
ಸರ್ಕಲ್ ಇನ್ಸ್ಪೆಕ್ಟರ್ ತಿಮ್ಮಣ್ಣ.ಎನ್ ಅವರಿಗೆ ಬೀಳ್ಕೊಡುಗೆ ಸಮಾರಂಭ |
ಹೊಸದುರ್ಗ:ಪೊಲೀಸ್ ಎಂದರೆ ಭಯವಲ್ಲ,ಭರವಸೆ,ಡಿ ವೈ ಎಸ್ ಪಿ ಶಿವಕುಮಾರ್ ಅಭಿಮತ.
ಹೊಸದುರ್ಗ: ದೇಶದಲ್ಲಿಯೇ ಕರ್ನಾಟಕ ಪೊಲೀಸ್ ಎಂದರೆ ವಿಶೇಷ ಗೌರವವಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಸಾರ್ವಜನಿಕರಿಗೆ ನ್ಯಾಯ ಒದಗಿಸುವುದು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯವಾಗಿದ್ದು, ದಕ್ಷತೆಯಿಂದ, ಪ್ರಾಮಾಣಿಕವಾಗಿ, ಕಾರ್ಯನಿಷ್ಠರಾಗಿ ಮತ್ತಷ್ಟು ಸೇವೆ ಮಾಡಿದರೆ, ಜನರಿಗೆ ಇಲಾಖೆಯ ಬಗ್ಗೆ ಇನ್ನಷ್ಟು ಒಳ್ಳೆಯ ಭಾವನೆ ಬೆಳೆಯುತ್ತದೆ. ಪೊಲೀಸ್ ಎಂದರೆ ಭಯವಲ್ಲ, ಪ್ರತಿಯೊಬ್ಬರಿಗೂ ಭರವಸೆ ಎಂದು ಹಿರಿಯೂರು ಉಪವಿಭಾಗದ ಡಿವೈಎಸ್ಪಿ ಶಿವಕುಮಾರ್ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ನೂತನ ಪಿ ಐ ರಮೇಶ್ ಗೌಡ ರವರಿಗೆ ಸ್ವಾಗತ ಸಮಾರಂಭ ಹಾಗೂ ವರ್ಗಾವಣೆಗೊಂಡಿರುವ ಪಿ ಐ ಎನ್ ತಿಮ್ಮಣ್ಣನವರಿಗೆ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇನ್ಸ್ಪೆಕ್ಟರ್ ತಿಮ್ಮಣ್ಣ ದಕ್ಷತೆಯಿಂದ, ಪ್ರಾಮಾಣಿಕವಾಗಿ ಕೆಲಸ ಮಾಡಿ, ಜನರ ಮನ್ನಣೆ ಪಡೆದಿದ್ದಾರೆ. ಅದರಂತೆಯೇ, ಹೊಸದಾಗಿ ಠಾಣೆಗೆ ಇನ್ಸ್ಪೆಕ್ಟರ್ ಆಗಿ ಬಂದಿರುವ ರಮೇಶ್ ಅವರು ಕೂಡ ಕೆಲಸ ಮಾಡುವ ನಿರೀಕ್ಷೆಯಿದೆ. ಪ್ರತಿಯೊಬ್ಬರಿಗೂ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಪರಿಸ್ಥಿತಿಗಳನ್ನು ನಿಭಾಯಿಸುವ ಶಕ್ತಿ ಇರುತ್ತದೆ. ಅದರಂತೆಯೇ, ತಿಮ್ಮಣ್ಣ ಯಾವ ವ್ಯಕ್ತಿಯನ್ನು ಯಾವ ರೀತಿಯಲ್ಲಿ ಕಂಟ್ರೋಲ್ ಮಾಡಬೇಕೆಂದು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಅದೇ ರೀತಿ ರಮೇಶ್ ಕೂಡ ಕೆಲಸ ಮಾಡಲು ಪ್ರಯತ್ನ ಮಾಡುತ್ತಾರೆ ಎಂದು ತಿಳಿಸಿದರು.
