logo

ಗೌರಿಬಿದನೂರು ಯೂಥ್ ಕಾಂಗ್ರೆಸ್ ಅಧ್ಯಕ್ಷರದಿಂದ ವೃತ್ತ ನಿರೀಕ್ಷಕರ ಮೇಲೆ ಆರೋಪಗಳ ಸುರಿಮಳೆ.

*ಪೊಲೀಸ್ ಅಧಿಕಾರಿ ಮೇಲೆ ಕಾಂಗ್ರೆಸ್ ಯುವ ಘಟಕದ ಆರೋಪ*

ಗೌರಿಬಿದನೂರು : ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಕಾಂಗ್ರೆಸ್ ಯುವ ಘಟಕದ ವತಿಯಿಂದ ಪೊಲೀಸ್ ಅಧಿಕಾರಿಯ ವಿರುದ್ಧ ಮಹತ್ತರವಾದ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದರು.

ಈ ವೇಳೆ ಕಾಂಗ್ರೆಸ್ ಪಕ್ಷದ ಯುವ ಘಟಕದ ತಾಲ್ಲೂಕು ಅಧ್ಯಕ್ಷರಾದ ವಿಜಯ್ ಕುಮಾರ್ ಮಾತನಾಡಿ, ಆಗಸ್ಟ್ 6 ರಂದು ಬುಧವಾರ ವಾಟದಹೊಸಹಳ್ಳಿ ಕೆರೆ ನೀರಿಗೆ ಸಂಬಂಧಿಸಿದಂತೆ ನಗರಗೆರೆ ಹೋಬಳಿಯ ನಾಗರೀಕರು ವಾಟದಹೊಸಹಳ್ಳಿ ಯಿಂದ ಗೌರಿಬಿದನೂರು ನಗರದ ಹೊರವಲಯದಲ್ಲಿರುವ ಪ್ರಜಾಸೌಧದ ವರೆಗೆ ಬೃಹತ್ ಸಂಖ್ಯೆಯಲ್ಲಿ ಕಾಲ್ನಡಿಗೆಯ ಜಾಥಾವನ್ನು ಏರ್ಪಡಿಸಿದ್ದರು. ಈ ವೇಳೆ ಪ್ರಜಾಸೌಧದ ಬಳಿ ಪೊಲೀಸ್ ಅಧಿಕಾರಿಗಳಿಗೆ ಮತ್ತು ಜಾಥಾದಲ್ಲಿ ಭಾಗವಹಿಸಿದ್ದ ಹೋರಾಟಗಾರರಿಗೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಕೆಲವು ಯುವಕರ ಮೇಲೆ ಕೈ ಮಾಡಿದ್ದರು. ಇದರ ಬಗ್ಗೆ ಅಧಿಕಾರಿಯೇ ಕರೆ ಮಾಡಿ ಯುವಕರೊಂದಿಗೆ ವಿಷಾದನೀಯ ಮಾತನ್ನು ಹಾಡಿದರು ಎನ್ನಲಾಗಿದೆ.

ಘಟನೆಯ ಬಳಿಕ ನಾನು ಕಾರ್ಯದ ನಿಮಿತ್ತ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿದ್ದ ಸಂದರ್ಭದಲ್ಲಿ ಗ್ರಾಮಾಂತರ ಪಿಎಸೈ ರಮೇಶ್ ರವರ ಮೊಬೈಲ್ ಗೆ ಕರೆ ಮಾಡಿದ್ದ ಸಿಪಿಐ ಕೆ.ಪಿ.ಸತ್ಯನಾರಾಯಣ‌ ರವರು ನಾನೊಬ್ಬ ರಾಷ್ಟ್ರೀಯ ಪಕ್ಷದ ಯುವ‌ ಘಟಕದ ತಾಲ್ಲೂಕು ಅಧ್ಯಕ್ಷ ಎನ್ನುವುದನ್ನೂ ಲೆಕ್ಕಿಸದೆ ನನ್ನನ್ನು ಮತ್ತು ನಮ್ಮ ಪಕ್ಷವನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಅವಹೇಳನಕಾರಿಯಾಗಿ ನಡೆದುಕೊಂಡಿರುವುದು ಮನಸ್ಸಿಗೆ ತೀವ್ರ ನೋವಾಗಿದೆ. ನನಗೆ ಪೊಲೀಸ್ ಇಲಾಖೆಯ ಮೇಲೆ ಅಪಾರವಾದ ಗೌರವ ಮತ್ತು ನಂಭಿಕೆಯಿದೆ. ಆದರೆ ತಾಲ್ಲೂಕಿನ ಜನತೆಯ ರಕ್ಷಣೆಯನ್ನು ಮಾಡುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಓರ್ವ ಸಾಮಾನ್ಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನನ್ನು ಈ ರೀತಿ ನಿಂದನೆ ಮಾಡುವುದು ಸರಿಯಲ್ಲ. ನಾನೊಬ್ಬ ದಲಿತ ಯುವಕ, ರಾಜಕೀಯವಾಗಿ ಬೆಳೆಯುವುದನ್ನು ಸಹಿಸದ ಇವರು ಈ ರೀತಿಯಾಗಿ ನನ್ನನ್ನು ನಿಂಧಿಸಿದ್ದಾರೆ.

