logo

ಒಬ್ಬ ಸಾಹಿತಿ ತನ್ನುರಿಗೆ, ಸಮಾಜಕ್ಕೆ ಹೇಗೆ ಸೇವೆ ಸಲ್ಲಿಸಬಹುದು ಎಂಬುದಕ್ಕೆ ಮಾದರಿ ಎಸ್. ಎಲ್. ಭೈರಪ್ಪ ನವರು.

ಖ್ಯಾತ ಕಾದಂಬರಿಕಾರರೂ, ಕನ್ನಡಿಗರ ಸಾಕ್ಷಿಪ್ರಜ್ಞೆಯೂ ಹಾಗೂ ಸರಸ್ವತಿ ಸಮ್ಮಾನ ಪ್ರಶಸ್ತಿ ಪುರಸ್ಕೃತರು ಆದ ಡಾ.ಎಸ್.ಎಲ್.ಭೈರಪ್ಪ ಅವರ ಹುಟ್ಟೂರಾದ ಸಂತೇಶಿವರದಲ್ಲಿ ಇಂದು ಒಂದು ಅಪರೂಪದ ಕಾರ್ಯಕ್ರಮ. ಇದು ಎಲ್ಲಾ ಸಾಹಿತಿಗಳಿಗೆ ಮಾದರಿ. ಏಕೆಂದರೆ ಈಗ ಸಾಹಿತಿಗಳು ರಾಜಕೀಯ ವ್ಯಕ್ತಿಗಳಿಂತ ರಾಜಕೀಯ ಮಾಡುತ್ತಿದ್ದಾರೆ, ತಾವು ಅಕಾಡೆಮಿ ಅಧ್ಯಕ್ಷರಾಗಲು, ಪ್ರಶಸ್ತಿ ಗಳನ್ನು ಪಡೆಯಲು ರಾಜಕೀಯ ನಾಯಕರಿಗೆ ಬಕೆಟ್ ಹಿಡಿಯುತ್ತಾರೆ. ಇಂತಹ ಕಾಲಘಟ್ಟದಲ್ಲಿ ಯಾವುದೇ ನಿರೀಕ್ಷೆ, ಅಪೇಕ್ಷೆ ಇಲ್ಲದೆ ಸಮಾಜಮುಖಿ ಕೆಲಸವನ್ನು ಹೇಗೆ ಮಾಡಬೇಕು ಎಂಬುದಕ್ಕೆ ಇವರಿಗಿಂತ ಉತ್ತಮ ಉದಾಹರಣೆ ಸಿಗಲಾರದು ಅದಕ್ಕೆ ನಮ್ಮ ಕರ್ನಾಟಕದ ಹೆಮ್ಮೆ ಶ್ರೀಮಾನ ಎಸ್. ಎಲ್. ಭೈರಪ್ಪನವರಿಗೆ ಕೃತಜ್ಞತೆ ಸಲ್ಲಿಸಬೇಕು. ಹಾಗೂ ಇವರು ಸಮಾಜಕ್ಕೆ ಸದಾ ಸ್ಫೂರ್ತಿಯಾಗಿರುತ್ತಾರೆ ಎಂದರೆ ತಪ್ಪಾಗಲಾರದು.

ಸಂತೇಶಿವರ ಮತ್ತು ಸುತ್ತಮುತ್ತಲ ಗ್ರಾಮಗಳ ಕೆರೆ ತುಂಬಿಸಲು ಕರ್ನಾಟಕ ಸರಕಾರದಿಂದ ಇಪ್ಪತ್ತೈದು ಕೋಟಿ ರುಪಾಯಿ ಅನುದಾನ ಕೊಡಿಸಲು ಶ್ರಮಿಸಿ, ಕೆರೆ ತುಂಬಿಸಲು ಯಶಸ್ವಿಯಾದ ಡಾ.ಭೈರಪ್ಪನವರಿಗೆ ಅವರ ಹುಟ್ಟೂರಿನ ಜನ ಕೃತಜ್ಞತೆ ಸಲ್ಲಿಸಲು ಒಂದು ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ದೊಡ್ಡ ಸಾಧನೆ ಮಾಡಿ ಪಟ್ಟಣ ಸೇರಿದವರು ತಮ್ಮನ್ನು ಬೆಳೆಸಿದ ಹಳ್ಳಿಯನ್ನು ನೆನಪಿಟ್ಟುಕೊಳ್ಳುವವರು ಕಮ್ಮಿ. ಡಾ.ಭೈರಪ್ಪನವರು ಸರಕಾರದ ಮುಂದೆ ಬಿಡಿಎ ನಿವೇಶನ ಕೇಳಲಿಲ್ಲ. ಪ್ರಶಸ್ತಿಗೆ ಅಂಗಲಾಚಲಿಲ್ಲ. ತಾನು ಹುಟ್ಟಿದ ಊರಿನ ಕೆರೆ ತುಂಬಿಸಲು ಹಣ ಕೊಡಿ ಎಂದು ಕೇಳಿದರು.

ಅದಕ್ಕೆ ಅಂದಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದರು. ಅದರ ಫಲವಾಗಿ ಇಂದು ಸಂತೇಶಿವರ ಮತ್ತು ಸುತ್ತಮುತ್ತಲಿನ ಕೆರೆಕಟ್ಟೆಗಳು ತುಂಬಿವೆ. ಅಂತರ್ಜಲ ಮಟ್ಟ ಹೆಚ್ಚಿದೆ.

ಇದು ಡಾ. ಭೈರಪ್ಪನವರ ಕರ್ತೃತ್ವ ಶಕ್ತಿಗೆ ಸಂದ ಫಲ. ಈ ಕೆಲಸವನ್ನು ಮಾಡದಿದ್ದರೆ ತೊಂಬತ್ತೆರಡು ವರ್ಷ ವಯಸ್ಸಿನ ಡಾ.ಭೈರಪ್ಪನವರ ಬಗ್ಗೆ ಯಾರೂ ತಪ್ಪು ಭಾವಿಸುತ್ತಿರಲಿಲ್ಲ. ಆದರೆ ತಮ್ಮ ಊರಿನ ಕೆಲಸ ಮಾಡುವುದು ತಮ್ಮ ಆದ್ಯ ಕರ್ತವ್ಯ ಎಂದು ಅವರು ಭಾವಿಸಿದ್ದರು. ಅವರ ಬಹು ವರ್ಷಗಳ ಕನಸು ನನಸಾಗಿದೆ.

ಈ ಅಪರೂಪದ ಸಾರ್ಥಕ ಸಮಾರಂಭದಲ್ಲಿ ಭಾಗವಹಿಸಿದ ಸಂತಸ ನನ್ನದು!

2
841 views