logo

ಪೊಲೀಸ್ ಸಿಬ್ಬಂದಿ ಸುಮಾರು 400 ಕೆಜಿಗಿಂತಲೂ ಹೆಚ್ಚು ತೂಕ ಕಳೆದುಕೊಂಡಿರುವುದು ಹೆಮ್ಮೆಯ ಸಂಗತಿ

ಪೊಲೀಸ್ ಇಲಾಖೆಯಲ್ಲಿ ದೈಹಿಕ ಸದೃಢತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಏರ್ಪಡಿಸಿದ ಆರೋಗ್ಯ ಶಿಬಿರದಲ್ಲಿ ಪೊಲೀಸ್ ಸಿಬ್ಬಂದಿ ಸುಮಾರು 400 ಕೆಜಿಗಿಂತಲೂ ಹೆಚ್ಚು ತೂಕ ಕಳೆದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಹುಬ್ಬಳ್ಳಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದರು.

ಹುಬ್ಬಳ್ಳಿ ನಗರದ ಆರ್.ಎನ್.ಶೆಟ್ಟಿ ರಸ್ತೆಯ ಮುಕುಂದನಗರದಲ್ಲಿರುವ ಪತಂಜಲಿ ವೆಲ್ ನೆಸ್ ವಿಶ್ವ ಚೇತನ್ ಯೋಗ ಮತ್ತು ಸಂಶೋಧನಾ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಎರಡು ದಿನಗಳ ಕಾಲ ಆಯೋಜಿಸಿದ ಆರೋಗ್ಯ ಶಿಬಿರದ ಸಮಾರೋಪದಲ್ಲಿ ಸಿಬ್ಬಂದಿಯನ್ನು ಅಭಿನಂದಿಸಿ ಮಾತನಾಡಿದರು.

ಪೊಲೀಸ್ ಇಲಾಖೆಯಲ್ಲಿ ಶಿಸ್ತು, ಕಠಿಣ ನಿಯಮಗಳನ್ನು ಪಾಲಿಸಬೇಕಾಗಿರುತ್ತದೆ. ಇದಕ್ಕೆ ಸಿಬ್ಬಂದಿಯ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ, ಭದ್ರತೆಗೆ ನಿಯೋಜಿಸಿದ ಸಿಬ್ಬಂದಿ ದಿನವಿಡಿ ನಿಂತು ಕೆಲಸ ಮಾಡುವ ಅನಿವಾರ್ಯತೆ ಇರುತ್ತದೆ. ಸಿಬ್ಬಂದಿ ಆರೋಗ್ಯದಿಂದ ಇದ್ದರೆ ಚುರುಕಾಗಿ ಕಾರ್ಯ ನಿರ್ವಹಿಸಬಹುದು, ಈ ನಿಟ್ಟಿನಲ್ಲಿ ಆಯೋಜಿಸಿದ ಶಿಬಿರದಲ್ಲಿ ಸಿಬ್ಬಂದಿಗಳು ಉತ್ತಮವಾಗಿ ತರಭೇತಿ ಪಡೆದುಕೊಂಡಿದ್ದಾರೆ. ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.

ಈ ಹಿಂದೆ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ 80 ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ತರಭೇತಿ ಆಯೋಜಿಸಿ ಯಶಸ್ವಿಯಾಗಿದ್ದೇವೆ. ಇದನ್ನು ಆಗಿನ ಸಿಎಂ, ಗೃಹ ಮಂತ್ರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದರು, ಅದನ್ನೆ ಹುಬ್ಬಳ್ಳಿ-ಧಾರವಾಡದಲ್ಲೂ ಮುಂದುವರೆಸಿದ್ದೇನೆ. ಕರ್ತವ್ಯದಲ್ಲಿರುವ 30-40 ವರ್ಷದ ಸಿಬ್ಬಂದಿ ಆಕಸ್ಮಿಕ ಆರೋಗ್ಯ ಸಮಸ್ಯೆಗಳಿಂದ ಜೀವ ಕಳೆದುಕೊಳ್ಳುತ್ತಿರುವುದು ಶೋಚನೀಯ, ಈ ನಿಟ್ಟಿನಲ್ಲಿ ಇಂತಹ ಶಿಬಿರ ಹಮ್ಮಿಕೊಳ್ಳುವ ವಿಚಾರ ಹೊಂದಿದ್ದೇವೆ ಎಂದು ತಿಳಿಸಿದರು.

ಇಲ್ಲಿನ ಪೊಲೀಸ್ ಸಿಬ್ಬಂದಿ ಒಂದೇ ಕುಟುಂಬದಂತೆ ಕಾರ್ಯನಿರ್ವಹಿಸುವುದು ವಿಶೇಷ, ಸಿಬ್ಬಂದಿ ಕರ್ತವ್ಯದ ದೃಷ್ಟಿಯಿಂದ ಮಾತ್ರವಲ್ಲದೇ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು, ಸ್ವಇಚ್ಛೆಯಿಂದ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು ಎಂದರು.

ಪತಂಜಲಿ ಯೋಗ ಕೇಂದ್ರದ ಮುಖ್ಯಸ್ಥ ಭವರಲಾಲ್ ಆರ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲ ಠಾಣೆ ಸಿಬ್ಬಂದಿಗಳಿಗೆ ಒಂದೊಂದು ವಾರ ಉಚಿತ ಯೋಗ ತರಬೇತಿ ನೀಡಲು ನಾವು ಸಿದ್ದವಿದ್ದು, ಪೊಲೀಸ್ ಇಲಾಖೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಪ್ರತಿನಿತ್ಯ ಕರ್ತವ್ಯಕ್ಕೆ ಹೋಗುವ ಮುನ್ನ 11 ಬಾರಿ ಓಂಕಾರ ಹೇಳುವ ಮೂಲಕ ಕೆಲಸದಲ್ಲಿ ಎದುರಾಗುವ ಒತ್ತಡಗಳನ್ನು ಸುಲಭವಾಗಿ ಎದುರಿಸಬಹುದು. ಇದು ಆತ್ಮ ಸ್ಥೈರ್ಯವನ್ನು ನೀಡುತ್ತದೆ ಎಂದರು.

ಈ ಸಂದರ್ಭದಲ್ಲಿ ಡಿಸಿಪಿ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್, ಯಲ್ಲಪ್ಪ ಕಾಶಪ್ಪನವರ, ಉಕುಮಚಂದ ಬಾಫನಾ, ರಮೇಶ ಬಾಫನಾ, ಮುಖೇಶ ಬಾಫನಾ, ನಗರದ ವಿವಿಧ ಠಾಣೆಯ ಪೊಲೀಸರು ಉಪಸ್ಥಿತರಿದ್ದರು.

0
4 views