logo

ವಿಜಯಪುರ ನಿಂಬೆ ಜನಪ್ರಿಯತೆಗೆ ರಾಜ್ಯಾದ್ಯಂತ 'ಲೆಮನ್ ಟೀ ಪಾಯಿಂಟ್' ಸ್ಥಾಪನೆಗೆ ಮಂಡಳಿ ಚಿಂತನೆ

ವಿಜಯಪುರ: ವಿಜಯಪುರ ಜಿಲ್ಲೆಯ ಹೆಮ್ಮೆಯ ಉತ್ಪನ್ನವಾದ ನಿಂಬೆಹಣ್ಣಿಗೆ ಭೌಗೋಳಿಕ ಸೂಚ್ಯಂಕ (GI) ಸ್ಥಾನಮಾನ ಲಭಿಸಿರುವ ಹಿನ್ನೆಲೆಯಲ್ಲಿ, ಈ ನಿಂಬೆಹಣ್ಣಿನ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಲು ಕರ್ನಾಟಕ ನಿಂಬೆ ಅಭಿವೃದ್ಧಿ ಮಂಡಳಿಯು ಮಹತ್ವದ ಹೆಜ್ಜೆಯಿಟ್ಟಿದೆ. ರಾಜ್ಯದಾದ್ಯಂತ 'ಲೆಮನ್ ಟೀ ಪಾಯಿಂಟ್'ಗಳನ್ನು ಸ್ಥಾಪಿಸಲು ಮಂಡಳಿ ನಿರ್ಧರಿಸಿದೆ.

ವಿಜಯಪುರ ನಿಂಬೆಗೆ ವಿಶೇಷ ಸ್ಥಾನ
ಕರ್ನಾಟಕದಲ್ಲಿ ಅತಿ ಹೆಚ್ಚು ನಿಂಬೆಹಣ್ಣು ಬೆಳೆಯುವ ಜಿಲ್ಲೆ ವಿಜಯಪುರ. ಅದರಲ್ಲೂ, ರಾಜ್ಯದ ಒಟ್ಟಾರೆ ನಿಂಬೆ ಉತ್ಪಾದನೆಯಲ್ಲಿ ಇಂಡಿ ತಾಲ್ಲೂಕಿನ ಪಾಲು ಶೇ.50ಕ್ಕೂ ಹೆಚ್ಚು! ಇಲ್ಲಿನ ವಿಶಿಷ್ಟ ಗುಣಮಟ್ಟದ ನಿಂಬೆಹಣ್ಣುಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಈ ಟೀ ಪಾಯಿಂಟ್ಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ. ಇತರೆ ಆಸಕ್ತರಿಗೆ ಫ್ರಾಂಚೈಸಿ ನೀಡುವ ಬಗ್ಗೆಯೂ ಮಂಡಳಿ ಚಿಂತನೆ ನಡೆಸಿದೆ ಎಂದು ಕರ್ನಾಟಕ ನಿಂಬೆ ಅಭಿವೃದ್ಧಿ ಮಂಡಳಿ ಮಾಹಿತಿ ನೀಡಿದೆ.
ಯಶಸ್ವಿ ಪ್ರಯೋಗ, ರಾಜ್ಯವ್ಯಾಪಿ ವಿಸ್ತರಣೆ
ಮೊದಲಿಗೆ ಇಂಡಿ ಪಟ್ಟಣದಲ್ಲಿ ಪ್ರಾಯೋಗಿಕವಾಗಿ ಲೆಮನ್ ಟೀ ಪಾಯಿಂಟ್ಗಳನ್ನು ಆರಂಭಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಕಾರಣ, ಇದೀಗ ರಾಜ್ಯದಾದ್ಯಂತ ಟೀ ಪಾಯಿಂಟ್ಗಳನ್ನು ವಿಸ್ತರಿಸಲು ಯೋಜನೆ ರೂಪಿಸಲಾಗಿದೆ.
ಇಂಡಿ ನಿಂಬೆಹಣ್ಣುಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು, ಕೃಷಿ ಮೇಳಗಳು ಮತ್ತು ಫಲಪುಷ್ಪ ಪ್ರದರ್ಶನಗಳು ಸೇರಿದಂತೆ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ಟೀ ಪಾಯಿಂಟ್ಗಳನ್ನು ಸ್ಥಾಪಿಸಲಾಗುವುದು ಎಂದು ಮಂಡಳಿ ತಿಳಿಸಿದೆ. ಈ ಉಪಕ್ರಮವು ವಿಜಯಪುರದ ನಿಂಬೆಗೆ ಮತ್ತಷ್ಟು ಖ್ಯಾತಿ ತಂದು, ಸ್ಥಳೀಯ ರೈತರಿಗೆ ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

9
884 views