2025 ಕರ್ನಾಟಕ ಬಜೆಟಿನ್ ಸಂಕ್ಷಿಪ್ತ ಸಾರ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು
ಪತ್ರಿಕಾಗೋಷ್ಠಿಯಲ್ಲಿ ತಾನು
ಮಂಡಿಸಿದ್ದ ಆಯವ್ಯಯವನ್ನು ವಿವರಿಸಿ ದ್ದಾರೆ. ಇದು ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತವಾಗಿ ತಿಳಿಸಿರುವುದು.
1) 2025-26ರ ಆಯವ್ಯಯವು ನಾನು ಮಂಡಿಸಿರುವ 16ನೇ ಆಯವ್ಯಯವಾಗಿದೆ. ನಾನು ಈವರೆಗೂ ಮಂಡಿಸಿರುವ ಪ್ರತಿ ಆಯವ್ಯಯದಲ್ಲಿಯೂ ವಿತ್ತೀಯ ಶಿಸ್ತನ್ನು ಪಾಲಿಸುವುದರ ಜೊತೆಗೆ ಬಡವರ, ಮಹಿಳೆಯರ, ಶೋಷಿತರ, ದುರ್ಬಲ ವರ್ಗದವರ ಏಳಿಗೆಗೆ ಹಲವು ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುತ್ತೇನೆ. ಅಲ್ಲದೆ, ರಾಜ್ಯದ ಆರ್ಥಿಕ ಪ್ರಗತಿಗಾಗಿ ಬಂಡವಾಳ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿರುತ್ತೇನೆ. ನಾನು ಮಂಡಿಸಿರುವ ಈ ೧೬ನೇ ಆಯವ್ಯಯವು ಇದೇ ಧ್ಯೇಯದೊಂದಿಗೆ ರೂಪಿತವಾಗಿದೆ.
2) ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಸ್ವೀಕೃತವಾಗುವ ರಾಜಸ್ವವು ಗಣನೀಯವಾಗಿ ಕಡಿಮೆಯಾಗಿದೆ. ಜಿ.ಎಸ್.ಟಿ ಪರಿಹಾರ ನಿಲ್ಲಿಸಿರುವುದರಿಂದ, 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲು ಕಡಿಮೆಯಾಗಿರುವುದರಿಂದ, ಕೇಂದ್ರ ಸರ್ಕಾರ ವಿಧಿಸುವ ಸೆಸ್ ಮತ್ತು ಸರ್ ಚಾರ್ಜ್ ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡದ ಕಾರಣ ಮತ್ತು ಹಣಕಾಸು ಆಯೋಗವು ರಾಜ್ಯಕ್ಕೆ ಶಿಫಾರಸ್ಸು ಮಾಡಿದ ವಿಶೇಷ ಅನುದಾನವನ್ನು ಬಿಡುಗಡೆ ಮಾಡದ ಕಾರಣ ರಾಜ್ಯಕ್ಕೆ 2,53,287 ಕೋಟಿ ರೂ.ಗಳ ರಾಜಸ್ವ ನಷ್ಟವಾಗಿರುತ್ತದೆ. ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆಗೆ ಎದೆಗುಂದದೆ, ಸ್ವಂತ ಸಂಪನ್ಮೂಲವನ್ನು ಕ್ರೋಢೀಕರಿಸುವ ಮೂಲಕ ರಾಜ್ಯದ ವೆಚ್ಚ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿರುತ್ತದೆ.
3) 2025-26ನೇ ಸಾಲಿನ ಆಯವ್ಯಯ ಗಾತ್ರವು 4,09,549 ಕೋಟಿ ರೂ.ಗಳಾಗಿರುತ್ತದೆ. ಮೊದಲ ಬಾರಿಗೆ ನಮ್ಮ ರಾಜ್ಯದ ಆಯವ್ಯಯ ಗಾತ್ರ ೪ ಲಕ್ಷ ಕೋಟಿ ರೂ. ಗಳ ಗಡಿ ದಾಟಿರುವುದು, ಒಂದು ಹೊಸ ಮೈಲುಗಲ್ಲು. 2024-25ನೇ ಸಾಲಿನ ಆಯವ್ಯಯಕ್ಕೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ಆಯವ್ಯಯ ಗಾತ್ರವು ಶೇ.10.3 ರಷ್ಟು ಹೆಚ್ಚಳವಾಗಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಆಯವ್ಯಯ ಗಾತ್ರವು ಗಣನೀಯವಾಗಿ ಹೆಚ್ಚಳವಾಗಿದೆ. 2022-23ರಲ್ಲಿ 2,65,720 ಕೋಟಿ ರೂ.ಗಳಷ್ಟಿದ್ದ ಆಯವ್ಯಯ ಗಾತ್ರವು 2025-26ರ ಆಯವ್ಯಯದಲ್ಲಿ 4,09,549 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಆಯವ್ಯಯ ಗಾತ್ರವು ಶೇ.54ರಷ್ಟು ಹೆಚ್ಚಳವಾಗಿದೆ.
4) ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ಆರಂಭದಲ್ಲಿ ವಿಪಕ್ಷದವರು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದರು ಹಾಗೂ ಈ ಯೋಜನೆಗಳು ಯಶಸ್ವಿಯಾಗುವುದಿಲ್ಲ ಎಂಬ ನಕಾರಾತ್ಮಕ ಧೋರಣೆ ವ್ಯಕ್ತಪಡಿಸಿದರು. ಆದರೆ ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಅಗತ್ಯ ಅನುದಾನ ಒದಗಿಸುವ ಮೂಲಕ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುತ್ತೇವೆ. 2025-26ನೇ ಆಯವ್ಯಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಒಟ್ಟು 51,034 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ವಿಪಕ್ಷದವರು ಈಗ ತಾವು ಆಡಳಿತದಲ್ಲಿರುವ ರಾಜ್ಯಗಳಲ್ಲಿ ನಮ್ಮ ರಾಜ್ಯದ ಮಾದರಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುತ್ತಾರೆ.
