
ಹಾವೇರಿ: ಖಾಸಗಿ ಆಸ್ಪತ್ರೆಗೆ ಬಂದ ಮಹಿಳೆ ವೈದ್ಯರ ನಿರ್ಲಕ್ಷ್ಯಕ್ಕೆ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಪಿಸಿ ರೊಚ್ಚಿಗೆದ್ದು ಪ್ರತಿಭಟನೆ
ಬರುವಾಗ ಆರಾಮವಾಗಿ ನಡೆದುಕೊಂಡು ಬಂದಿದ್ದಳು
ವೈದ್ಯರು ಪರೀಕ್ಷೆ ಮಾಡದೆ ಇಂಜೆಕ್ಷನ್ ಮಾಡಿದ್ದೇ ಕಾರಣ?
ನಮಗೆ ನ್ಯಾಯ ಬೇಕು ಎಂದು ಸಂಬಂಧಿಕರ ಪ್ರತಿಭಟನೆ
ಹಾವೇರಿ: ಖಾಸಗಿ ಆಸ್ಪತ್ರೆಗೆ ಬಂದ ಮಹಿಳೆ ವೈದ್ಯರ ನಿರ್ಲಕ್ಷ್ಯಕ್ಕೆ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಪಿಸಿ ಸಂಬಂಧಿಕರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಪೋಲಿಸರು ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.
ಸಮೀನಾ ಬಾನು (29) ಮೃತ ಮಹಿಳೆ. ಈಕೆ ಅಪೆಂಡಿಕ್ಸ್ ಇದೆ ಎಂದು ಬ್ಯಾಡಗಿ ಸರ್ಕಾರಿ ಆಸ್ಪತ್ರೆಯಿಂದ ನಗರದ ವೀರಾಪೂರ ಆಸ್ಪತ್ರೆಗೆ ದಾಖಲಾಗಿದ್ದರು.
ವೈದ್ಯರು ಪರೀಕ್ಷೆ ಮಾಡದೆ ಇಂಜೆಕ್ಷನ್ ಮಾಡಿದ್ದೇ ಸಮೀನಾ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಹಿಳೆ ಬೇಡ ಎಂದರೂ ಇಂಜೆಕ್ಷನ್ ಮಾಡಿದ್ದು ನಮ್ಮ ಮಗಳ ಸಾವಿಗೆ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರೇ ಕಾರಣ. ಬರುವಾಗ ಆರಾಮವಾಗಿ ನಡೆದುಕೊಂಡು ಬಂದಿದ್ದಳು. ಈಗ ನಮ್ಮ ಸಮೀನಾ ಬಾನುಳನ್ನು ಸಾಯಿಸಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.
ಇಂದು ಸಂಜೆ ಸಮೀನಾ ಬಾನು ನಗರದ ವೀರಾಪೂರ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಇಂಜೆಕ್ಷನ್ ಕೊಟ್ಟ ಮೇಲೆ ಸಮೀನಾ ಪ್ರಾಣ ಬಿಟ್ಟಿದ್ದು ಆಸ್ಪತ್ರೆಯ ಬಳಿ ಮೃತ ಮಹಿಳೆಯ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿಯ ಶಹರ ಪೊಲೀಸರು ಪ್ರತಿಭಟನಾಕಾರರನ್ನು ಹರಸಾಹಸ ಪಟ್ಟು ನಿಯಂತ್ರಿಸಿದ್ದಾರೆ.