logo

ಕರ್ನಾಟಕ ತುಮಕೂರಿನ 15 ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಭದ್ರತಾ ಕ್ರಮ: ಡಿಸಿ ಶುಭಾ ಕಲ್ಯಾಣ್

ತಾರೀಕು 13/05/2025 ಮಂಗಳವಾರ

ತುಮಕೂರು: “ಜಿಲ್ಲೆಯ ಸುಮಾರು 15 ಪ್ರಮುಖ ಸ್ಥಳಗಳಲ್ಲಿ ಅತಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲಿನ ಭದ್ರತಾ ಆಡಿಟ್​ನ್ನು​ ಕೂಡ ನಡೆಸಲಾಗಿದ್ದು, ಎಲ್ಲೆಡೆ ನಿರಂತರವಾಗಿ ಪರಿಶೀಲನೆ ಕೈಗೊಳ್ಳಲಾಗುತ್ತಿದೆ” ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ತಿಳಿಸಿದರು.

ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಈಗಾಗಲೇ ಸಂಬಂಧಪಟ್ಟ 15 ಸ್ಥಳಗಳಲ್ಲಿ ಅಲ್ಲಿನ ಭದ್ರತೆಗೆ ಸಂಬಂಧಪಟ್ಟಂತೆ ಮಾತುಕತೆ ನಡೆಸಲಾಗಿದೆ. ಅಲ್ಲಿ ಹಾಟ್​ಲೈನ್​ಗಳನ್ನು ಕೂಡ ಸ್ಥಾಪನೆ ಮಾಡಲಾಗಿದ್ದು, ಯಾವುದೇ ರೀತಿಯ ಗೊಂದಲಗಳು ನಿರ್ಮಾಣವಾದರೆ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ಲಭ್ಯವಾಗಲಿದೆ” ಎಂದರು.

ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಮಾತನಾಡಿ, “ಭಾರತ ಪಾಕಿಸ್ತಾನದ ಉದ್ವಿಗ್ನತೆಯ ಇಂತಹ ಸಂದರ್ಭದಲ್ಲಿ ಜಿಲ್ಲಾ ಆಡಳಿತದಿಂದ ಹೊರಡಿಸಲಾಗುವ ಕ್ರಮಗಳನ್ನು ಸೂಚನೆಗಳನ್ನು ಪಾಲನೆ ಮಾಡಬೇಕು. ಇಲ್ಲದಿದ್ದರೆ, ಅಂಥವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ರಾಜ್ಯದ ರಾಜಧಾನಿ ಬೆಂಗಳೂರಿಗೆ ಹೆಬ್ಬಾಗಿಲಿನಂತೆ ಇರುವ ತುಮಕೂರು ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಅತಿ ಹೆಚ್ಚಿನ ಗಮನಹರಿಸಲಾಗಿದೆ” ಎಂದು ತಿಳಿಸಿದರು.

“ಈಗಾಗಲೇ ಹೆದ್ದಾರಿಯಲ್ಲಿ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಪೂರಕವಾಗಿ 50 ಕಡೆ ಚೆಕ್​ಪೋಸ್ಟ್​ಗಳನ್ನು ತೆರೆಯಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಇರುವ ಕೈಗಾರಿಕಾ ವಲಯದಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಕಂಡರೆ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಅಲ್ಲದೆ, ಚೆಕ್​ಪೋಸ್ಟ್ ಮುಟ್ಟುವುದನ್ನು ಮಾಡಬಾರದು” ಎಂದು ಹೇಳಿದರು.

0
789 views