5) ಬಂಡವಾಳ ಯೋಜನೆಗಳಿಗೆ ಗಣನೀಯ ಹಂಚಿಕೆ ಮಾಡುವ ಮೂಲಕ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಹೊಸ ದಿಕ್ಸೂಚಿಯನ್ನು ಒದಗಿಸುವ ಕಾರಣಕ್ಕೆ 2025-26ನೇ ಸಾಲಿನ ಆಯವ್ಯಯವು ಮಹತ್ವಪೂರ್ಣವಾಗಿದೆ. ಬಂಡವಾಳ ಯೋಜನೆಗಳಿಗೆ ನೀಡಿರುವ ಒಟ್ಟು ಅನುದಾನವು (Gross) 2024-25ರಲ್ಲಿ ಅಂದಾಜಿಸಿದ್ದ 56,492 ಕೋಟಿ ರೂ.ಗಳಿಂದ
2025-26ನೇ ಸಾಲಿನಲ್ಲಿ 83,200 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 47.3 ರಷ್ಟು ಹೆಚ್ಚಳವನ್ನು ಕಂಡಿದೆ. ಬಂಡವಾಳ ವೆಚ್ಚದ ಈ ಹೆಚ್ಚಳವು ಐತಿಹಾಸಿಕ ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ. ಇದು ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನದ (GSDP) ಶೇ. 2.32 ರಷ್ಟಿದೆ. ಕಳೆದ ವರ್ಷ ಇದು ಶೇ. 1.99 ರಷ್ಟಿತ್ತು. GSDP ಹೆಚ್ಚಳಕ್ಕೆ ಅನುಗುಣವಾಗಿ ರಾಜ್ಯದ ಬಂಡವಾಳವನ್ನು ಸಹ ಹೆಚ್ಚಿಸಲಾಗಿದೆ. ಕರ್ನಾಟಕವನ್ನು ದೇಶದ ನಂ. 1 ಆರ್ಥಿಕತೆಯನ್ನಾಗಿ ಮಾಡುವತ್ತ ನಾವು ದಿಟ್ಟ ಹೆಜ್ಜೆಯಿಟ್ಟಿದ್ದೇವೆ. 2025-26ನೇ ಸಾಲಿನಲ್ಲಿ ಪ್ರಮುಖವಾಗಿ ನೀರಾವರಿ, ರಸ್ತೆ ಅಭಿವೃದ್ಧಿ, ಮೂಲಭೂತ ಸೌಕರ್ಯ ಮತ್ತು ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
6) ಕೇಂದ್ರ ಸರ್ಕಾರದ ಬಂಡವಾಳ ವೆಚ್ಚವು 2024-25ನೇ ಸಾಲಿನ ಆಯವ್ಯಯದಲ್ಲಿನ ಅಂದಾಜು 11.11 ಲಕ್ಷ ಕೋಟಿ ರೂ.ಗಳಿಂದ 2025-26ನೇ ಸಾಲಿನಲ್ಲಿ 11.21 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಳವಾಗಿರುತ್ತದೆ. ಕಳೆದ ಸಾಲಿಗೆ ಹೋಲಿಸಿದರೆ 9,979 ಕೋಟಿ ರೂ.ಗಳು ಅಂದರೆ ಕೇವಲ ಶೇ. 0.9ರಷ್ಟು ಮಾತ್ರ ಹೆಚ್ಚಳವಾಗಿರುತ್ತದೆ. ಅಲ್ಲದೆ, ರಾಜ್ಯದ ಹಲವಾರು ಮೂಲಸೌಕರ್ಯ ಯೋಜನೆಗಳಿಗೆ ಕೇಂದ್ರ ಸರ್ಕಾರವು ಸಮರ್ಪಕವಾಗಿ ಹಣ ಹಂಚಿಕೆಯನ್ನು ಮಾಡಲು ವಿಫಲವಾಗಿದೆ.
7) ರಾಜ್ಯ ರಾಜಧಾನಿಯ ಮೂಲಸೌಕರ್ಯ ಅಗತ್ಯಗಳನ್ನು ಪೂರೈಸಲು, ಮುಂದಿನ ಮೂರು ವರ್ಷಗಳಲ್ಲಿ ರೂ. 54,000 ಕೋಟಿ ಹೂಡಿಕೆಯೊಂದಿಗೆ 120 ಕಿ.ಮೀ. ಫ್ಲೈಓವರ್ ಮತ್ತು ಗ್ರೇಡ್ ಸೆಪರೇಟರ್, ಕಾಲುವೆಗಳ ಬಫರ್ ವಲಯಗಳ ಉದ್ದಕ್ಕೂ 320 ಕಿ.ಮೀ. ಹೊಸ ರಸ್ತೆಗಳು, ಹೆಚ್ಚು ವಾಹನ ಸಾಮರ್ಥ್ಯವಿರುವ ರಸ್ತೆಗಳ ಸುಧಾರಣೆ ಮತ್ತು ಡಬಲ್ ಡೆಕ್ಕರ್ ಫ್ಲೈಓವರ್‌ನಂತಹ ಯೋಜನೆಗಳನ್ನು ಕೈಗೊಳ್ಳಲ್ಲಿದ್ದೇವೆ. ಇದಲ್ಲದೆ, ಬೆಂಗಳೂರಿಗೆ 27,000 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ Peripheral Ring Road ಮತ್ತು ವಾಹನ ದಟ್ಟಣೆಯನ್ನು ಕಡಿಮೆ ಮಾಡಲು 40,000 ಕೋಟಿ ರೂ.ಗಳ ವೆಚ್ಚದಲ್ಲಿ ಭೂ ಸುರಂಗ ರಸ್ತೆಯನ್ನು ನಿರ್ಮಿಸಲಾಗುವುದು. 2025-26ನೇ ಸಾಲಿನಲ್ಲಿ, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ಒದಗಿಸಲಾಗುವ ಅನುದಾನವನ್ನು
ರೂ. 3,000 ಕೋಟಿಗಳಿಂದ ರೂ. 7,000 ಕೋಟಿಗಳಿಗೆ ಹೆಚ್ಚಿಸಲಾಗಿದೆ.
8) ಬೆಂಗಳೂರು ಹೊರತು ಪಡಿಸಿ, ಇತರೆ ನಗರಗಳಗಲ್ಲೂ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು, 1,000 ಕೋಟಿ ರೂ. ವೆಚ್ಚದ ಸ್ಥಳೀಯ ಆರ್ಥಿಕ ಆಕ್ಸಿಲರೇಟರ್ ಕಾರ್ಯಕ್ರಮ -LEAP ಪ್ರಾರಂಭಿಸಲಾಗುವುದು. 2025-26ರಲ್ಲಿ ಈ ಯೋಜನೆಗೆ 200 ಕೋಟಿ ರೂ. ಅನುದಾನ ಒದಗಿಸಲಾಗುವುದು.
9) ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ರಾಜಸ್ವ ನಷ್ಟವಾಗಿದ್ದರೂ ಸಹ ನಾನು ಮಂಡಿಸಿರುವ ಈ ಆಯವ್ಯಯದಲ್ಲಿ ರಾಜಸ್ವ ಕೊರತೆಯನ್ನು 2024-25ರಲ್ಲಿ ಅಂದಾಜಿಸಿದ್ದ 27,354 ಕೋಟಿ ರೂ.ಗಳಿಗೆ (ಜಿ.ಎಸ್.ಡಿ.ಪಿ ಯ ಶೇ.0.96) ಎದುರಾಗಿ 2025-26ನೇ ಸಾಲಿನಲ್ಲಿ 19,262 ಕೋಟಿ ರೂ.ಗಳಿಗೆ (ಜಿ.ಎಸ್.ಡಿ.ಪಿ ಯ ಶೇ.0.63) ಕಡಿಮೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಅಗತ್ಯ ಅನುದಾನ ಒದಗಿಸುವುದರೊಂದಿಗೆ ಹಾಗು ಆಶಾ, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ತಯಾರಕರು, ಅತಿಥಿ ಶಿಕ್ಷಕರು ಹಾಗೂ ಪದವಿ ಪೂರ್ವ ಉಪನ್ಯಾಸಕರ ಗೌರವಧನ ಮತ್ತು ಪತ್ರಕರ್ತರು, ಕಲಾವಿದರು, ಕುಸ್ತಿಪಟುಗಳ ಮಾಸಾಶನ ಹೆಚ್ಚಿಸಿ ಇತರೆ ಕಲ್ಯಾಣ ಕಾರ್ಯಕ್ರಮಗಳಿಗೂ ಅಗತ್ಯ ಅನುದಾನ ಒದಗಿಸಲಾಗಿದೆ. ಅಂತೆಯೇ ಹಿಂದೂ, ಜೈನ್ ಮತ್ತು ಸಿಖ್ ಧರ್ಮದ ಅರ್ಚಕರು, ಪೇಶ್ ಇಮಾಮ್, ಮೋಜನ್‌ಗಳ ಗೌರವಧನ ಹೆಚ್ಚಿಸಲು ಸಹ ಈ ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ. ಈ ಎಲ್ಲಾ ವೆಚ್ಚ ನಿರ್ವಹಣೆ ಮಾಡುವುದರ ಜೊತೆಗೆ ಈ ಸಾಲಿನಲ್ಲಿ ರಾಜಸ್ವ ಕೊರತೆಯನ್ನು ಕಡಿಮೆ ಮಾಡಿರುವುದು ಹೆಮ್ಮೆಯ ಸಂಗತಿ. ಅಲ್ಲದೆ, ಮುಂದಿನ ವರ್ಷಗಳಲ್ಲಿ ನಮ್ಮ ಸರ್ಕಾರವು ರಾಜಸ್ವ ಹೆಚ್ಚುವರಿಯನ್ನು ಸಾಧಿಸಲಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.
10) ಆರ್ಥಿಕ ಬೆಳವಣಿಗೆಯ ಹಿತದೃಷ್ಟಿಯಿಂದ ಬಂಡವಾಳ ಯೋಜನೆಗಳಿಗೆ ಹೆಚ್ಚಿನ ಅನುದಾನ ಒದಗಿಸಿದರೂ ಸಹ ನಮ್ಮ ಸರ್ಕಾರವು ವಿತ್ತೀಯ ಶಿಸ್ತನ್ನು ಉಲಂಘಿಸಿರುವುದಿಲ್ಲ. 2025-26ನೇ ಸಾಲಿನಲ್ಲಿ ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿಯ ಶೇ.2.95ರಷ್ಟು ಅಂದಾಜಿಸಲಾಗಿರುತ್ತದೆ. ವಿತ್ತೀಯ ಕೊರತೆ ಹಾಗು ಒಟ್ಟು ಹೊಣೆಗಾರಿಕೆಯನ್ನು ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದಲ್ಲಿ ಸೂಚಿಸಿರುವ ಮಿತಿಯೊಳಗೆ ಪಾಲನೆ ಮಾಡಲಾಗಿರುತ್ತದೆ.
11) 2025-26ನೇ ಸಾಲಿನ ಆಯವ್ಯಯ ಗಾತ್ರವು 4,09,549 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. 2024-25ನೇ ಸಾಲಿನ ಆಯವ್ಯಯ ಗಾತ್ರವು 3,71,383 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿತ್ತು. 2024-25ನೇ ಸಾಲಿಗೆ ಹೋಲಿಸಿದರೆ 2025-26ನೇ ಸಾಲಿನ ಆಯವ್ಯಯ ಗಾತ್ರವು ಶೇ.10.3ರಷ್ಟು ಬೆಳವಣಿಗೆಯೊಂದಿಗೆ 38,166 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.
12) ಒಟ್ಟು ವೆಚ್ಚದಲ್ಲಿ 3,11,739 ಕೋಟಿ ರೂ.ಗಳ ರಾಜಸ್ವ ವೆಚ್ಚವಾಗಿರುತ್ತದೆ. 2024-25ಕ್ಕೆ ಹೊಲಿಸಿದರೆ ಶೇ.7.3 ರಷ್ಟು ಹೆಚ್ಚಳವಾಗಿದೆ. ಬಂಡವಾಳ ವೆಚ್ಚ (Gross) ಕಳೆದ ಸಾಲಿಗೆ ಹೋಲಿಸಿದರೆ ಶೇ.47.3 ರಷ್ಟು ಹೆಚ್ಚಳವಾಗಿದೆ.
24-25 ರ ಆಯವ್ಯಯಕ್ಕೆ ಹೋಲಿಸಿದರೆ ಹೆಚ್ಚಳ
ರಾಜಸ್ವ ವೆಚ್ಚವು ₹21,207 ಕೋಟಿ (7.3%),
ಬಂಡವಾಳ ವೆಚ್ಚ (Gross)ವು ₹26,707 ಕೋಟಿ (47.3%),
ಸಾರ್ವಜನಿಕ ಋಣ ₹1,500 ಕೋಟಿ (6.0%) ಹೆಚ್ಚಾಗಿದೆ.
