logo

ರೋಟರಿಯಿಂದ ನಾಯಕತ್ವ ಕೌಶಲ್ಯ ಅಭಿವೃದ್ತದಿ ತರಬೇತಿ ಕಾರ್ಯಗಾರ.

ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಬ್ಯಾಡಗಿ ಮತ್ತು ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ ಸ್ನೇಹ ಸದನ ಬ್ಯಾಡಗಿ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಕೌಶಲ್ಯ ತರಬೇತಿ ಕಾರ್ಯಗಾರ ನಡೆಯಿತು. ಸಂಪನ್ಮೂಲ ತರಬೇತುದಾರರಾಗಿ ಆಗಮಿಸಿದ್ದ ಬಿಸಲಹಳ್ಳಿ ಪ್ರೌಢ ಶಾಲೆಯ ಶಿಕ್ಷಕರಾದ ಶ್ರೀಧರ ಬಿ ಹಣಗಿ ಮಕ್ಕಳಿಗೆ ನಾಯಕತ್ವ ಗುಣ ಎಂದರೇನು ಅದನ್ನು ಹೇಗೆ ವಿದ್ಯಾರ್ಥಿಗಳಲ್ಲಿ ಅಳವಡಿಸಿಕೊಳ್ಳಬೇಕು, ಸಮಾಜದಲ್ಲಿ ನಾಯಕರಾಗಿ ಹೇಗೆ ಹೊರಹೊಮ್ಮಬೇಕು ಎಂಬುದರ ಬಗ್ಗೆ ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಅಸಿಸ್ಟೆಂಟ್ ಗವರ್ನರ್ ಶ್ರೀ ಮಂಜುನಾಥ ಉಪ್ಪಾರ ಮಾತನಾಡಿ ನಮ್ಮ ರೋಟರಿ ಕ್ಲಬ್ ವತಿಯಿಂದ ಪ್ರತಿ ವರ್ಷವೂ ಇಂತಹ ಕಾರ್ಯಕ್ರಮಗಳು, ಶಿಬಿರಗಳು, ಜಾಗೃತಿ ಸಮಾರಂಭಗಳು, ಶೈಕ್ಷಣಿಕ ಮೂಲ ಸೌಕರ್ಯಗಳ ಪೂರೈಕೆ, ಆರೋಗ್ಯ ಸಂಬಂಧಿಗಳು ಶಿಬಿರಗಳು ನಡೆಯುತ್ತವೆ. ಇದರಲ್ಲಿ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳುವುದು ಹೇಗೆ ಎನ್ನುವುದನ್ನು ಇಂತಹ ಕಾರ್ಯಕ್ರಮಗಳ ಮೂಲಕ ಹಮ್ಮಿಕೊಂಡು ಉತ್ತಮ ಪರಿಣಿತಿ ಹೊಂದಿದ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕೊಡಿಸಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವುದು, ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ನಡೆಸುವುದು ನಮ್ಮ ಸಂಸ್ಥೆಯ ಅತಿ ಮುಖ್ಯ ಕಾರ್ಯಗಳಲ್ಲಿ ಒಂದಾಗಿದೆ ಎಂದು ತಿಳಿಸಿ ತರಬೇತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಸ್ನೇಹ ಸದನದ ನಿರ್ದೇಶಕಿ ಸಿಸ್ಟರ್ ರೂಪ ಮಾತನಾಡಿ ನಾವು ಯಾವುದೇ ಶಿಬಿರ ಹಾಗೂ ಕಾರ್ಯಕ್ರಮಗಳು ನಡೆಸಲು ರೋಟರಿ ಕ್ಲಬ್ಬಿನ ಅಸಿಸ್ಟೆಂಟ್ ಗವರ್ನರ್ ಶ್ರೀ ಮಂಜುನಾಥ ಉಪ್ಪಾರ ಬಳಿ ವಿನಂತಿಸಿ ಕೊಂಡಾಗ ತಕ್ಷಣವೇ ಅದಕ್ಕೆ ಸ್ಪಂದಿಸಿ ಸಹಾಯ ಸಹಕಾರ ನೀಡಿ ಅನೇಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಸಹಕಾರಿಯಾಗಿದ್ದಾರೆ ಎಂದು ಅಭಿನಂದಿಸಿ ಮಕ್ಕಳಲ್ಲಿ ಏಕಾಗ್ರತೆ ಹೇಗೆ ಮೂಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶಿವನಾಯಕ ರೋಟರಿ ಕ್ಲಬ್ ಹಾಗೂ ಸ್ನೇಹ ಸದನದವರು ಇಂದು ನಮ್ಮ ಶಾಲೆಯನ್ನು ಗುರುತಿಸಿ ಈ ಕಾರ್ಯಕ್ರಮ ಹಮ್ಮಿಕೊಂಡು ಈ ತರಬೇತಿ ಮೂಲಕ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ನಾಯಕತ್ವ ಅಳವಡಿಸಿಕೊಳ್ಳುವ ಬಗ್ಗೆ ಉಪನ್ಯಾಸ ಕೊಟ್ಟಿರುವುದು ಹೆಮ್ಮೆ ತಂದಿದೆ ಮತ್ತು ಮಕ್ಕಳ ಉತ್ತಮ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದು ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಎಸ್ ಎಂ ಬೂದಿಹಾಳಮಠ, ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ಸದಸ್ಯರಾದ ಕಿರಣ ಮಾಳೇನಹಳ್ಳಿ, ಸ್ನೇಹ ಸದನದ ನಿರ್ದೇಶಕಿ ಸಿಸ್ಟರ್ ರೂಪ ಮತ್ತು ಸಹಾಯಕಿ ಸುವರ್ಣ ಹಾಗೂ ಸರ್ಕಾರಿ ಪ್ರೌಢಶಾಲೆ ಕದರಮಂಡಲಗಿಯ ಮುಖ್ಯೋಪಾಧ್ಯಾಯರಾದ ಶ್ರೀ ಶಿವನಾಯಕ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

0
803 views