logo

ಕವನ: ಎತ್ತ ಸಾಗುತ್ತಿದೆಯೋ ಈ ಸಮಾಜ…?!! ✍️ ಸಿಂಸಾರುಲ್ ಹಕ್ ಆರ್ಲಪದವು

ಕವನ: ಎತ್ತ ಸಾಗುತ್ತಿದೆಯೋ ಈ ಸಮಾಜ…?!!

ಎತ್ತ ಸಾಗುತ್ತಿದೆಯೋ ಈ ಸಮಾಜ...
ಒಂದೆಡೆ ಕೋಮು ಭಾವವ ಉರಿಯೆಬ್ಬಿಸುವ ಮಾತಿನ ದಾಳಿ
ಮತ್ತೊಂದೆಡೆ ಪರರ ನೆತ್ತರಲ್ಲಿ
ಕೈ ಕೆಂಪಾಗಿಸುವ ಕ್ರೌರ್ಯ...!

ಸತ್ತವನಿಗೋ ಅರಿವಿಲ್ಲ –
ಏಕೆ ನಾನು ಸತ್ತೆ?
ಕೊಂದವನಿಗಂತೂ ಗೊತ್ತೇ ಇಲ್ಲ – ನಾನು ಯಾಕೆ ಕೊಂದೆ?
ಅದರೆ ಅವರಿಗೋ ಬೇಕಾಗಿದ್ದುದು ಒಂದೇ -
ಅಮಾಯಕ ಪ್ರಾಣ…

ಅವನ ಶವ ಬಿದ್ದರೂ ನಿಲ್ಲಲಿಲ್ಲವಲ್ಲ ಈ ಆಟ
ತಾಯಿಗೆ ಶೋಕ, ಮಡದಿಗೆ ವಿಧವತ್ವ
ಮಕ್ಕಳಿಗೆ ಅಪ್ಪುಗೆಯ
ನೆನಪಷ್ಟೇ ಉಳಿದುಬಿಟ್ಟಿತಲ್ಲ...
ಛೇ... ಅನಾಥವಾಯಿತಲ್ಲ ಆ ಕುಟುಂಬ...

"ಬುದ್ಧಿವಂತರ ಜಿಲ್ಲೆ" ಎಂಬ ಹೆಮ್ಮೆ
ಇಂದು ಕೋಮು ಗಲಭೆ ದ್ವೇಷ ಉಕ್ಕಿಸುವ
ದಳ್ಳುರಿಯ ಕಿಚ್ಚಿಗೆ ಹೆಸರಾಯಿತೇ...

ಸತ್ತ ಮನುಜನ ಎದೆಯ ಮೇಲೂ ರಾಜಕೀಯ ಲಾಭದ ಲೆಕ್ಕ!
ಹೋಗುತ್ತಿದೆ ದಿನಕ್ಕೊಂದು ಜೀವ
ಇವನಿಗಾಗಿ... ಅವನಿಗಾಗಿ...
ಕೊನೆಗೂ ಧರ್ಮದ ಹೆಸರಿನಲ್ಲಿ!

ಒಂದು ಕೊಲೆಗೆ ಪ್ರತೀಕಾರ..
ಅದುವೇ ಮತ್ತೆ ಮತ್ತೊಂದು ಕೊಲೆ –
ಹೃದಯವಿಲ್ಲದ ಹತ್ಯೆಗೀತೆಗಳ ಪೈಪೋಟಿ
ಆರಂಭವಾಗಿದೆ... ಆದರೆ ಅಂತ್ಯವೆಲ್ಲಿ..? ಇದಕಾರು ಹೊಣೆ..?

ಓ ಮನುಜನೇ ಕೇಳು...
ನಿನ್ನ ಹೃದಯವನ್ನು ಮುಟ್ಟಿ ಒಮ್ಮೆ ಕೇಳು...
ಜಾತಿ, ಧರ್ಮಕ್ಕಿಂತ ಮಿಗಿಲು ಮನುಷ್ಯತ್ವವಲ್ಲದೆ ಮತ್ತೇನು..?
ಹರಿವ ರಕ್ತವೂ ಕೆಂಪು... ಕರೆವ ಹೆಸರೂ
ಮಾನವ ಎಂಬುದೇ ಅಲ್ಲವೇ...?

ಏಳು... ಮನುಜನೇ...ಎದ್ದೇಳು
ತಡೆದು ನಿಲ್ಲಿಸು ಈ ಶವಯಾತ್ರೆಯ ಹಾದಿಯ
ಪ್ರೀತಿ, ಸಹನೆ, ಐಕ್ಯತೆ ಎಂಬ ದೀಪವ
ಹಚ್ಚಿ ಬಿಡು ಮತ್ತೆ
ಒದಗಿಸಿ ಆ ತಾಯಿಯರ ಒಡಲ ಕಣ್ಣೀರಿಗೆ
ಮೌಲ್ಯ ಪಾವಿತ್ರ್ಯತೆಯ
ನಿರಾಳ ನಿರುಮ್ಮಳವಾಗಿಸು ಎಲ್ಲರದೆಯ...


✍️ ಸಿಂಸಾರುಲ್ ಹಕ್ ಆರ್ಲಪದವು
ದ್ವಿತೀಯ, ಪದವಿ ವಿದ್ಯಾರ್ಥಿ
ಸಂತ ಫಿಲೋಮಿನಾ ಕಾಲೇಜು ದರ್ಬೆ ಪುತ್ತೂರು

13
94 views