
ಮೌಲ್ಯಯುತ ಲೌಕಿಕ ಬದುಕಿಗೆ ಅಂತಿಮ ವಿದಾಯ ಹೇಳಿದ ಉರುಗ್ವೆಯ ಬಡ ಅಧ್ಯಕ್ಷ : ಜೋಸೆ ಮೊಯಿಕಾ
ಜಗತ್ತಿನ ಜಾಗತಿಕ ರಾಜಕೀಯ ನಾಯಕರ ಆಸ್ತಿಗಳನ್ನು ನೋಡಿದರೆ ನಿಮ್ಮ ಕಣ್ಣಿಗೆ ಯಾರೊಬ್ಬರೂ ಬಡವರು ಕಾಣುವುದಿಲ್ಲ ಕಂಡರೂ ಕೂಡ ಜನ ಅದನ್ನು ನಂಬದ ಸ್ಥಿತಿಗೆ ಇಂದಿನ ಪರಿಸ್ಥಿತಿ ಬಂದು ನಿಂತಿದೆ. ಇನ್ನು ಭಾರತದಲ್ಲಿ ಗ್ರಾಮ ಪಂಚಾಯಿತಿ ಮೆಂಬರ್ ಆದರೆ ಸಾಕು ಎರಡು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡುತ್ತಾನೆ, ಇನ್ನು mla, ಮಂತ್ರಿಗಳಾದರೆ ಮುಗಿಯಿತು. ಇಂತಹ ವಿಷಮ ಕಾಲಘಟ್ಟದಲ್ಲಿ ಮೌಲ್ಯಗಳು ಮರೆಯಾದ ಹೊತ್ತಿನಲ್ಲಿ ಎಲ್ಲೋ ಒಬ್ಬರು, ಇಬ್ಬರು ಧ್ರುವತಾರೆಗಳಂತೆ ಹೊಳೆಯುತ್ತಾರೆ ಅಂಥವರಿಂದ ಮೌಲ್ಯಗಳು ಉಳಿಯುತ್ತವೆ. ಜಗತ್ತಿನಲ್ಲಿ ಅತಿ ಬಡವ ಅಧ್ಯಕ್ಷ ಎಂದು ಹೆಸರುವಾಸಿಯಾದರು ಒಂದಿಷ್ಟು ಬೇಜಾರಿಲ್ಲ ಆ ಮನುಷ್ಯನಿಗೆ ನಾನು ಇರುವುದು ಹೀಗೆ ಎಂದು ಹೆಮ್ಮೆಯಿಂದ ಹೇಳುತ್ತಾ ಜನಮನ್ನಣೆ ಪಡೆದುಕೊಂಡು ಅದು ವಿದೇಶಿಗರು ಎಂದರೆ ನನಗೆಲ್ಲಾ ಮೊದಲಿಗೆ ನೆನಪಾಗುವುದು ಅವರು ಶ್ರೀಮಂತಿಕೆ ಹಾಗೂ ಐಷಾರಾಮಿ ಜೀವನ ಆದರೆ ಇದೇಲ್ಲವನ್ನು ಧಿಕ್ಕರಿಸಿ ಕೇವಲ ರಾಜಕೀಯ ಮೌಲ್ಯಗಳಿಂದ ನಾನು ಅಧ್ಯಕ್ಷನಾಗುತ್ತೆನೆಂದು ಹೇಳಿ ಅಧ್ಯಕ್ಷ ಗಿರಿಗೆರಿದ ಉರುಗ್ವೆ ದೇಶದ ಅಧ್ಯಕ್ಷ ಜೋಸೆ ಮುಯಿಕಾ. ಅವರ ಬಗ್ಗೆ ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತು ಎಂದರೆ ಮೊನ್ನೆ ಮೇ 13 ರಂದು ಆ ಬಡ ಅಧ್ಯಕ್ಷ ತನ್ನ ಆದರ್ಶ, ಮೌಲ್ಯಯುತ ಬದುಕಿಗೆ ಅಂತಿಮ ಹಾಡಿದ್ದಾರೆ ಆದರೆ ಇದೆಲ್ಲವೂ ಅಷ್ಟೊಂದು ಸುದ್ದಿಯಾಗಲಿಲ್ಲ.