ಕಳೆದ ಮೂರೂವರೆ ವರ್ಷದಲ್ಲಿ ತಾಲ್ಲೂಕಿನಲ್ಲಿ ನಡೆದಿರುವ ಅಕ್ರಮಗಳಲ್ಲಿ ಸಿಪಿಐ ರವರ ಪಾತ್ರ ಏನು ಎಂಬುದು ನಮಗೆ ತಿಳಿದಿದೆ. ಓರ್ವ ಸರ್ಕಾರಿ ಅಧಿಕಾರಿಯಾದ ಇವರು ಕ್ಷೇತ್ರದ ರಾಜಕಾರಣಿಯೊಬ್ಬರ ಅಡಿಯಾಳಾಗಿ ಕೆಲಸ ಮಾಡುತ್ತಿದ್ದಾರೆ. ಅವರ ವೃತ್ತಿಯನ್ನು ದಕ್ಷತೆಯಿಂದ ಮಾಡದೆ ರಾಜಕಾರಣ ಮಾಡುತ್ತಿದ್ದಾರೆ. ಇವರ ಅಧಿಕಾರವಧಿಯಲ್ಲಿ ಮಾಡಿರುವ ಅಕ್ರಮಗಳು ಮತ್ತು ಅವ್ಯವಹಾರಗಳ ಬಗ್ಗೆ ನಮ್ಮಲ್ಲಿ ಸಂಪೂರ್ಣ ಮಾಹಿತಿಯಿದೆ. ಇದರ ಬಗ್ಗೆ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ಮತ್ತು ಮಾನ್ಯ ಗೃಹಸಚಿವರನ್ನು ಭೇಟಿ ಮಾಡಿ ಸತ್ಯಾಸತ್ಯತೆಯ ಬಗ್ಗೆ ವಿವರಣೆ ನೀಡಲಾಗುವುದು ಎಂದು 'ಗಾಳಿಯಲ್ಲಿ ಗುಂಡು ಹೊಡೆದಂತೆ' ಯಾವುದೇ ಸಾಕ್ಷ್ಯಾಧಾರ ಗಳಿಲ್ಲದೆ ಸಿಪಿಐ ಕೆ.ಪಿ.ಸತ್ಯನಾರಾಯಣ ರವರ ಮೇಲೆ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರು 'ತೊಡೆತಟ್ಟಿ' ಆರೋಪಗಳ ಸುರಿಮಳೆಯನ್ನು ಸುರಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ, ತಾಲ್ಲೂಕಿನ ಓರ್ವ ಪೊಲೀಸ್ ಅಧಿಕಾರಿಯು ಪಕ್ಷದ ಯುವ ಕಾರ್ಯಕರ್ತರ ಮೇಲೆ ಈ ರೀತಿಯಾಗಿ ಮಾತನಾಡುವುದು ಅವರ ವೃತ್ತಿಗೆ ಶೋಭೆ ತರುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ, ಕ್ಷೇತ್ರದಲ್ಲಿ ನಮ್ಮ ಯುವ ಕಾರ್ಯಕರ್ತರು ಸಾಮರಸ್ಯದಿಂದ ಪಕ್ಷದ ಸಂಘಟನೆ ಮಾಡುತ್ತಿದ್ದಾರೆ. ಆದರೆ ಪೊಲೀಸ್ ಅಧಿಕಾರಿಯೊಬ್ಬರು ಈ ರೀತಿಯಾಗಿ ಹೇಳುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಘಟಕದ ಯುವಕರು ಇವರ ವಿರುದ್ಧ ಬೃಹತ್ ಪ್ರತಿಭಟನೆ ಮಾಡಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕುಬೇರ ಅಚ್ಚು, ಜಿಲ್ಲಾ ಉಪಾಧ್ಯಕ್ಷರಾದ ಬಂಗಾರಿ, ದೀಪಂಶು, ಯುವ ಕಾಂಗ್ರೆಸ್ ಕಾರ್ಯಕರ್ತರಾದ
ನವೀನ್‌ಕುಮಾರ್, ಹರ್ಮಾನ್, ನಾಗೇಶ್ ರೆಡ್ಡಿ, ನವೀನ್, ರೇವಂತ್ ರೆಡ್ಡಿ, ಭಾಸ್ಕರ್ ರೆಡ್ಡಿ, ಮಂಜುನಾಥ್, ನಾಗರಾಜ್, ಮಧು, ರಘುವರ್ಧನ್, ಶಮೀರ್, ವಸೀಂ, ಮತೀನ್, ಶಿವಪ್ಪ, ನಾಗ, ಗೊವಿಂದ ನಾಯಕ್, ತಿಪ್ಪಣ್ಣ, ರಮೇಶ್, ನಾಗಾರ್ಜುನ ಸೇರಿದಂತೆ ಇತರರು ಭಾಗವಹಿಸಿದ್ದರು.

43
4121 views