13) 2025-26ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ರಾಜಸ್ವ ಕೊರತೆಯು 19,262 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. ವಿತ್ತೀಯ ಕೊರತೆಯು 90,428 ಕೋಟಿ ರೂ.ಗಳಾಗಿದ್ದು, ಜಿ.ಎಸ್.ಡಿ.ಪಿಯ ಶೇಕಡ 2.95ರಷ್ಟಿದೆ. 2025-26ರ ಅಂತ್ಯಕ್ಕೆ ರಾಜ್ಯದ ಒಟ್ಟು ಹೊಣೆಗಾರಿಕೆಯು 7,64,655 ಕೋಟಿ ರೂ.ಗಳು ತಲುಪುವ ನಿರೀಕ್ಷೆಯಿದ್ದು, ಜಿ.ಎಸ್.ಡಿ.ಪಿಯ ಶೇಕಡ 24.91ರಷ್ಟಿದೆ. ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ, 2002 ಸೂಚಿಸಿರುವ ಮಾನದಂಡದಂತೆ ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿಯ ಶೇಕಡ 3 ಹಾಗು ಒಟ್ಟು ಹೊಣೆಗಾರಿಕೆಯನ್ನು ಜಿ.ಎಸ್.ಡಿ.ಪಿಯ ಶೇಕಡ 25ರ ಮಿತಿಯೊಳಗೆ ಪಾಲನೆ ಮಾಡಲಾಗಿರುತ್ತದೆ.
14) 2025-26ನೇ ಸಾಲಿನಲ್ಲಿ ರಾಜ್ಯವು ಪಡೆಯುವ ಒಟ್ಟು ಸಾಲವು 1,16,000 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
15) 2025-26ನೇ ಸಾಲಿನಲ್ಲಿ ಸಾಲ ಸೇರಿದಂತೆ ಒಟ್ಟು ಸ್ವೀಕೃತಿಗಳು 4,08,647 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಇದು ಕಳೆದ ಸಾಲಿಗೆ ಹೊಲಿಸಿದರೆ 39,973 ಕೋಟಿ ರೂ.ಗಳಷ್ಟು (ಶೇ.10.8) ಹೆಚ್ಚಳವಾಗಿದೆ. 2025-26ರ ಆಯವ್ಯಯದಲ್ಲಿ ಒಟ್ಟು ರಾಜಸ್ವ ಸ್ವೀಕೃತಿಯು 2,92,477 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜಸ್ವ ಸ್ವೀಕೃತಿಯಲ್ಲಿ 29,299 ಕೋಟಿ ರೂ.ಗಳಷ್ಟು (ಶೇ.11.1) ಹೆಚ್ಚಳವಾಗಿದೆ.
16) ರಾಜ್ಯದ ರಾಜಸ್ವ ಸ್ವೀಕೃತಿಯು ತೆರಿಗೆ ರಾಜಸ್ವ, ತೆರಿಗೆಯೇತರ ಸ್ವೀಕೃತಿಗಳು, ಕೇಂದ್ರ ಸರ್ಕಾರದ ಸಹಾಯಾನುದಾನ ಮತ್ತು ತೆರಿಗೆ ಪಾಲನ್ನು ಒಳಗೊಂಡಿದೆ. ಸ್ವಂತ ತೆರಿಗೆ ರಾಜಸ್ವದ ಸ್ವೀಕೃತಿಗಳನ್ನು 2,08,100 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. 2024-25ನೇ ಸಾಲಿಗೆ ಹೊಲಿಸಿದರೆ ಸ್ವಂತ ತೆರಿಗೆ ರಾಜಸ್ವವು 18,207 ಕೋಟಿ ರೂ.ಗಳಷ್ಟು (ಶೇ.9.6) ಹೆಚ್ಚಳವಾಗಿದೆ. ತೆರಿಗೆಯೇತರ ಸ್ವೀಕೃತಿಗಳಿಂದ 16,500 ಕೋಟಿ ರೂ.ಗಳು ಸಂಗ್ರಹವಾಗುವ ನಿರೀಕ್ಷೆಯಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.22.2 ರಷ್ಟು ಹೆಚ್ಚಳವಾಗಿದೆ. 2025-26ರಲ್ಲಿ ಕೇಂದ್ರ ಸರ್ಕಾರದ ತೆರಿಗೆಯ ಪಾಲು 51,877 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿರುತ್ತದೆ.
17) ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಮತ್ತು ಮೋಟಾರು ವಾಹನ ತೆರಿಗೆಗಳು ರಾಜ್ಯದ ಪ್ರಮುಖ ಸ್ವಂತ ತೆರಿಗೆಗಳಾಗಿವೆ. ಇತರೆ ತೆರಿಗೆಗಳಿಗೆ ಹೋಲಿಸಿದರೆ ವಾಣಿಜ್ಯ ತೆರಿಗೆಯಿಂದ ಅತಿ ಹೆಚ್ಚು ತೆರಿಗೆ ಸಂಗ್ರಹಣೆಯಾಗುತ್ತದೆ. 2025-26ರ ಆಯವ್ಯಯ ಅಂದಾಜಿನಲ್ಲಿ ಪ್ರಮುಖ ತೆರಿಗೆಗಳ ಅಂದಾಜು ಕೆಳಕಡಂತಿದೆ.
24-25 ಆಯವ್ಯಯಕ್ಕೆ ಹೋಲಿಸಿದರೆ ಹೆಚ್ಚಳ
ವಾಣಿಜ್ಯ ತೆರಿಗೆಯು ₹10,000 ಕೋಟಿ (9.1%),
ಅಬಕಾರಿ ತೆರಿಗೆ ₹1,475 ಕೋಟಿ (3.8%),
ನೋಂದಣಿ ಮತ್ತು ಮದ್ರಾಂಕ ₹2,000 ಕೋಟಿ (7.7%) ಹಾಗೂ ಮೋಟಾರು ವಾಹನ ತೆರಿಗೆ ₹2,000 ಕೋಟಿ (15.4%) ಹೆಚ್ಚಾಗಿದೆ.
18) ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರವು ರಾಜಧನದ ಜೊತೆಗೆ ಪ್ರಮುಖ ಖನಿಜಗಳ ಮೇಲೆ ತೆರಿಗೆ ವಿಧಿಸಬಹುದಾಗಿದೆ. ಅಲ್ಲದೆ, ವಿಧನಾಮಂಡಲದಲ್ಲಿ ಈ ಕುರಿತ ಮಸೂದೆಯನ್ನು ಅಂಗೀಕರಿಸಲಾಗಿದೆ. ಈ ಹಿನ್ನಲೆಯಲ್ಲಿ 2025-26ನೇ ಸಾಲಿಗೆ ಖನಿಜಗಳ ಮೇಲೆ ವಿಧಿಸುವ ತೆರಿಗೆಯಿಂದ 3,000 ಕೋಟಿ ರೂ.ಗಳ ತೆರಿಗೆ ರಾಜಸ್ವ ಸ್ವೀಕೃತಿಯನ್ನು ಅಂದಾಜಿಸಲಾಗಿದೆ.