ಈತ ಜಗತ್ತಿನ ಅತ್ಯಂತ ಬಡ ಅಧ್ಯಕ್ಷನೆಂದು ಹೆಸರಾದವನು. ಆದರೆ ಆತ ತನ್ನನ್ನು ಹಾಗೆ ಭಾವಿಸಿಕೊಂಡಿಲ್ಲ. ರಾಜಕೀಯಕ್ಕೆ ಬಂದ ಕೆಲವೇ ದಿನಗಳಲ್ಲಿ ಕಿರು ಅರಮನೆಗಳನ್ನು ಕಟ್ಟಿಕೊಳ್ಳುವ, ಜನರ ಉದ್ಧಾರದ ಜಪ ಹೇಳಿ ಅಧಿಕಾರಕ್ಕೆ ಬಂದಕೂಡಲೇ ಜನರ ಬದುಕನ್ನು ಅಣಕಿಸುವ ರೀತಿಯಲ್ಲಿ ವರ್ತಿಸುವ ನಾಯಕರೇ ತುಂಬಿರುವ ಕಾಲದಲ್ಲಿ ಈತ ಹುಚ್ಚನಂತೆ ಕಂಡರೆ ಅಚ್ಚರಿಯಿಲ್ಲ. ಉರುಗ್ವೆ ಎಂಬ ದೇಶದ ರಾಜಧಾನಿ ಮಾಂಟೆವಿಡಿಯೋದ ವೈಭವಪೇತ ಅಧ್ಯಕ್ಷರ ಅರಮನೆಯನ್ನು ತ್ಯಜಿಸಿ ರಾಜಧಾನಿಗೆ ಅನತಿ ದೂರದಲ್ಲಿರುವ ಹಳೇ ಫಾರ್ಮ್ ಮನೆಯಲ್ಲಿ ಹೆಂಡತಿ ಮತ್ತು ತನ್ನ ಮೂರುಕಾಲಿನ ನಾಯಿಯ ಸಂಗಡ ಬದುಕುತ್ತಾ ಆ ದೇಶದ ಆಡಳಿತ ನಡೆಸುತ್ತಿರುವ ಧೀರನೀತ. ವಂದಿಮಾಗಧರಿಲ್ಲ. ಮನೆಯನ್ನು ಅಲಂಕರಿಸಲು ಕೋಟಿಗಟ್ಟಲೇ ಖರ್ಚು ಮಾಡಿ ಪಾಲು ತಿನ್ನುವ ಸರ್ಕಾರಿ ಅಧಿಕಾರಿಗಳಿಲ್ಲ. ವಾಸ್ತು ಪುಢಾರಿಗಳ ಸಹವಾಸವಿಲ್ಲ. ಬಡವರ ಬದುಕನ್ನು ಅಣಕಿಸುವ ಲಕ್ಷುರಿಗಳಿಲ್ಲ. ವಯಸ್ಸಾದ ಗಂಡ ಹೆಂಡತಿಯರಿಬ್ಬರೂ ಕ್ರೈಸಾಂತೆಮಂ (ಸೇವಂತಿಗೆ ) ಹೂ ಬೆಳೆದು ಮಾರುತ್ತಾರೆ. ಬಡವರ, ದುಡಿದುಣ್ಣುವವರ ಬದುಕಿಗೆ ಘನತೆ ತರುವ ರೀತಿಯಲ್ಲಿ ಬದುಕುತ್ತಿರುವ ಈತನ ಹೆಸರು ಜೋಸ್ ಮುಯಿಕ. ಉರುಗ್ವೆ ದೇಶದ ಅಧ್ಯಕ್ಷ.
೮೧ ವರ್ಷದ ಅಧ್ಯಕ್ಷ ತನ್ನ ಜಮೀನಿನ ಮೂಲೆಯಲ್ಲಿರುವ ಬಾವಿಯಿಂದ ನೀರು ತರುತ್ತಾನೆ. ಬಯಲಿನಲ್ಲಿ ಕಟ್ಟಿರುವ ತಂತಿಯ ಮೇಲೆ ಬಟ್ಟೆ ಒಣಗಿಹಾಕುತ್ತಾನೆ. ಆರೋಗ್ಯದ ಕಾರಣಕ್ಕೆ ಸಸ್ಯಾಹಾರಕ್ಕೆ ಮಿತಗೊಂಡಿದ್ದಾನೆ. ಅದನ್ನೇ ಶ್ರೇಷ್ಠವೆಂದು ಹೇಳುವುದಿಲ್ಲ. ಯುವಕರು ಸ್ವಲ್ಪ ಭಂಗಿ ಸೇದಿದರೂ ತಪ್ಪಿಲ್ಲವೆನ್ನುತ್ತಾನೆ. ಬಡರಾಷ್ಟ್ರಗಳ ಮುಖ್ಯಸ್ಥರು ಭಯದಿಂದ ಬುಲೆಟ್ ಪ್ರೂಫ್ ಕಾರಿನಲ್ಲಿ ಹತ್ತಾರು ವಾಹನಗಳ ಭದ್ರತೆಯಲ್ಲಿ ನೂರಾರು ಬಾಡಿಗೆ ಬಂಟರ ಪರಾಕುಘೋಷದಲ್ಲಿ ಓಡಾಡುತ್ತಿರುವ ಈ ಕಾಲದಲ್ಲಿ ಜೋಸೆ ೧೨೦೦ ಡಾಲರ್ ಮೌಲ್ಯದ ೧೯೮೭ನೇ ಇಸವಿಯ ಮಾಡೆಲ್ನ ಕಾರಿನಲ್ಲಿ ಇಬ್ಬರು ಪೊಲೀಸರು ಮತ್ತು