logo

ಕೇರಳದಲ್ಲಿ ನಿಪಾ ವೈರಸ್ ಮತ್ತೊಮ್ಮೆ ದಾಳಿ: ಎರಡನೇ ಬಲಿ ದೃಢ, ಆರು ಜಿಲ್ಲೆಗಳಲ್ಲಿ ಹೈ ಅಲರ್ಟ್ ಜೂಲೈ 14, 2025


ತಿರುವನಂತಪುರಂ: ಕೇರಳದಲ್ಲಿ ನಿಪಾ ವೈರಸ್‌ಗೆ ಇನ್ನೊಬ್ಬರು ಬಲಿಯಾಗಿದ್ದು ಧೃಡಪಟ್ಟಿದೆ. ಹೀಗಾಗಿ ಕೇರಳದ ಆರು ಜಿಲ್ಲೆಗಳಾದ ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು, ವಯನಾಡ್ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆಯಿಂದ ಎಚ್ಚರಿಕೆಯಿಂದ ಇರುವಂತೆ ಮಾರ್ಗಸೂಚಿ ಹೊರಡಿಸಲಾಗಿದೆ.


ನಿಪಾ ಲಕ್ಷಣಗಳು ಕಂಡುಬಂದಲ್ಲಿ ವರದಿ ಮಾಡುವಂತೆ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚಿಸಿದೆ.

ನಿನ್ನೆ ಪಾಲಕ್ಕಾಡ್‌ನ ಕುಮಾರಂಪುತ್ತೂರು ನಿವಾಸಿಯೊಬ್ಬರು ನಿಪಾ ವೈರಸ್‌ ಸೋಂಕಿನಿಂದ ಮೃತಪಟ್ಟಿದ್ದಾರೆ. ಸುಮಾರು 40 ಜನ ಇವರ ಸಂಪರ್ಕದಲ್ಲಿ ಇದ್ದರು(ಭೇಟಿ ಮಾಡಿದ್ದರು). ಹೀಗಾಗಿ ಪಾಲಕ್ಕಾಡ್ ಮತ್ತು ಮಲಪ್ಪುರಂನಲ್ಲಿ ಅನಗತ್ಯ ಆಸ್ಪತ್ರೆ ಭೇಟಿಗಳನ್ನು ತಪ್ಪಿಸುವಂತೆ ಆರೋಗ್ಯ ಇಲಾಖೆ ಜನರಿಗೆ ಸೂಚನೆ ನೀಡಿದೆ. ರೋಗ ಲಕ್ಷಣ ಮತ್ತು ಸಂಪರ್ಕ ಪಟ್ಟಿಯಲ್ಲಿದ್ದ ಕೆಲವರ ವರದಿಗಳು ನೆಗೆಟಿವ್ ಬಂದಿದ್ದರಿಂದ ಆರೋಗ್ಯ ಇಲಾಖೆ ಸ್ವಲ್ಪ ನಿರಾಳರಾಗೊಂಡಿತ್ತು. ಆದರೆ ಹೊಸ ಸಾವು ಆತಂಕ ಮೂಡಿಸಿದೆ.

ಒಂದು ವಾರದ ಹಿಂದೆ ಪಾಲಕ್ಕಾಡ್ ಮಣ್ಣಾರ್ಕಾಡ್ ಕುಮಾರಂಪುತ್ತೂರು ಚಂಗಲೀರಿ ನಿವಾಸಿ 58 ವರ್ಷದ ವ್ಯಕ್ತಿಯೊಬ್ಬರು ಜ್ವರದಿಂದ ಬಳಲುತ್ತಿದ್ದರು. ಅವರು ಮಣ್ಣಾರ್ಕಾಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ವಟ್ಟಂಬಲಂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕಳೆದ ಶುಕ್ರವಾರ ಮಲಪ್ಪುರಂ ಪೆರಿಂತಲ್ಮಣ್ಣದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಕುಮಾರಂಪುತ್ತೂರು ಚಂಗಲೀರಿಯ ಮೂರು ಕಿಲೋಮೀಟರ್ ಸುತ್ತಳತೆಯಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ. ಹಾಗೂ ನಿಪಾದಿಂದ ಮೃತರಾದವರ ಸಂಪರ್ಕದಲ್ಲಿದ್ದವರು ಕೂಡಲೇ ಕ್ವಾರಂಟೈನ್‌ಗೆ ಒಳಗಾಗಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ.


ಪಾಲಕ್ಕಾಡ್, ಮಲಪ್ಪುರಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಸುಮಾರು 500 ಜನರು ನಿಪಾ ಸಂಪರ್ಕ ಪಟ್ಟಿಯಲ್ಲಿದ್ದಾರೆ. ಮಲಪ್ಪುರಂನಲ್ಲಿ 203, ಕೋಝಿಕ್ಕೋಡ್‌ನಲ್ಲಿ 114, ಪಾಲಕ್ಕಾಡ್‌ನಲ್ಲಿ 178 ಮತ್ತು ಎರ್ನಾಕುಲಂನಲ್ಲಿ ಇಬ್ಬರು ಸಂಪರ್ಕ ಪಟ್ಟಿಯಲ್ಲಿದ್ದಾರೆ. ಮಲಪ್ಪುರಂನಲ್ಲಿ 10 ಮಂದಿ ರೋಗ ಲಕ್ಷಣಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ಐಸಿಯುನಲ್ಲಿದ್ದಾರೆ. ಮಲಪ್ಪುರಂನಲ್ಲಿ 62 ಮಾದರಿಗಳು ನೆಗೆಟಿವ್ ಬಂದಿವೆ.

ಈ ಹಿಂದೆ ರೋಗ ದೃಢಪಟ್ಟಿದ್ದ ಪಾಲಕ್ಕಾಡ್ ತಚ್ಚನಾಟ್ಟುಕರ ನಿವಾಸಿ ಯುವತಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಈ ತಿಂಗಳ 1 ರಂದು ಮೃತಪಟ್ಟ ಮಲಪ್ಪುರಂ ಮಂಕಡ ನಿವಾಸಿ 18 ವರ್ಷದ ಯುವಕನಿಗೂ ನಿಪಾ ದೃಢಪಟ್ಟಿತ್ತು. ಈಗ ಚಂಗಲೇರಿ ನಿವಾಸಿಯೊಬ್ಬರ ಸಾವಿನಿಂದಾಗಿ ಕೇರಳದಲ್ಲಿ ನಿಪಾಗೆ ಬಲಿಯಾದವರ ಸಂಖ್ಯೆ 2ಕ್ಕೆ ಏರಿದೆ...

18
328 views
  
1 shares