logo

ಮಹಾಡ್ ಸತ್ಯಾಗ್ರಹ ದಲಿತ ಚಳುವಳಿಯಲ್ಲಿ ಒಂದು ಹೆಗ್ಗುರುತಿನ ಘಟನೆ

ದೇವನಹಳ್ಳಿ: ಮಹಾಡ್ ಸತ್ಯಾಗ್ರಹವನ್ನು ದಲಿತ ಚಳುವಳಿಯ ಅಡಿಪಾಯದ ಘಟನೆ ಎಂದು ಪ್ರಶಂಶಿಸಲಾಗುತ್ತದೆ ಇದು ಜಾತಿ ವ್ಯವಸ್ಥೆ, ಸಮುದಾಯದ ಸಾಮೂಹಿಕ ತಿರಸ್ಕರಿಸುವಿಕೆಯನ್ನು ಮತ್ತು ಮಾನವ ಹಕ್ಕುಗಳ ಪ್ರತಿಪಾದನೆಯನ್ನು ಗುರುತಿಸುತ್ತದೆ ಹಾಗಾಗಿ ಮಹಾಡ್ ಸತ್ಯಾಗ್ರಹ ದಲಿತ ಚಳುವಳಿಯಲ್ಲಿ ಒಂದು ಹೆಗ್ಗುರುತಿನ ಘಟನೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ )ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.

ಪಟ್ಟಣದ ಡಾ.ಬಿ .ಆರ್ .ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳುವಳಿ, ಮಹಾಡ್ ಸತ್ಯಾಗ್ರಹದ ನೆನಪಿನಲ್ಲಿ ನಡೆದ ಶೋಷಿತರ ಸಂಘರ್ಷ ಸಮಾವೇಶದಲ್ಲಿ ಹಿರಿಯ ಹೋರಾಟಗಾರ ಎಚ್. ಕೆ. ವೆಂಕಟೇಶಪ್ಪ ಮತ್ತು ಜನಪರ ಹಾಡುಗಾರ್ತಿ ಕೊಯಿರಾ ಮುನಿನರಸಮ್ಮನವರ ವೇದಿಕೆಯಲ್ಲಿ ಮಾತನಾಡಿದರು.

ಮಾರ್ಚ್ 20, 1927 ರಂದು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಹಾದ್‌ನಲ್ಲಿರುವ ಕಾವ್‌ದಾರ್ ಟ್ಯಾಂಕ್‌ನಿಂದ ಕುಡಿಯುವ ನೀರಿಗಾಗಿ ಮಹಾಡ್ ಸತ್ಯಾಗ್ರಹವನ್ನು ಮುನ್ನಡೆಸಿದರು. ಇದು ದಲಿತ ಚಳವಳಿಯ "ಮೂಲ ಹೋರಾಟ", ನೀರಿಗಾಗಿ ಚಳುವಳಿ - ಮತ್ತು ಜಾತಿ ವಿನಾಶಕ್ಕಾಗಿ ಹೋರಾಟ ಆದ್ದರಿಂದ ಅವರ ಆಶಯಗಳನ್ನು ಪೂರೈಸಲು ಮೂಡನಂಬಿಕೆಗಳನ್ನು ಬದಿಗೊತ್ತಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಲು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮುಂದೆ ಬನ್ನಿ ಎಂದರು.

ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ ಬಾಬಾ ಸಾಹೇಬ್ ಡಾ. ಬಿ. ಆರ್ .ಅಂಬೇಡ್ಕರ್ ಅವರು ಸಾರ್ವಜನಿಕವಾಗಿ ಕೆರೆ ನೀರನ್ನು ಮುಟ್ಟುವ ಮೂಲಕ ಇದು ಎಲ್ಲರಿಗೂ ಸೇರಿದ್ದು ಎನ್ನುವುದು ಸಾರಿ ಹೇಳಿದರು, ಆ ಮೂಲಕ ಮಾನವನ ಹಕ್ಕುಗಳನ್ನು ಎತ್ತಿ ಹಿಡಿದರು, ಭಾರತೀಯ ಸವರ್ಣಿಯರು ಇಂದಿಗೂ ಅಸ್ಪೃಶ್ಯತೆ ಎಂಬ ಅಳಸನ್ನು ಮೆದುಳಿಗೆ ತುಂಬಿಕೊಂಡು ದೇಶಾದ್ಯಂತ ಓಡಾಡುತ್ತಿದ್ದಾರೆ, ಇದಕ್ಕೆ ಈ ದೇಶದಲ್ಲಿ ಸಾವಿರಾರು ವರ್ಷ ಇತಿಹಾಸ ಕೂಡ ಇದೆ ಇದು ಇಂದಿಗೂ ಇಲ್ಲಿನ ದಲಿತರು ಆದಿವಾಸಿಗಳನ್ನು ಅವಮಾನಿಸುತ್ತಲೇ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಎಸ್ಎಸ್ ದೇವನಹಳ್ಳಿ ತಾಲೂಕು ಸಮಿತಿಯ ಪ್ರಧಾನ ಸಂಚಾಲಕರಾದ ಪಿ. ನರಸಪ್ಪ ಮಾತನಾಡಿ ಈ ಹೋರಾಟ ಕೇವಲ ಕುಡಿಯುವ ನೀರಿಗಾಗಿ ಅಲ್ಲ; ನೀರು ಕುಡಿಯುವುದರಿಂದ ನಮಗೆ ಹೆಚ್ಚಿನದನ್ನು ನೀಡುವುದಿಲ್ಲ. ಕುಡಿಯುವ ನೀರಿನ ಹಕ್ಕನ್ನು ಸ್ಥಾಪಿಸಲು ನಾವು ಹೋರಾಡುತ್ತಿದ್ದರೂ, ಇದು ನಮ್ಮ ಮಾನವ ಹಕ್ಕುಗಳ ವಿಷಯ.ಸಮಾಜದ ಪುನರ್ನಿರ್ಮಾಣಕ್ಕಾಗಿ, ಊಳಿಗಮಾನ್ಯ ಅಸಮಾನತೆಯ ಆಧಾರದ ಮೇಲೆ ಹಳೆಯ ಸಮಾಜದ ನಿರ್ಮೂಲನೆಗಾಗಿ ಮತ್ತು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಆಧರಿಸಿದ ಹೊಸ ಸಮಾಜದ ಸ್ಥಾಪನೆಗಾಗಿ ಇದನ್ನು ಹೋರಾಡಲಾಯಿತು ಎಂದು ಹೇಳಿದರು.

ಸಮಾವೇಶದಲ್ಲಿ ಹಿರಿಯ ಹೋರಾಟಗಾರ ಎಚ್. ಕೆ ವೆಂಕಟೇಶಪ್ಪ ಮತ್ತು ಜನಪರ ಹಾಡುಗಾರ್ತಿ ಕೊಯಿರಾ ಮುನಿನರಸಮ್ಮ ಅವರಿಗೆ ಗೌರವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿ ಅವರ ಕುಟುಂಬಸ್ಥರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಅಂಬೇಡ್ಕರ್ ವಾದ )ರಾಜ್ಯ ಸಂಘಟನಾ ಸಂಚಾಲಕರಾದ ರಮೇಶ್ ಡಾಕುಳಗಿ, ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಯೋಜಕರಾದ ಚಂದ್ರಪ್ಪ .ಎಂ. ಮಿಂಡ್ಲುಮನಿ, ಕಲಾಮಂಡಳಿಯ ಮೂರ್ತಿ ಬಿಸ್ನಹಳ್ಳಿ, ರವೀಂದ್ರ ಹೊಸಕೋಟೆ, ವಿಭಾಗೀಯ ಸಂಘಟನಾ ಸಂಚಾಲಕರಾದ ಕೆ .ಆರ್ ಮುನಿಯಪ್ಪ, ಜಿಲ್ಲಾ ಪ್ರಧಾನ ಸಂಚಾಲಕರಾದ ಕೊರಳೂರು ಶ್ರೀನಿವಾಸ್, ಎಂ. ತಿಮ್ಮರಾಯಪ್ಪ ,ರಮೇಶ್ ,ಪಿ. ಎಂ ಚಿನ್ನಸ್ವಾಮಿ, ದಲಿತ ಮುಖಂಡರುಗಳಾದ ಜನಕಮಣಿ,ಕೊಯಿರಾ ನಾಗಾರಾಜ್, ಮುರುಗೇಶ್, ಅಂಬರೀಶ್ , ವೆಂಕಟೇಶ್ ,ಚಂದ್ರಪ್ಪ, ಶಾಮಲಾ, ವಿದ್ಯಾರಾಣಿ ಸೇರಿದಂತೆ ಸಂಘಟನೆಯ ಹಲವಾರು ಪದಾಧಿಕಾರಿಗಳು ಮತ್ತು ಸದಸ್ಯರು ಭಾಗಿಯಾಗಿದ್ದರು.

8
433 views