19) 2025-26 ರ ಆಯವ್ಯಯ ಅಂದಾಜಿನಲ್ಲಿ ಐದು ಗ್ಯಾರಂಟಿ ಯೋಜನೆಗಳಿಗೆ 51,034 ಕೋಟಿ ರೂ.ಗಳ ಅನುದಾನವನ್ನು ಹಂಚಿಕೆ ಮಾಡಲಾಗಿದೆ.
ಗ್ಯಾರಂಟಿ ಯೋಜನೆಗಳು
ಗೃಹ ಜ್ಯೋತಿ ₹10,100 ಕೋಟಿ,
ಅನ್ನ ಭಾಗ್ಯ ₹6,426 ಕೋಟಿ,
ಶಕ್ತಿ ₹5,300 ಕೋಟಿ,
ಯುವನಿಧಿ ₹600 ಕೋಟಿ,
ಗೃಹ ಲಕ್ಷ್ಮಿ ₹28,608 ಕೋಟಿ ಒಟ್ಟು ₹51,034 ಕೋಟಿ ಒದಗಿಸಲಾಗುವುದು.
20) 2025-26 ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಮೂಲ ಸೌರ್ಕಯಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲು 5,000 ಕೋಟಿ ರೂ.ಗಳ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
1.4) ಅನುಸೂಚಿತ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ (SCSP/TSP) ಗೆ ಹಂಚಿಕೆ
21) 2024-25 ರಲ್ಲಿ 39,121 ಕೋಟಿ ರೂ.ಗಳನ್ನು SCSP/TSP ಗೆ ಹಂಚಿಕೆ ಮಾಡಲಾಗಿತ್ತು. 2025-26 ರ ಆಯವ್ಯಯದಲ್ಲಿ SCSP/TSP ಗೆ 42,018 ಕೋಟಿ ರೂ. ಗಳ ಅನುದಾನ ಒದಗಿಸಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 2025-26 ರಲ್ಲಿ SCSP/TSP ಹಂಚಿಕೆಯು 2,897 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.
22) 2025-26 ರಲ್ಲಿ ಮಹಿಳಾ ಉದ್ದೇಶಿತ ಆಯವ್ಯಯ ಗಾತ್ರವು 94,084 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. 2024-25 ರಲ್ಲಿ ಮಹಿಳಾ ಉದ್ದೇಶಿತ ಆಯವ್ಯಯ ಗಾತ್ರವು 86,372 ಕೋಟಿ ರೂ.ಗಳನ್ನು ಅಂದಾಜಿಸಲಾಗಿತ್ತು. 2024-25ರ ಆಯವ್ಯಯಕ್ಕೆ ಹೋಲಿಸಿದರೆ 2025-26ರಲ್ಲಿ ಮಹಿಳಾ ಉದ್ದೇಶಿತ ಆಯವ್ಯಯ ಗಾತ್ರವು 7,711 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.
23) ಸದೃಢ ಆರ್ಥಿಕತೆ ಮತ್ತು ಸಮಾಜವನ್ನು ನಿರ್ಮಿಸುವಲ್ಲಿ ಮಕ್ಕಳ ಪ್ರಾಮುಖ್ಯತೆಯನ್ನು ಗುರುತಿಸಿ, 2025-26 ರಲ್ಲಿ ಮಕ್ಕಳ ಉದ್ದೇಶಿತ ಆಯವ್ಯಯಕ್ಕೆ 62,033 ಕೋಟಿ ರೂ.ಗಳನ್ನು ನೀಡಲಾಗಿದೆ. 2024-25 ರಲ್ಲಿ ಮಕ್ಕಳ ಉದ್ದೇಶಿತ ಆಯವ್ಯಯಕ್ಕೆ 55,933 ಕೋಟಿ ರೂ.ಗಳನ್ನು ಅಂದಾಜಿಸಲಾಗಿತ್ತು. 2024-25ರ ಆಯವ್ಯಯಕ್ಕೆ ಹೋಲಿಸಿದರೆ 2025-26ರಲ್ಲಿ ಮಕ್ಕಳ ಉದ್ದೇಶಿತ ಆಯವ್ಯಯ ಗಾತ್ರವು 6,100 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.
2025-26ರ ಆಯವ್ಯಯದ ಪ್ರಮುಖ ಘೋಷಣೆಗಳು
• ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 428 ಕೋಟಿ ರೂ. ವೆಚ್ಚದಲ್ಲಿ 50 ಸಾವಿರ ರೈತರಿಗೆ ಸಹಾಯಧನ ಸೌಲಭ್ಯ.
• ಕೃಷಿ ಭಾಗ್ಯ ಯೋಜನೆಯಡಿ 12 ಸಾವಿರ ಕೃಷಿ ಹೊಂಡ ನಿರ್ಮಾಣ
• ರಾಜ್ಯದ GI ಟ್ಯಾಗ್ ಹೊಂದಿದ ಹಾಗೂ ದೇಸಿ ತೋಟಗಾರಿಕಾ ಬೆಳೆಗಳನ್ನು ಸಂರಕ್ಷಿಸಲು ಬೀಜ ಬ್ಯಾಂಕ್ ಸ್ಥಾಪನೆ.
• ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿಯಡಿ ೫೨,೦೦೦ ಬೆಳೆಗಾರರಿಗೆ ೪೨೬ ಕೋಟಿ ಸಹಾಯಧನ ಒದಗಿಸಲು ಕ್ರಮ
• 37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲ ವಿತರಣೆ ಗುರಿ.
• ಎತ್ತಿನಹೊಳೆ ಯೋಜನೆ ಅಡಿ ಎಲ್ಲಾ ಎಂಟು ವಿಯರ್‌ಗಳಲ್ಲಿ ಲಭ್ಯವಾಗುವ ನೀರನ್ನು ಕಾಲುವೆಯ ಸರಪಳಿ:241 ಕಿ.ಮೀ ವರೆಗೆ ಹರಿಸಲು ಕ್ರಮ.
• ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರದಿಂದಲೇ ಅಗತ್ಯ ಅನುದಾನ; 2,611 ಕೋಟಿ ರೂ. ಮೊತ್ತದ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿಯಡಿ 30 ಕೆರೆ ತುಂಬಿಸಿ 1.77 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯ ಸೃಜನೆ.
