
ಉಗ್ರರನ್ನು ಸಿಕ್ಕ ಸಿಕ್ಕಲ್ಲಿ ಗುಂಡಿಕ್ಕಿ ಕೊಳ್ಳಬೇಕು :ಕೊತನೂರ್ ಸೋಮಶೇಖರ್
ಶಿಡ್ಲಘಟ್ಟ : ಪೆಹಲ್ ಗಾಮ್ ನಲ್ಲಿ ನಡೆದ ಪೈಶಾಚಿಕ ಕೃತ್ಯವನ್ನು ಇಡೀ ಜಗತ್ತು ಜಾತಿ, ಧರ್ಮ, ಭಾಷೆ, ದೇಶಗಳ ಗಡಿ ಮೀರಿ ಎಲ್ಲರೂ ಖಂಡಿಸಬೇಕು ಮತ್ತು ಜಾಗತಿಕವಾಗಿ ಉಗ್ರರನ್ನು ಬೇರು ಸಮೇತ ಕಿತ್ತು ಹಾಕುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಬಿಜೆಪಿ ಕಾರ್ಯಕರ್ತ ಕೊತನೂರ್ ಸೋಮಶೇಖರ್ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿ ಹಿಂದೂಗಳನ್ನು ಹುಡುಕಿ ಹುಡುಕಿ ಗುಂಡಿಕ್ಕಿ ಕೊಂದದ್ದು ಕೇವಲ ಉಗ್ರವಾದವಲ್ಲ. ಬದಲಿಗೆ ಹಿಂದೂಗಳನ್ನೆ ಗುರಿಯಾಗಿ ಸಿಕೊಂಡು ನಡೆದ ಹೇಯ ಪೈಶಾಚಿಕ ಕೃತ್ಯ ಇದಾಗಿದೆ ಎಂದರು.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಯಾರು ಕೂಡ ರಾಜಕೀಯ ಮಾಡದೆ ಕೇವಲ ಉಗ್ರವಾದವನ್ನಷ್ಟೆ ಖಂಡಿಸಬೇಕು, ಉಗ್ರರನ್ನು ನಾಶ ಮಾಡಲು ಕೇಂದ್ರ ಸರಕಾರಕ್ಕೆ ನೈತಿಕ ಬೆಂಬಲ ಕೊಡುವ ಕೆಲಸ ನಮ್ಮೆಲ್ಲರಿಂದಲೂ ದೇಶದ ಹಿತದೃಷ್ಟಿಯಿಂದ ಆಗಬೇಕೆಂದರು.
ಭದ್ರತಾ ವೈಫಲ್ಯ ಇನ್ನಿತರೆ ಹತ್ತಾರು ಕಾರಣಗಳು ಈ ಘಟನೆಗೆ ಕಾರಣವಾಗಿರಬಹುದು. ಆದರೆ ಅವುಗಳ ಬಗ್ಗೆ ಚರ್ಚಿಸಿ ವಾದ ಮಾಡುವ ಸಮಯ ಇದಲ್ಲ. ಒಂದು ವೇಳೆ ನಾವು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಇದೀಗ ಮಾಡಿದರೆ ಅದಕ್ಕೆ ತಕ್ಕ ಬೆಲೆಯನ್ನು ನಾವೆಲ್ಲರೂ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆದ್ದರಿಂದ ಎಲ್ಲವನ್ನೂ ಬಿಟ್ಟು ದೇಶದ ಭದ್ರತೆ, ಐಕ್ಯತೆ, ಭಾರತೀಯರ ಸುರಕ್ಷತೆ ಹಾಗೂ ಭವಿಷ್ಯದ ದೃಷ್ಟಿಯಿಂದ ನಾವು ಚಿಂತಿಸಬೇಕಾದ ಅನಿವಾರ್ಯ ಸ್ಥಿತಿ ಇದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂತಹ ಪರಿಸ್ಥಿತಿಯನ್ನು ದಿಟ್ಟವಾಗಿ ನಿಭಾಯಿಸುವ ಶಕ್ತಿ, ಧೈರ್ಯ, ದೂರದೃಷ್ಟಿಯುಳ್ಳವರಾಗಿದ್ದು ಇಡೀ ದೇಶದಲ್ಲಿ ಉಗ್ರರ ಸಂತತಿ ಇಲ್ಲದಂತೆ ಮಾಡಿ ವಿಶ್ವ ನಾಯಕ, ವಿಶ್ವ ಗುರು ಎಂದು ಸಾಭೀತುಪಡಿಸಬೇಕೆಂದು ಆಗ್ರಹಿಸಿದರು.