ತಹಸೀಲ್ದಾರ್ ತಿರುಪತಿ ಪಾಟೀಲ್ ಮಾತನಾಡಿ, ಸರ್ಕಾರಿ ಸೇವೆ ಎಂಬುದು ಪವಿತ್ರವಾದ ಕೆಲಸ. ಇಂತಹ ಕೆಲಸವನ್ನು ಮಾಡಲು ನಮಗೆ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ. ದೇಶದಲ್ಲಿ ಅಣ್ಣ-ತಂಗಿ, ಗಂಡ-ಹೆಂಡತಿ, ಅಣ್ಣ-ತಮ್ಮ ಒಂದೇ ಕಡೆ ಕೆಲಸ ಮಾಡಿರುವುದನ್ನು ನೋಡಿದ್ದೀರಿ. ಆದರೆ, ಮಾವ-ಅಳಿಯ ಒಂದೇ ತಾಲೂಕಿನಲ್ಲಿ ತಹಶೀಲ್ದಾರ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುವುದು ಅಪರೂಪ. ನಾನು ಮತ್ತು ನಮ್ಮ ಮಾವ ಇಬ್ಬರು ಒಂದೇ ಕಡೆ ಕೆಲಸ ಮಾಡಲು ಶಾಸಕರು ಮತ್ತು ನೀವು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ. ಇದನ್ನು ನಾವಾಗಿ ಹುಡುಕಿಕೊಂಡು ಬಂದದ್ದಲ್ಲ, ನಮ್ಮ ಜೀವಿತಾವಧಿಯಲ್ಲಿ ಹೊಸದುರ್ಗವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮಿಬ್ಬರಿಗೂ ಕೂಡ ಬಹಳ ಸಹಕಾರ ನೀಡುತ್ತ ಬಂದಿದ್ದೀರಿ. ನಿಮ್ಮ ಸಹಕಾರ ಹೀಗೆಯೇ ಇರಲಿ. ನಮ್ಮ ಮಾವ ಒಬ್ಬ ಹಿರಿಯ ಅನುಭವಿ ಅಧಿಕಾರಿಯಾಗಿ ವೈಯಕ್ತಿಕವಾಗಿ ಸಾಕಷ್ಟು ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಅವರೊಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಸಂತೋಷ ವ್ಯಕ್ತಪಡಿಸಿದರು.
ಇನ್ಸ್ಪೆಕ್ಟರ್ ರಮೇಶ್ ಮಾತನಾಡಿ, ಹೊಸದುರ್ಗ ಕ್ಷೇತ್ರದ ಬಗ್ಗೆ ನನಗೆ ಸಾಧ್ಯವಾದಷ್ಟು ಮಾಹಿತಿ ತಿಳಿದುಕೊಂಡಿದ್ದೇನೆ. ನಾನು ಕೂಡ ಇಲ್ಲಿಯೇ ಪ್ರೊಫೆಷನರಿ ಪಿಎಸ್ಐ ಆಗಿ ಕೆಲಸ ಮಾಡಿದ್ದೇನೆ. ಸಾಕಷ್ಟು ಜನರ ಪರಿಚಯವಿದೆ. ತಿಮ್ಮಣ್ಣನವರಂತೆ ಎಲ್ಲರ ವಿಶ್ವಾಸ ಪಡೆದು, ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ಈ ವೇಳೆ ಕಾರ್ಯಕ್ರಮ ಕುರಿತು ಯುವ ಉದ್ಯಮಿ ಸದ್ಗುರು ಪ್ರದೀಪ್, ಮುಖಂಡರಾದ ಆಗ್ರೋ ಶಿವಣ್ಣ, ಕಾರೆಹಳ್ಳಿ ಬಸವರಾಜ್, ತುಂಬಿನಕೆರೆ ಬಸವರಾಜ್, ಸೀತಾರಾಮ್, ರವಿಕುಮಾರ್, ಅಲ್ತಾಪ್ ಪಾಷಾ ಮತ್ತು ವೈದ್ಯ ಡಾ.ಸಂಜಯ್ ಮಾತನಾಡಿದರು. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳಾದ ಭೀಮನಗೌಡ ಪಾಟೀಲ್, ಮಹೇಶ್ ಕುಮಾರ್, ಮಹೇಶ್ ಗೌಡ ಮತ್ತು ಮಂಜುನಾಥ್ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಖ್ಯಾತ ಕೀಲು ಮೂಳೆ ವೈದ್ಯ ಡಾ. ಸಂಜಯ್, ಶ್ರೀರಾಂಪುರ ಪಿ ಐ ಮಧುಸೂದನ್, ಪಿ ಎಸ್ ಐ ಭೀಮನಗೌಡ ಪಾಟೀಲ್, ಮಹೇಶ್ ಕುಮಾರ್, ಪಾಲ್ಗೊಂಡಿದ್ದರು. ಇದೆ ವೇಳೆ ಪಾಲ್ಗೊಂಡಿದ್ದ ಪೊಲೀಸ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ರಾಜಕೀಯ ಮುಖಂಡರು ಮತ್ತು ನೂರಾಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಇನ್ಸ್ಪೆಕ್ಟರ್ ತಿಮ್ಮಣ್ಣ ಮತ್ತು ರಮೇಶ್ ರವರನ್ನು ಸನ್ಮಾನಿಸಿ, ಗೌರವಿಸಿದರು.