• ಎತ್ತಿನಹೊಳೆ ಯೋಜನೆಯಡಿ ಮಧುಗಿರಿ ತಾಲ್ಲೂಕಿನ 45 ಹಾಗೂ ಕೊರಟಗೆರೆ ತಾಲ್ಲೂಕಿನ 62 ಕೆರೆ ತುಂಬಿಸುವ ಯೋಜನೆ 553 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನ
• 2025-26 ರಲ್ಲಿ 2 ಸಾವಿರ ಕೋಟಿ ರೂ. ಮೊತ್ತದ ಹೊಸ ಕಾಮಗಾರಿಗಳ ಪ್ರಾರಂಭ.
• ಎಡಿಬಿ ನೆರವಿನಲ್ಲಿ 2,500 ಕೋಟಿ ರೂ. ವೆಚ್ಚದಲ್ಲಿ 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭಿಸಲು ಕ್ರಮ.
• ಪ್ರಾಥಮಿಕ ಹಂತದಿಂದ ಪಿಯು ಹಂತದವರೆಗಿನ ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ನೀಡುತ್ತಿರುವ ಮಾಸಿಕ ಗೌರವಧನ ತಲಾ 2 ಸಾವಿರ ರೂ. ಹೆಚ್ಚಳ.
• ಬಿಸಿಯೂಟ ತಯಾರಿಕೆ ಸಿಬ್ಬಂದಿ ಗೌರವಧನ 1ಸಾವಿರ ರೂ. ಹೆಚ್ಚಳ.
• ಪ್ರಥಮ ದರ್ಜೆ ಕಾಲೇಜುಗಳ ಬಲವರ್ಧನೆ, ಶಿಕ್ಷಣ ಸಂಸ್ಥೆಗಳಲ್ಲಿ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆಗೆ ವಿಶ್ವಬ್ಯಾಂಕ್ ನೆರವಿನ 2500 ಕೋಟಿ ರೂ. ವೆಚ್ಚದ ಯೋಜನೆ ಜಾರಿ.
• ನರ ವೈಜ್ಞಾನಿಕ ಖಾಯಿಲೆಗಳಿಗೆ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (KaBHI) ಯೋಜನೆ ಈ ವರ್ಷ ಎಲ್ಲಾ ಹಂತದ ಆರೋಗ್ಯ ಕೇಂದ್ರಗಳಿಗೆ ವಿಸ್ತರಣೆ; 20 ಕೋಟಿ ರೂ. ಅನುದಾನ.
• ಬೆಂಗಳೂರು ಉತ್ತರ ತಾಲ್ಲೂಕಿನ ವ್ಯಾಪ್ತಿಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ನಿರ್ಮಾಣ;
• ಕಲ್ಯಾಣ ಕರ್ನಾಟಕ ಸಂಪೂರ್ಣ ಆರೋಗ್ಯ ಅಭಿವೃದ್ಧಿ ಯೋಜನೆಯಡಿ ಒಟ್ಟು 873 ಕೋಟಿ ರೂ. ವೆಚ್ಚದಲ್ಲಿ ಯೋಜನೆಗಳ ಜಾರಿ.
• 100 ಕೋಟಿ ರೂ. ವೆಚ್ಚದಲ್ಲಿ ಆರು ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನೀಡುವ ʻಗೃಹ ಆರೋಗ್ಯʼ ಯೋಜನೆ ರಾಜ್ಯಾದ್ಯಂತ ವಿಸ್ತರಣೆ.
• ಆಶಾ ಕಾರ್ಯಕರ್ತೆಯರ ತಂಡಾಧಾರಿತ ಗೌರವಧನ 1 ಸಾವಿರ ರೂ. ಹೆಚ್ಚಳ.
• ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು 297 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲು ಕ್ರಮ.
• ಮೈಸೂರು ಮತ್ತು ಕಲಬುರಗಿ ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಯಲ್ಲಿ
100 ಕೋಟಿ ರೂ. ವೆಚ್ಚದಲ್ಲಿ ಪ್ರಾದೇಶಿಕ ಎಂಡೋಕ್ರೈನಾಲಜಿ ಕೇಂದ್ರ ಪ್ರಾರಂಭ.
• ತಲಾ 100 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಮತ್ತು ಕಲಬುರಗಿಯ ವೈದ್ಯಕೀಯ ಕಾಲೇಜುಗಳಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಗಳ ಸ್ಥಾಪನೆ.
• ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀನದಲ್ಲಿ 100 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ.
• ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 1 ಸಾವಿರ ರೂ. ಹಾಗೂ ಸಹಾಯಕಿಯರ ಗೌರವಧನ 750 ರೂ. ಹೆಚ್ಚಳ.
• ಸಕ್ಷಮ ಅಂಗನವಾಡಿ ಯೋಜನೆಯಡಿ 17,454 ಅಂಗನವಾಡಿ ಕೇಂದ್ರಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲು 175 ಕೋಟಿ ರೂ. ನೆರವು.
• ಪ್ರಗತಿ ಕಾಲೋನಿ ಯೋಜನೆಯಡಿ ಕಾಮಗಾರಿಗಳನ್ನು ಪೂರ್ಣಗೊಳಿಸಲು 222 ಕೋಟಿ ರೂ. ಅನುದಾನ.
• ಒಟ್ಟು 61 ಕ್ರೈಸ್ ವಸತಿ ಶಾಲೆಗಳಿಗೆ 1,292 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ಹಾಗೂ 213 ಕೋಟಿ ರೂ. ವೆಚ್ಚದಲ್ಲಿ ಕ್ರೈಸ್ ವಸತಿ ಶಾಲೆಗಳಿಗೆ ಶೈಕ್ಷಣಿಕ ಮೂಲಸೌಕರ್ಯ.
• ಸಮಾಜ ಕಲ್ಯಾಣ ಇಲಾಖೆಯಡಿ ಬರುವ ನಿಗಮಗಳಿಗೆ 2025-26 ನೇ ಸಾಲಿನಲ್ಲಿ 488 ಕೋಟಿ ರೂ. ಅನುದಾನ ನಿಗದಿ.
• ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿರುವ ಮೂಲಸೌಕರ್ಯ ವಂಚಿತ ಬುಡಕಟ್ಟುಗಳ ಜನಾಂಗದವರಿಗೆ ಮೂಲಸೌಕರ್ಯಗಳನ್ನು ಒದಗಿಸಲು 200 ಕೋಟಿ ರೂ.
• ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ನಿಗಮಗಳಿಗೆ 422 ಕೋಟಿ ರೂ. ಅನುದಾನ.
• ಮತ್ತು ಅರೆಅಲೆಮಾರಿ ಜನಾಂಗದವರ ಕಾಲೋನಿಗಳ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ.
• ಪ್ರಸ್ತುತ 250 ಮೌಲಾನಾ ಅಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ. ಪ್ರಸಕ್ತ ಸಾಲಿನಲ್ಲಿ 100 ಕೋಟಿ ರೂ. ಅನುದಾನ.
• ಅನ್ನಭಾಗ್ಯ ಯೋಜನೆಯಡಿ, ಸಹಾಯಧನದ ಬದಲಾಗಿ, 5 ಕೆ.ಜಿ. ಹೆಚ್ಚುವರಿ ಅಕ್ಕಿ ವಿತರಣೆ; 4.21 ಕೋಟಿ ಫಲಾನುಭವಿಗಳಿಗೆ ಅನುಕೂಲ.
• 80 ವರ್ಷ ಮೇಲ್ಪಟ್ಟ ಹಿರಿಯವರು ಮಾತ್ರ ಇರುವ ಮನೆಗಳಿಗೆ ಆಹಾರ ಧಾನ್ಯಗಳನ್ನು ತಲುಪಿಸುವ ʻಅನ್ನ ಸುವಿಧಾʼ ಯೋಜನೆ 75 ವಯಸ್ಸು ಮೇಲ್ಪಟ್ಟ ಹಿರಿಯ ನಾಗರಿಕರು ಇರುವ ಮನೆಗಳಿಗೂ ವಿಸ್ತರಣೆ.
• ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿರುವ AHP ಮನೆಗಳ ಫಲಾನುಭವಿಗಳಿಗೆ “Interest subvention” ಯೋಜನೆ ಜಾರಿ.
• ನೋಂದಾಯಿತ ಕಟ್ಟಡ ಕಾರ್ಮಿಕರು ಸಹಜ ಮರಣ ಹೊಂದಿದಲ್ಲಿ, ನೀಡುವ Ex-gratia ಮೊತ್ತ 1.5 ಲಕ್ಷ ರೂ.ಗೆ ಹೆಚ್ಚಳ ಮತ್ತು ಕೆಲಸದ ಸ್ಥಳದಲ್ಲಿ ಮರಣ ಹೊಂದುವ ಕಾರ್ಮಿಕರ ಅವಲಂಬಿತರಿಗೆ ನೀಡುವ ಪರಿಹಾರ ಮೊತ್ತ 8 ಲಕ್ಷ ರೂ.ಗೆ ಹೆಚ್ಚಳ.
• ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತ ಮಂಡಳಿಯ ಫಲಾನುಭವಿಗಳು 5 ಲಕ್ಷ ರೂ.ಗಳ ಚಿಕಿತ್ಸೆ ಮಿತಿಯನ್ನು ಪೂರ್ಣಗೊಳಿಸಿದ್ದಲ್ಲಿ ಮಂಡಳಿಯಿಂದ ಹೆಚ್ಚುವರಿಯಾಗಿ ವೈದ್ಯಕೀಯ ವೆಚ್ಚ ಮರುಪಾವತಿಗೆ ಕ್ರಮ.
• ಮಧುಗಿರಿ, ಇಂಡಿ, ಕಂಪ್ಲಿ, ರಾಯಚೂರು ಗ್ರಾಮೀಣ ಮತ್ತು ಸಿಂಧನೂರು ತಾಲ್ಲೂಕುಗಳಲ್ಲಿ ನೂತನ GTTC ಸ್ಥಾಪನೆ.
• ಗ್ರಾಮೀಣ ರಸ್ತೆ ಸಂಪರ್ಕ ಜಾಲ ಅಭಿವೃದ್ಧಿ ಪಡಿಸುವ 5200 ಕೋಟಿ ರೂ. ವೆಚ್ಚದ ಪ್ರಗತಿ ಪಥ ರಸ್ತೆ ಯೋಜನೆ ಪ್ರಸ್ತುತ ಸಾಲಿನಿಂದ ಅನುಷ್ಠಾನ.
• ಜಲ ಜೀವನ್ ಮಿಷನ್ ಯೋಜನೆಗೆ ಪ್ರಸ್ತುತ ಸಾಲಿನಲ್ಲಿ 6,050 ಕೋಟಿ ರೂ. ಅನುದಾನ.
• ʻಕಲ್ಯಾಣ ಪಥʼ ಯೋಜನೆಯಡಿ 1 ಸಾವಿರ ಕೋಟಿ ರೂ. ಮೊತ್ತದ 286 ಕಾಮಗಾರಿ ಶೀಘ್ರ ಪೂರ್ಣ.
• ಮೂಲಭೂತ ಸೌಕರ್ಯ ನಿರ್ವಹಣೆಗೆ ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಆಧಾರಿತ ಮೊಬೈಲ್ ಮತ್ತು ವೆಬ್ ತಂತ್ರಾಂಶ ಅಭಿವೃದ್ಧಿ.
• ಕಲ್ಯಾಣ ಕರ್ನಾಟಕ ಪ್ರದೇಶಗಳ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಮೊತ್ತದ ಯೋಜನೆ
• ಬಿ.ಬಿ.ಎಂ.ಪಿ.ಯ ವತಿಯಿಂದ ಕೈಗೊಂಡಿರುವ ವಿವಿಧ ಸುಧಾರಣಾ ಕ್ರಮಗಳಿಂದಾಗಿ 4556 ರೂ.ಕೋಟಿಗಳ ಆದಾಯ ಗಳಿಕೆ. ಜಾಹೀರಾತು ಉಪ-ವಿಧಿಗಳು 2025ರ ಅನುಷ್ಠಾನದಿಂದ ವಾರ್ಷಿಕ 750 ಕೋಟಿ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ.
• 40000 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಸುರಂಗ ಮಾರ್ಗ (Tunnel) ಕಾರಿಡಾರ್ ನಿರ್ಮಾಣಕ್ಕೆ ಸರ್ಕಾರದಿಂದ ಬಿ.ಬಿ.ಎಂ.ಪಿಗೆ 19 ಸಾವಿರ ಕೋಟಿ ರೂ. ಗ್ಯಾರಂಟಿ ಒದಗಿಸಲಾಗುವುದು.
