರ್ ಮಾತನಾಡಿ, ಸೇಡಂ ತಾಲೂಕಿನ ಮಳಖೇಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೊಂಕನಳ್ಳಿ ಗ್ರಾಮದಲ್ಲಿ ಸುಮಾರು ಹದಿನೈದು ದಿನಗಳ ಕೆಳಗೆ ಗ್ರಾಮದ ಯುವಕರೆಲ್ಲಾ ಕೂಡಿಕೊಂಡು ಸುಮಾರು 200 ವರ್ಷ ಹಳೆಯದಾಗಿರುವ ಶ್ರೀ ಆಂಜನೇಯ ದೇವಸ್ಥಾನದ ಪಕ್ಕದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಇರುವ ಸ್ಥಳದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ನಾಮಫಲಕವನ್ನು ನೆಟ್ಟಿರುತ್ತಾರೆ. ಆದರೆ ಗ್ರಾಮದಲ್ಲಿ ಜಾತಿ ಜಗಳಕ್ಕೆ ಎಡೆ ಮಾಡಿಕೊಡದಂತೆ ಪಿಎಸ್‌ಐ ಮಳಖೇಡ ಇವರಿಗೆ ದೂರು ನೀಡಿರುತ್ತಾರೆ. ಆಗ ಪಿಎಸ್‌ಐ ಗ್ರಾಮಕ್ಕೆ ಭೇಟಿ ನೀಡಿ ನಾಮಫಲಕ ಯಾರು ನೆಟ್ಟಿರುತ್ತೀರಿ ಅಂತ ವಿಚಾರಿಸಿದಾಗ ಯಾರೂ ಒಪ್ಪಿಕೊಳ್ಳದಿದ್ದಾಗ ಸದರಿ ಪಿಎಸ್‌ಐ ಅವರು ಎಲ್ಲರನ್ನು ಒದ್ದು ಒಳಗಡೆ ಹಾಕಬೇಕಾಗುತ್ತದೆ ಎಂದು ಗದರಿಸಿದ್ದು ಇರುತ್ತದೆ. ಇದಕ್ಕೆ ಸಮಾಜದ ಹಿರಿಯರಾದ ಹಣಮಂತಪ್ಪ ಭಾವನೋರ ಎನ್ನುವವರಿಗೆ ಪದೇ ಪದೇ ಬಂದು
ಇದನ್ನು ತಾವು ತೆಗೆಸದೇ ಹೋದರೆ ಎಲ್ಲರನ್ನು ಒದ್ದು ಒಳಗಡೆ ಹಾಕಬೇಕಾಗುತ್ತದೆ ಎಂದು ಹೆದರಿಕೆ ಹಾಕಿದ್ದರು.

ಮದ್ಯಾಹ್ನ 3.45ರ ಸುಮಾರಿಗೆ ಗ್ರಾಮಕ್ಕೆ ಬಂದ ಪಿಎಸ್‌ಐ ಅವರು ಮತ್ತೆ ಹಣಮಂತ ಅವರನ್ನು ಕರೆಯಿಸಿ ನಾಳೆ ಬೆಳಿಗ್ಗೆ 10 ಗಂಟೆಯ ಒಳಗೆ ಈ ಧ್ವಜ ತೆಗಿಯಿಸಬೇಕು ಇಲ್ಲವಾದರೆ ಬೆಳಿಗ್ಗೆ ನಿಮಗೆ ಹಾಗೂ ನಿಮ್ಮ ಮಕ್ಕಳನ್ನು ಒದ್ದು ಜೈಲಿಗೆ ಹಾಕಬೇಕಾಗುತ್ತದೆ ಎಂದು ಗದರಿಸಿದ್ದರ ಪರಿಣಾಮವಾಗಿ ಹಣಮಂತಪ್ಪ ಭಾವನೋರ ಎನ್ನುವ ಹಿರಿಯರು ಒತ್ತಡಕ್ಕೆ ಒಳಗಾಗಿ ರಾತ್ರಿ 3.30ರ ಸುಮಾರಿಗೆ ವಿಷ ತೆಗೆದುಕೊಂಡು ನಾಮಫಲಕ ಕಟ್ಟೆಯ ಮೇಲೆ ಮಲಗಿದ್ದು ಇರುತ್ತದೆ. ಆದರೆ ಊರಿನ ಇತರರು ಬೆಳಿಗ್ಗೆ 5.30ರ ಸುಮಾರಿಗೆ ನೋಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಾಮಫಲಕವನ್ನು ನೆಟ್ಟಿರುವ ವಿಷಯಕ್ಕೆ ಸಂಬಂಧಿಸಿದಂತೆ ಪದೇ ಪದೇ ಪಿಎಸ್‌ಐ ಅವರು ಬೆದರಿಕೆಯನ್ನುಂಟು ಮಾಡಿದ ಪರಿಣಾಮವಾಗಿ ವಿಷ ಸೇವನೆ ಮಾಡಿರುತ್ತಾರೆ. ಹೀಗಾಗಿ ಕೂಡಲೇ ಪಿಎಸ್‌ಐ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಜೀವವೇ ಹೋಗಿದ್ದರೆ ನಾಲ್ಕು ಮಕ್ಕಳು ಬೀದಿ ಪಾಲಾಗಿ ಅನಾಥರಾಗುತ್ತಿದ್ದರು. ಅದಕ್ಕಾಗಿ ಈ ಎಲ್ಲಾ ಬೆಳವಣಿಗೆಗಳಿಗೆ ಮೂಲ ಕಾರಣದಾಗಿರುವ ಪಿಎಸ್‌ಐ ಅವರನ್ನು ಈ ಕೂಡಲೇ ಸೇವೆಯಿಂದ ವಜಾ ಮಾಡಬೇಕು ಮತ್ತು ವಿಷ ಸೇವನೆ ಮಾಡಿಕೊಂಡ ಕುಟುಂಬದವರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಂಬಣ್ಣ ಹೊಳಿಕಟ್ಟಿ, ರವಿ ದೊಡ್ಡಮನಿ, ಭೀಮು ಭಾಗೋಡಿ, ತಿಪ್ಪಣ್ಣ ಇವಣಿ, ಶರಣಪ್ಪ ತೆಂಗಳಿ, ಲಿಂಗಬಸ್ಸು ಸೇಡಂ, ಶರಣಪ್ಪ ಭಾಗೋಡಿ, ಅಯ್ಯಪ್ಪ ಬಾನರ್‌ ಕರದಳ್ಳಿ, ಸಿದ್ದಣ್ಣ ತಳವಾರ, ರಾಜು ಹೊಸ್ಸು‌ರ್, ಕಾಶಿನಾಥ ತೆಂಗಳಿ, ಮಲ್ಲು ಮುಗುಳನಾಗಾಂವ, ಮಲ್ಲು ರಾಜೋಳ್ಳಿ ಸೇರಿದಂತೆ ಇತರರು ಇದ್ದರು.

5
79 views