ಮೂರುಕಾಲಿನ ನಾಯಿ ಜೊತೆ ಕಚೇರಿಗೆ ಬರುತ್ತಾನೆ. ತನಗೆ ನೀಡುವ ಅಧ್ಯಕ್ಷರ ತಿಂಗಳ ಕೂಲಿ ಹನ್ನೆರಡವರೆ ಸಾವಿರ ಡಾಲರ್ನಲ್ಲಿ ಶೇ. ೯೦ರಷ್ಟು ಹಣವನ್ನು ಬಡವರು ಮತ್ತು ಸಣ್ಣ ಉದ್ದಿಮೆದಾರರ ಕಲ್ಯಾಣ ಕಾರ್ಯಕ್ರಮಕ್ಕೆ ದಾನಮಾಡುತ್ತಾನೆ. ಉಳಿಯುವ 1250 ಡಾಲರ್ ಹಣ ಉರುಗ್ವೆ ಪ್ರಜೆಯ ಸರಾಸರಿ ಆದಾಯದಷ್ಟಿರುತ್ತದೆ. ಅದರಲ್ಲೇ ಆತನ ಬದುಕು ಸಾರ್ಥಕ ಕಾಣುತ್ತದೆ. ಅಭಿವೃದ್ಧಿ ಕುರಿತಂತೆ ಅವನದೇ ಆದ ಪರಿಸರ ಮತ್ತು ಜನಪರ ನಿಲುವುಗಳಿವೆ. ಮಾರುಕಟ್ಟೆಯ ಹಸಿವನ್ನು ಹಿಗ್ಗಿಸಿ ಲೋಲುಪತೆಯ ವಸ್ತುಗಳ ಉಪಭೋಗವನ್ನು ವೃದ್ಧಿಸುವ ಆರ್ಥಿಕತೆಯನ್ನು ತಳ್ಳಿಹಾಕುತ್ತಾನೆ. ಶ್ರೀಮಂತ ರಾಷ್ಟ್ರಗಳ ಅಭಿವೃದ್ಧಿ ಮಾಡೆಲ್ ವಿನಾಶದ ದಾರಿಯೆಂದೇ ಅವನ ನಂಬಿಕೆ. ಯಾರಿಂದಲಾದರೂ ಬಂದ ಉಡುಗೊರೆ ಸರ್ಕಾರಕ್ಕೆ ಸೇರುತ್ತದೆ.
೨೦೧೪ರಲ್ಲಿ ಯಾರೋ ಜೋಸೆ ಮುಯಿಕನ ಕಾರಿಗೆ ಒಂದು ಮಿಲಿಯನ್ ಡಾಲರ್ ಕೊಡಲು ಸಿದ್ದರಿದ್ದಾರೆಂದು ಅಲ್ಲಿನ ಪತ್ರಿಕೆ ವರದಿಮಾಡಿತ್ತು. ಆಸ್ತಿಕನಾದ ಜೋಸೆ ತನಗೆ ಅಷ್ಟು ಹಣಕೊಟ್ಟರೆ ಅದನ್ನು ಮನೆಯಿಲ್ಲದವರಿಗೆ ಮನೆಕಟ್ಟಿಕೊಡುತ್ತೇನೆಂದು ಘೋಷಿಸಿದರು.
ತಾವು ಆಯ್ದುಕೊಂಡ ಬದುಕಿನ ಶೈಲಿ ಬಗ್ಗೆ ಮುಯಿಕ ಹೇಳುವ ಮಾತುಗಳಿವು- "ಇದು ನಿಮ್ಮ ಸ್ವಾತಂತ್ರ್ಯದ ಆಯ್ಕೆಯ ವಿಷಯ. ನಿಮ್ಮಲ್ಲಿ ಜಾಸ್ತಿ ವಸ್ತುಗಳು ಇಲ್ಲ ಎಂದರೆ ಅಂಥವುಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ಗುಲಾಮನಂತೆ ಜೀವನಪೂರ್ತಿ ದುಡಿಯುವ ಸಮಸ್ಯೆಯೇ ಇರದು. ಇದರಿಂದ ನಿಮ್ಮ ಬದುಕಿಗೆ ಹೆಚ್ಚು ಸಮಯ ದೊರೆಯುತ್ತದೆ. ನಾನು ಸ್ವಲ್ಪ ತಿಕ್ಕಲನಂತೆ ಕಾಣಬಹುದು. ಆದರೆ ಅದು ನನ್ನ ಆಯ್ಕೆ".
ಜನರ ಬದುಕನ್ನು ಭೌತಿವಾಗಿ, ಭೌದ್ಧಿಕವಾಗಿ, ಉದ್ಧರಿಸುವ ಸರಳವಾದ, ಅಸಲೀ ಮಾರ್ಗಗಳ ತೊರೆದು ಹುಸಿ ಅಭಿವೃದ್ಧಿ, ಧರ್ಮ, ಲಕ್ಷಾಂತರ ಬೆಲೆಬಾಳುವ ಕೋಟು, ವಾಚು, ಕಾರು, ಸಿನಿಮಾ ಎಂದು ಬಡವರ ಬದುಕನ್ನು ಅಣಕಿಸುವ ನಾಯಕರುಗಳಿಗೆ ಜೋಸೆ ಮುಯಿಕನ ಬದುಕು ಪಾಠವಾಗಬಲ್ಲದೆ?