• ನಮ್ಮ ಮೆಟ್ರೋ ಹಂತ-3 ಯೋಜನೆಯೊಂದಿಗೆ 40.50 ಕಿ.ಮಿ. ಉದ್ದದ ಡಬಲ್-ಡೆಕ್ಕರ್ ಮೇಲು ಸೇತುವೆಯನ್ನು 8916 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.
• “ಬ್ರ್ಯಾಂಡ್ ಬೆಂಗಳೂರು” ಯೋಜನೆಯಡಿ, 1,800 ಕೋಟಿ ರೂ. ಮೊತ್ತದ ೨೧ ಯೋಜನೆಗಳಿಗೆ ಅನುಮೋದನೆ. 413 ಕೋಟಿ ರೂ. ವೆಚ್ಚದಲ್ಲಿ "ಸಮಗ್ರ ಆರೋಗ್ಯ ಯೋಜನೆ" ಜಾರಿ.
• ಬೆಂಗಳೂರು ನಗರದಲ್ಲಿ ವ್ಯವಸ್ಥಿತ ಒಳಚರಂಡಿ ಜಾಲ ಮತ್ತು ಎಸ್.ಟಿ.ಪಿ ನಿರ್ಮಿಸಲು 3 ಸಾವಿರ ಕೋಟಿ ರೂ. ಆರ್ಥಿಕ ನೆರವು.
• ಮಹಾನಗರ ಪಾಲಿಕೆಗಳಲ್ಲಿ ಮೂಲ ಸೌಕರ್ಯ ಅಭಿವೃದ್ದಿಗೆ UIDF ಮೂಲಕ 600 ಕೋಟಿ ರೂ. ಅನುದಾನ.
• ರಾಮನಗರ ಮತ್ತು ಉಲ್ಲಾಳಕ್ಕೆ 705 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಜಾರಿ.
• ಅಮೃತ್-2.0 ಯೋಜನೆಯಡಿ 233 ಕುಡಿಯುವ ನೀರು ಯೋಜನೆ ಅನುಷ್ಠಾನ.
• ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ 319 ಕೋಟಿ ರೂ. ಅನುದಾನ ಬಿಡುಗಡೆ.
• 2025-26ನೇ ಸಾಲಿನಲ್ಲಿ, ರೈಲ್ವೇ ಯೋಜನೆಗಳಿಗೆ 600 ಕೋಟಿ ರೂ. ಮೀಸಲು.
• ಬೆಂಗಳೂರು ಉಪನಗರ ರೈಲ್ವೆ ಯೋಜನೆ 15,767 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ.
• ದೇವನಹಳ್ಳಿಯಲ್ಲಿ 407 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಸಿಗ್ನೇಚರ್ ಬಿಸಿನೆಸ್ ಪಾರ್ಕ್ ಅಭಿವೃದ್ಧಿ.
• 1,೮೫0 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ ೨,೫೭೦ ಕಿ.ಮೀ. ಜಿಲ್ಲಾ ರಸ್ತೆಗಳನ್ನು ರೂ. ೪,೮೪೮ ಕೋಟಿ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಕ್ರಮ.
• ಕೆಶಿಪ್-4 ಯೋಜನೆಯಡಿ 5,736 ಕೋಟಿ ರೂ. ವೆಚ್ಚದಲ್ಲಿ 875 ಕಿ.ಮೀ ಉದ್ದದ ೧೧ ರಸ್ತೆಗಳನ್ನು ಅಭಿವೃದ್ದಿಗೊಳಿಸಲು ಕ್ರಮ.
• “ಗೃಹ ಜ್ಯೋತಿ” ಯಡಿ ಇದುವರೆಗೆ 9657 ಕೋಟಿ ರೂ. ಸಹಾಯಧನ ನೀಡಿದ್ದು, ಈ ವರ್ಷ 10,100 ಕೋಟಿ ರೂ.ಗಳನ್ನು ಒದಗಿಸಲಾಗುವುದು.
• ನೀರಾವರಿ ಪಂಪ್‌ಸೆಟ್ ವಿದ್ಯುತ್ ಸರಬರಾಜಿಗೆ ಸಹಾಯಧನದಡಿ 33.84 ಲಕ್ಷ ಪಂಪ್‌ಸೆಟ್‌ಗಳಿಗೆ 16,021 ಕೋಟಿ ರೂ. ನೆರವು.
• ಪಿಪಿಪಿ ಮಾದರಿಯಲ್ಲಿ 1,846 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆ.
• ಗಂಗಾ ಕಲ್ಯಾಣ ಯೋಜನೆಯಡಿ 25,971 ಕೊಳವೆ ಬಾವಿಗಳ ಹಾಗು 6,887 ಕುಡಿಯುವ ನೀರಿನ ಯೋಜನೆಗಳ ವಿದ್ಯುದೀಕರಣ, 1.94 ಲಕ್ಷ ವಿತರಣಾ ಪರಿವರ್ತಕಗಳ ಅಳವಡಿಕೆ.
• 21911 ಕೋಟಿ ರೂ. ಹೂಡಿಕೆಯೊಂದಿಗೆ ಪ್ರಾರಂಭವಾದ Foxconn ಸಂಸ್ಥೆಗೆ ಮೊಬೈಲ್ ಫೋನ್ ಗಳ ಉತ್ಪಾದನಾ ಫಟಕಕ್ಕೆ 6970 ಕೋಟಿ ರೂ. ಮೌಲ್ಯದ ಪ್ರೋತ್ಸಾಹಕ ನೀಡಲು ಕ್ರಮ. ಇದರಿಂದ 50ಸಾವಿರ ಉದ್ಯೋಗ ಸೃಜನೆಯ ನಿರೀಕ್ಷೆ.
• MSME ವಲಯಕ್ಕೆ ಅಗತ್ಯವಾದ ಬೆಂಬಲವನ್ನು ಒದಗಿಸುವ ಉದ್ದೇಶದಿಂದ ಪ್ರತ್ಯೇಕ MSME ನೀತಿ ಜಾರಿ.
• ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ 2,500 ಪ್ರಾಚೀನ ತಾಳೆಗರಿಯ ಹಸ್ತಪ್ರತಿಗಳ ಡಿಜಿಟಲೀಕರಣ ಯೋಜನೆ
• ಮೈಸೂರಿನ ರಂಗಾಯಣದ ಕಾರ್ಯಚಟುವಟಿಕೆಗಳಿಗೆ 2 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.