logo

ಶಿಕಾರಿಪುರ ದ ಶ್ರೀ ಹುಚ್ಚರಾಯಸ್ವಾಮಿ ದೇವರ ಬ್ರಹ್ಮ ರಥೋತ್ಸವ

ಶಿಕಾರಿಪುರ ಲೈವ್:
ತಾಲ್ಲೂಕಿನ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ಹುಚ್ಚರಾಯಸ್ವಾಮಿ - ಭ್ರಾಂತೇಶ (ಆಂಜನೇಯ) ದೇವರ ಬ್ರಹ್ಮ ರಥೋತ್ಸವವು ಶನಿವಾರ ಸಾವಿರಾರು ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.

ರಾಜ್ಯದಲ್ಲಿ ಪ್ರಖ್ಯಾತಿ ಪಡೆದಿರುವ ಆಂಜನೇಯ ದೇವಸ್ಥಾನ ಇದಾಗಿದೆ. ಹುಚ್ಚರಾಯಸ್ವಾಮಿ ದೇವರ ಬ್ರಹ್ಮ ರಥೋತ್ಸವ ಕಾರ್ಯಕ್ರಮಕ್ಕೆ ಬೆಳಿಗ್ಗೆ 8.20ರಿಂದ8.30ರವರೆಗಿನ ವೃಷಭ ಲಗ್ನದ ಶುಭ ಸಂದರ್ಭದಲ್ಲಿ ಚಾಲನೆ ದೊರೆಯಿತು. ಹುಚ್ಚರಾಯಸ್ವಾಮಿ ದೇವಸ್ಥಾನ ಅವರಣದಿಂದ ಬ್ರಹ್ಮ ರಥೋತ್ಸವಕ್ಕೆ ಚಾಲನೆ ದೊರೆಯಿತು.

ಭಕ್ತರು ಪಲ್ಲಕ್ಕಿಯಲ್ಲಿ ಹೊತ್ತು ತಂದ ಹುಚ್ಚರಾಯಸ್ವಾಮಿ(ಆಂಜನೇಯ) ದೇವರ ಉತ್ಸವ ಮೂರ್ತಿಯನ್ನು ಬ್ರಹ್ಮರಥೋತ್ಸವ ಸುತ್ತಲೂ ಪ್ರದಕ್ಷಿಣೆ ಹಾಕಿದ ನಂತರ ಬ್ರಹ್ಮರಥೋತ್ಸವದಲ್ಲಿ ಪ್ರತಿಷ್ಠಾಪಿಸಿದರು. ನಂತರ ಸಂಪ್ರದಾಯದಂತೆ ಗರುಡ ಪಕ್ಷಿ ದೇವಸ್ಥಾ‌ನ ಆವರಣ ಸಮೀಪ ಪ್ರದಕ್ಷಿಣೆ ಹಾಕಿದ ನಂತರ ನಾದಸ್ವರ(ಮಂಗಳ ವಾದ್ಯ),ಬ್ಯಾಂಡ್‌ಸೆಟ್ ವಾದ್ಯದ ಮೆರವಣಿಗೆಯೊಂದಿಗೆ ಸಾವಿರಾರು ಭಕ್ತರು ತೇರುಬೀದಿಯಲ್ಲಿರುವ ಮಾರಿಕಾಂಬಾ ಗದ್ದುಗೆವರೆಗೂ ಬ್ರಹ್ಮರಥವನ್ನು ಎಳೆದು ತಂದು ನಿಲ್ಲಿಸಿದರು. ಬ್ರಹ್ಮ ರಥ ಎಳೆಯುವ ಸಂದರ್ಭದಲ್ಲಿ ಯುವಕರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು.

ಬ್ರಹ್ಮರಥೋತ್ಸವ ಪ್ರಯುಕ್ತ ಹುಚ್ಚರಾಯಸ್ವಾಮಿ ದೇವರ ಮೂರ್ತಿ,ದೇವಸ್ಥಾನ ಹಾಗೂ ಬ್ರಹ್ಮರಥವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಮುಜರಾಯಿ ಇಲಾಖೆ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಿತ್ತು. ವಿವಿಧ ಸಂಘಟನೆ ಪದಾಧಿಕಾರಿಗಳು ಭಕ್ತರಿಗೆ ಪಾನಕ ವಿತರಿಸಿದರು. ಬ್ರಹ್ಮರಥೋತ್ಸವದಲ್ಲಿ ಹಾವೇರಿ, ದಾವಣಗೆರೆ, ಹುಬ್ಬಳ್ಳಿ,ಧಾರಾವಾಡ,ಬೆಂಗಳೂರು ನಗರ ಸೇರಿದಂತೆ ಜಿಲ್ಲೆಯ ಸಾಗರ,ಸೊರಬ ಸೇರಿದಂತೆ ವಿವಿಧ ತಾಲ್ಲೂಕಿನಿಂದ ಸಾವಿರಾರು ಭಕ್ತರು ಆಗಮಿಸಿ ಹುಚ್ಚರಾಯಸ್ವಾಮಿ ದೇವರ ದರ್ಶನ ಪಡೆದು,ಬ್ರಹ್ಮ ರಥಕ್ಕೆ ಪೂಜೆ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ:

ಬ್ರಹ್ಮರಥೋತ್ಸವ ಪ್ರಯಕ್ತ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಂಸದರಾದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಕುಟುಂಬ ಸಮೇತ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ಬ್ರಹ್ಮರಥೋತ್ಸವ ಎಳೆಯುವ ದೃಶ್ಯವನ್ನು ವೀಕ್ಷಿಸಿದರು.

0
154 views